
ಕುಶಾಲನಗರ (ಜ.17): ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಸಮೀಪದ ಹಾರಂಗಿ ಹಿನ್ನೀರಿನಲ್ಲಿ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಧಾರುಣ ಘಟನೆ ಶನಿವಾರ ನಡೆದಿದೆ. ಮೃತರನ್ನು ಸುಂಟಿಕೊಪ್ಪದ ಪಂಪ್ ಹೌಸ್ ನಿವಾಸಿಗಳಾದ ಮಹಮ್ ರಹೀಜ್ (16) ಮತ್ತು ಮಹಮದ್ ನಿಹಾಲ್ (16) ಎಂದು ಗುರುತಿಸಲಾಗಿದೆ.
ಮೃತಪಟ್ಟ ಇಬ್ಬರು ಬಾಲಕರು ಸುಂಟಿಕೊಪ್ಪದ ಚೆನ್ನಮ್ಮ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾಗಿದ್ದರು. ಕಾಲೇಜು ಮುಗಿದ ನಂತರ ಸ್ನೇಹಿತರಿಬ್ಬರೂ ಸೇರಿ ಈಜಾಡಲು ಹಾರಂಗಿ ಹಿನ್ನೀರು ಹೊಳೆಗೆ ತೆರಳಿದ್ದರು. ನೀರಿನ ಆಳ ಅರಿಯದೆ ಇಬ್ಬರೂ ನೀರಿಗೆ ಇಳಿದಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸುಂಟಿಕೊಪ್ಪ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಕ್ಷಣವೇ ಮುಳುಗು ತಜ್ಞರನ್ನು ಕರೆಸಿ ಕಾರ್ಯಾಚರಣೆ ಆರಂಭಿಸಲಾಯಿತು. ಸುಮಾರು ಗಂಟೆಗಳ ಕಾಲ ನಡೆಸಿದ ಹುಡುಕಾಟದ ನಂತರ ಇಬ್ಬರು ಬಾಲಕರ ಮೃತದೇಹಗಳನ್ನು ನೀರಿನಿಂದ ಹೊರತೆಗೆಯಲಾಗಿದೆ.
ಮೃತ ಬಾಲಕರು ಸುಂಟಿಕೊಪ್ಪದ ಪಂಪ್ ಹೌಸ್ ಬಡಾವಣೆ ನಿವಾಸಿಗಳಾಗಿದ್ದು, ಮಕ್ಕಳ ಸಾವಿನ ಸುದ್ದಿ ತಿಳಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈಜಲು ಹೋದ ಮಕ್ಕಳು ಹೆಣವಾಗಿ ಬಂದಿರುವುದನ್ನು ಕಂಡು ಗ್ರಾಮಸ್ಥರು ಮರುಗುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ನದಿ ಅಥವಾ ಹಿನ್ನೀರಿನಂತಹ ಅಪಾಯಕಾರಿ ಪ್ರದೇಶಗಳಲ್ಲಿ ಈಜಲು ಇಳಿಯುವಾಗ ಎಚ್ಚರಿಕೆ ವಹಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ