ಹಣಕಾಸು ವ್ಯವಹಾರ ಸಂಬಂಧ ಯುವಕನೊಬ್ಬನನ್ನು ಅಪಹರಿಸಿ ಹಲ್ಲೆ ಮಾಡಿದ ಆರೋಪದಡಿ ಕನ್ನಡಪರ ಸಂಘಟನೆ ಅಧ್ಯಕ್ಷ ಪ್ರಕಾಶ್ ಸೇರಿ ಮಂದಿ ವಿರುದ್ಧ ಶಂಕರಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು (ಜು.1): ಹಣಕಾಸು ವ್ಯವಹಾರ ಸಂಬಂಧ ಯುವಕನೊಬ್ಬನನ್ನು ಅಪಹರಿಸಿ ಹಲ್ಲೆ ಮಾಡಿದ ಆರೋಪದಡಿ ಕನ್ನಡಪರ ಸಂಘಟನೆ ಅಧ್ಯಕ್ಷ ಪ್ರಕಾಶ್ ಸೇರಿ ಮಂದಿ ವಿರುದ್ಧ ಶಂಕರಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಂಕರಪುರ ಚಿಕ್ಕಣ್ಣ ಗಾರ್ಡನ್ ನಿವಾಸಿ ಮಂಜುನಾಥ್(30) ನೀಡಿದ ದೂರಿನ ಮೇರೆಗೆ ಪ್ರಕಾಶ್ ಅಲಿಯಾಸ್ ಕನ್ನಡ ಪ್ರಕಾಶ್, ಮಂಜುಳಾ ಸೇರಿ ಆರು ಮಂದಿ ವಿರುದ್ಧ ಎಫ್‌ಐರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
undefined
ಕಿಡ್ನಾಪ್ ಪ್ರಕರಣ: ಅಪಹರಣಕ್ಕೆ ಒಳಗಾದವನೇ ಮಹಾ ವಂಚಕ! ಮೋಸ ಹೋದವರಿಂದಲೇ ಅಪಹರಣ!
ಪ್ರಕರಣದ ವಿವರ:
ದೂರುದಾರ ಖಾಸಗಿ ಬ್ಯಾಂಕ್ ಉದ್ಯೋಗಿ ಮಂಜುನಾಥ, ಶ್ರೀನಿವಾಸನಗರ ನಿವಾಸಿ ಮಂಜುಳಾ ಅವರಿಂದ ₹8 ಲಕ್ಷ ಸಾಲ ಪಡೆದಿದ್ದರು. ಈ ಪೈಕಿ ₹5 ಲಕ್ಷ ವಾಪಾಸ್ ನೀಡಿದ್ದರು. ಬಾಕಿ ₹3 ಲಕ್ಷಕ್ಕೆ ಚೆಕ್ ನೀಡಿದ್ದರು. ಈ ಚೆಕ್ ಬೌನ್ಸ್ ಆದ ಹಿನ್ನೆಲೆಯಲ್ಲಿ ಮಂಜುಳಾ, ಮಂಜುನಾಥ್ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.
ಅಪಹರಿಸಿ ಹಲ್ಲೆ ಆರೋಪ:
ಈ ನಡುವೆ ಮಂಜುಳಾ, ಕನ್ನಡಪರ ಸಂಘಟನೆ ಅಧ್ಯಕ್ಷ ಪ್ರಕಾಶ್‌ನನ್ನು ಭೇಟಿಯಾಗಿ ಮಂಜುನಾಥ್‌ನಿಂದ ಹಣ ವಸೂಲಿ ಮಾಡಿಕೊಡುವಂತೆ ಕೇಳಿಕೊಂಡಿದ್ದರು. ಅದರಂತೆ ಕಳೆದ ಏ.4ರಂದು ಸಂಜೆ ಕೊರಿಯರ್ ಪ್ರತಿನಿಧಿ ಸೋಗಿನಲ್ಲಿ ಮಂಜುನಾಥ್‌ಗೆ ಕರೆ ಮಾಡಿದ್ದ ಅಪರಿಚಿತ ಮಹಿಳೆ, ನಿಮ್ಮ ಹೆಸರಿಗೆ ಕೋರಿಯರ್ ಬಂದಿದ್ದು, ಶಂಕರಪುರದ ಸಾರಸ್ವತ ಕೋ ಆಪರೇಟಿವ್ ಬ್ಯಾಂಕ್ ಬಳಿ ಬರುವಂತೆ ಕರೆದಿದ್ದರು. ಅದರಂತೆ ಮಂಜುನಾಥ್ ಅಲ್ಲಿಗೆ ಹೋದಾಗ ಕಾರೊಂದು ಬಂದಿದ್ದು, ಮೂವರು ಮಹಿಳೆಯರು ಮಂಜುನಾಥ್‌ನನ್ನು ಬಲವಂತವಾಗಿ ಎಳೆದು ಕಾರಿನಲ್ಲಿ ಕೂರಿಸಿಕೊಂಡಿದ್ದಾರೆ.
ಕೂಡಿ ಹಾಕಿ ಹಣಕ್ಕೆ ಬೇಡಿಕೆ:
ಆ ಕಾರಿನಲ್ಲಿ ಮಂಜುನಾಥ್‌ಗೆ ಪರಿಚಯವಿದ್ದ ಪ್ರಕಾಶ್ ಮತ್ತು ಅವರ ಚಾಲಕ ಸಹ ಇದ್ದರು. ಈ ವೇಳೆ ನೇರ ಶ್ರೀನಿವಾಸನಗರದ ಮಂಜುಳಾ ಮನೆಗೆ ಮಂಜುನಾಥ್‌ನನ್ನು ಕರೆದೊಯ್ದು ಕೂಡಿ ಹಾಕಿ ಹಣ ಕೊಡುವಂತೆ ಬೆದರಿಕೆ ಹಾಕಿದ್ದಾರೆ. ಬಳಿಕ ಬಾಪೂಜಿನಗರದ ಪ್ರಕಾಶ್ ಕಚೇರಿಗೆ ಕರೆದೊಯ್ದು ಅಲ್ಲಿಯೂ ಸಹ ಹಣ ಕೊಡುವಂತೆ ಬೆದರಿಕೆ ಹಾಕಿ ಹಲ್ಲೆ ನಡೆಸಿ ಬಿಟ್ಟು ಕಳುಹಿಸಿದ್ದಾರೆ.
ಈ ಘಟನೆ ಬಳಿಕವೂ ಮಂಜುಳಾ, ಪ್ರಕಾಶ್ ಕಾರು ಚಾಲಕ ವೆಂಕಟಾಚಲಪತಿ, ಮಂಜುನಾಥ್‌ಗೆ ಕರೆ ಮಾಡಿ ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಜೀವ ಭಯದಿಂದ ಕೆಲ ದಿನ ಸುಮ್ಮನಿದ್ದ ಮಂಜುನಾಥ್ ಬಳಿಕ ಇವರ ಕಾಟತಾಳಲಾರದೆ ಶಂಕರಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕನ್ನಡಿಗರಿಗೆ ನೌಕರಿ ಕೇಳಿ ಇಂದು ಕರವೇ ಹೋರಾಟ; ಕನ್ನಡತಿ ಪೂಜಾ ಗಾಂಧಿ ಸೇರಿ ಸಿನಿತಾರೆಯರು ಸಾಥ್
ಕನ್ನಡಪರ ಸಂಘಟನೆ ಅಧ್ಯಕ್ಷ ಪ್ರಕಾಶ್ ಅಪರಾಧ ಹಿನ್ನೆಲೆವುಳ್ಳವನಾಗಿದ್ದಾನೆ. ಈತನ ವಿರುದ್ಧ ಈ ಹಿಂದೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆಗೆ ಯತ್ನ, ಬಸ್‌ಗಳಿಗೆ ಬೆಂಕಿ ಹಚ್ಚಲು ಯತ್ನ, ದೊಂಬಿ ಸೇರಿದಂತೆ ಏಳೆಂಟು ಪ್ರಕರಣಗಳು ದಾಖಲಾಗಿವೆ. ಅಂತೆಯೇ ಪ್ರಕಾಶ್ ವಿರುದ್ಧ ಈ ಹಿಂದೆ ಬ್ಯಾಟರಾಯನಪುರ ಪೊಲೀಸ್ ಠಾಣೆಯ ರೌಡಿ ಶೀಟರ್ ತೆರೆಯಲಾಗಿದೆ ಎಂದು ತಿಳಿದು ಬಂದಿದೆ.