ಮಾ.4ರಂದು ಬೆಳಿಗ್ಗೆ ಕಡಬದ ಸರಕಾರಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳನ್ನು ಗುರಿಯಾಗಿಸಿ ನಡೆದ ಆ್ಯಸಿಡ್ ದಾಳಿಗೆ ಸಂಬಂಧಿಸಿ ಸಿಸಿ ಟಿವಿಯಲ್ಲಿ ಮಹತ್ವದ ಸಾಕ್ಷಿಗಳು ಲಭ್ಯವಾಗಿವೆ.
ಉಪ್ಪಿನಂಗಡಿ (ಮಾ.6): ಮಾ.4ರಂದು ಬೆಳಿಗ್ಗೆ ಕಡಬದ ಸರಕಾರಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳನ್ನು ಗುರಿಯಾಗಿಸಿ ನಡೆದ ಆ್ಯಸಿಡ್ ದಾಳಿಗೆ ಸಂಬಂಧಿಸಿ ಸಿಸಿ ಟಿವಿಯಲ್ಲಿ ಮಹತ್ವದ ಸಾಕ್ಷಿಗಳು ಲಭ್ಯವಾಗಿವೆ.
ಪ್ರಕರಣದ ಆರೋಪಿ ಎಂಬಿಎ ವಿದ್ಯಾರ್ಥಿ ಅಭಿನ್ ಕೃತ್ಯ ಎಸಗಲೆಂದು ಭಾನುವಾರ ತನ್ನ ಹುಟ್ಟೂರಾದ ಕೇರಳದಿಂದ ಮಂಗಳೂರಿಗೆ ರೈಲಿನಲ್ಲಿ ಬಂದಿದ್ದ. ಅಭಿನ್ ಕೇರಳದ ಮಲಪ್ಪುರಂ ಜಿಲ್ಲೆಯ ನೆಲಂಬೂರು ತಾಲೂಕು ನಿವಾಸಿ. ಭಾನುವಾರ ಮಧ್ಯಾಹ್ನ ರೈಲಿನ ಮೂಲಕ ನೆಲಂಬೂರುನಿಂದ ಹೊರಟ ಆತ ರಾತ್ರಿ ವೇಳೆ ಮಂಗಳೂರು ರೈಲು ನಿಲ್ದಾಣ ತಲುಪಿದ್ದ. ಅಲ್ಲಿಯೇ ಬೆಳಿಗ್ಗೆಯವರೆಗೆ ಕಾಲ ಕಳೆದ ಆತ ಬಳಿಕ ಮಂಗಳೂರಿನಿಂದ ಬಸ್ಸು ಹಿಡಿದು ಕಡಬಕ್ಕೆ ಆಗಮಿಸಿದ್ದ ಎನ್ನಲಾಗಿದೆ.
ಕಡಬ: ಕಾಲೇಜು ಆವರಣದಲ್ಲಿ ಕುಳಿತಿದ್ದ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ!
ಅಬಿನ್ ಕಾಲೇಜ್ ಪ್ರವೇಶಿಸುವುದಕ್ಕೆ ಮುಂಚೆ ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ಸಮವಸ್ತ್ರವನ್ನು ಹೋಲುವ ಬಿಳಿ ಅಂಗಿ, ನೀಲಿ ಪ್ಯಾಂಟ್ ಧರಿಸಿಕೊಂಡು, ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದಾನೆ. ಈ ಬಟ್ಟೆಯನ್ನು ಆತ ಕಡಬದ ಯಾವುದೋ ಸ್ಥಳದಲ್ಲಿ ಧರಿಸಿದ್ದ. ಕಪ್ಪು ಪ್ಯಾಂಟ್ ಹಾಗೂ ಕಪ್ಪು ಅಂಗಿ ಧರಿಸಿಕೊಂಡು ಮಂಗಳೂರಿನಿಂದ ಬಂದಿದ್ದ ಆತ, ಕಡಬ ಪೇಟೆಯಲ್ಲಿರುವ ಬೇಕರಿಯೊಂದರಲ್ಲಿ ತನ್ನಲ್ಲಿದ್ದ ಎರಡು ಮೊಬೈಲ್ ಫೋನ್ ಗಳನ್ನು ಚಾರ್ಜ್ ಗಿಟ್ಟಿದ್ದ. ಈ ವೇಳೆಯೂ ಅತ ಕಪ್ಪು ಫ್ಯಾಂಟ್ ಹಾಗೂ ಕಪ್ಪು ಅಂಗಿ ಧರಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೇಕರಿಗೆ ಆತ ಬೆಳಗ್ಗಿನ ಜಾವ 8 ಗಂಟೆ ಸುಮಾರಿಗೆ ಬಂದಿದ್ದಾನೆ.
ದುಷ್ಕೃತ್ಯ ಎಸಗಲು ಕೆಲ ಸಮಯದಿಂದ ಸಂಚು ರೂಪಿಸಿದ್ದ ದಾಳಿಕೋರನು, ಯೂನಿಫಾರ್ಮ್ ಹೋಲುವ ಬಣ್ಣದ ತನಗೊಪ್ಪುವ ಬಟ್ಟೆಯನ್ನು ಈ ಉದ್ದೇಶಕ್ಕಾಗಿಯೇ ಕೇರಳದಲ್ಲಿ ಹೊಲಿಸಿ ತಂದಿದ್ದ ಎನ್ನಲಾಗಿದೆ. ಸಂತ್ರಸ್ತ ವಿದ್ಯಾರ್ಥಿನಿ ಕಲಿಯುತ್ತಿದ್ದ ಕಡಬದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾರ್ಚ್ 1 ರಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗ ಅಂತಿಮ ಪರೀಕ್ಷೆ ನಡೆಯುತ್ತಿದೆ. ಈ ಕಾಲೇಜು ಸೇರಿದಂತೆ ವಲಯದ ಮೂರು ಕಾಲೇಜಿನ ವಿದ್ಯಾರ್ಥಿಗಳು ಅದು ಪರೀಕ್ಷಾ ಕೇಂದ್ರವಾಗಿತ್ತು. ಹೀಗಾಗಿ ಪರೀಕ್ಷೆ ಸಮಯ ಈ ಕಾಲೇಜಿಗೆ ಉಳಿದ ಕಾಲೇಜ್ ವಿದ್ಯಾರ್ಥಿಗಳು ಬರುವ ಕಾರಣ ಪಕ್ಕನೇ ಇವನ ಬಗ್ಗೆ ಅನುಮಾನ ಉಂಟಾಗಲು ಸಾಧ್ಯವಿಲ್ಲ. ಹೀಗಾಗಿ ಯಾರಿಗೂ ಅನುಮಾನ ಬಾರದಂತೆ ಕೃತ್ಯ ಎಸಗಲು ಆತ ಎಕ್ಸಾಂ ದಿನವನ್ನೆ ಆಯ್ಕೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.
‘ನಮ್ಮ ಶಾಲೆ-ನಮ್ಮ ಜವಾಬ್ದಾರಿ’ ಕಾರ್ಯಕ್ರಮ: ತಾವು ಓದಿದ ಶಾಲೆಗೆ 10 ಲಕ್ಷ ದೇಣಿಗೆ ನೀಡಿದ ಸಿಎಂ ಸಿದ್ದರಾಮಯ್ಯ
ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಒಳಗಡೆ ತೆರಳುವ ಕೊನೆಯ ಕ್ಷಣವನ್ನೆ ಕೃತ್ಯ ಎಸಗಲು ಬಳಸಿರುವುದರ ಹಿಂದೆಯೂ ತಂತ್ರಗಾರಿಕೆ ಇತ್ತು ಎನ್ನಲಾಗಿದೆ. ವಿದ್ಯಾರ್ಥಿಗಳೆಲ್ಲ ಪರೀಕ್ಷಾ ಹಾಲ್ ಗೆ ತೆರಳುವ ತರಾತುರಿಯಲ್ಲಿರುವುದರಿಂದ ಹಾಗೂ ಶಿಕ್ಷಕರು ಎಕ್ಸಾಂಗೆ ಕೊನೆ ಕ್ಷಣದ ತಯಾರಿಯಲ್ಲಿ ಮಗ್ನವಾಗಿರುವುದರಿಂದ ಕೃತ್ಯ ಎಸಗಿ ಪರಾರಿಯಾಗಬಹುದು ಹವಣಿಕೆಯಲ್ಲಿ, ಹಾಲ್ ಗೆ ತೆರಳುವ ಕೊನೆ ಕ್ಷಣವನ್ನೆ ಕೃತ್ಯಕ್ಕೆ ಆಯ್ಕೆ ಮಾಡಿದ್ದ.
ಕಡಬದಿಂದಲೇ ಖರೀದಿಸಿದ್ದ ಆ್ಯಸಿಡ್: ಬೆಳಿಗ್ಗೆ 7.30ರ ಸುಮಾರಿಗೆ ಬಂದಿಳಿದ ಆರೋಪಿಯು ಬಳಿಕ ಕಡಬ ಪೇಟೆಯ ಅಂಗಡಿಯೊಂದರಿಂದಲೇ ಆ್ಯಸಿಡ್ ಖರೀದಿಸಿದ್ದ. ಈ ಬಗ್ಗೆ ಆರೋಪಿಯು ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ. ಕಡಬ ತಾಲೂಕಿನ ರೆಂಜಲಾಡಿ ನಿವಾಸಿಯಾಗಿರುವ ಪ್ರಧಾನ ಸಂತ್ರಸ್ತೆಯನ್ನು ಕಳೆದ ಎರಡು ವರ್ಷಗಳಿಂದ ಆರೋಪಿ ಪೀತಿಸುತ್ತಿದ್ದ ಎನ್ನಲಾಗಿದೆ. ವಿದ್ಯಾರ್ಥಿನಿಯ ತಾಯಿ ಮೂಲತಃ ಕೇರಳದವರು. ಆರೋಪಿ ಅಬಿನ್ ಕೂಡಾ ಆಕೆಯ ಮನೆಯ ಹತ್ತಿರದ ನಿವಾಸಿ. ವಿದ್ಯಾರ್ಥಿನಿಯ ಸಂಬಂಧಿಕರು ಆರೋಪಿಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು. ಅವರ ಮುಖಾಂತರ ಸಂತ್ರಸ್ತ ವಿದ್ಯಾರ್ಥಿನಿಯ ಪರಿಚಯವಾಗಿ ಪ್ರೇಮಕ್ಕೆ ತಿರುಗಿತ್ತು. ಈ ವಿಚಾರ ಯುವತಿಯ ತಾಯಿಗೆ ಗೊತ್ತಾಗಿ ಇದನ್ನು ಆಕ್ಷೇಪಿಸಿದ್ದರು. ಇದೇ ಕಾರಣಕ್ಕೆ ಯುವತಿ ಆರೋಪಿಯನ್ನು ಉಪೇಕ್ಷೆ ಮಾಡುತ್ತಿದ್ದಳು ಎಂದು ಹೇಳಲಾಗಿದ್ದು. ಇದರಿಂದ ಕುಪಿತಗೊಂಡು ಆರೋಪಿ ಆಸಿಡ್ ದಾಳಿಯ ಕೃತ್ಯ ನಡೆಸಿದ್ದಾನೆ ಎಂದು ಪೋಲೀಸ್ ಮೂಲದಿಂದ ತಿಳಿದು ಬಂದಿದೆ.
ಕಡಬದಲ್ಲಿ ಇದು ಎರಡನೇ ಕೃತ್ಯ: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಕಡಬ ಪಿಯುಸಿ ವಿದ್ಯಾರ್ಥಿನಿಯರ ಮೇಲಿನ ಹಲ್ಲೆ ಪ್ರಕರಣದ ಬಗೆಗಿನ ದಿಗ್ಭ್ರಮೆಯ ನಡುವೆ 2020 ರ ಜನವರಿ 24 ರಂದು ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಕೊಟ್ಟಾರಿ ಎಂಬಲ್ಲಿನ ನಿವಾಸಿ ಸ್ವಪ್ನಾ ಎಂಬಾಕೆಯ ಮೇಲೆ ಆಕೆಯ ಸಂಬಂಧಿಯೂ ಆಗಿರುವ ಜಯಾನಂದ ಎಂಬಾತ ಆಸಿಡ್ ದಾಳಿ ನಡೆಸಿ ಗಾಯಗೊಳಿಸಿದ ಘಟನೆಯೂ ಮುನ್ನಲೆಗೆ ಬಂದಿದ್ದು, ಆಸ್ತಿ ವಿವಾದದ ಕಾರಣಕ್ಕೆ ಆಸಿಡ್ ಎರಚಲಾಗಿತ್ತು.
ಸದ್ರಿ ಪ್ರಕರಣದಲ್ಲಿ ಸಂತ್ರಸ್ತೆ ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಪಿ ಜಯಾನಂದ ಜೈಲು ಪಾಲಾಗಿದ್ದಾನೆ. ಆಸಿಡ್ ಪ್ರಕರಣದ ಬಗ್ಗೆ ಪ್ರಸಕ್ತ ಕಾನೂನು ಬಿಗುವಾಗಿದ್ದರಿಂದ ಆರೋಪಿಯ ಜಾಮೀನು ಬಿಡುಗಡೆಯ ಪ್ರಯತ್ನಗಳು ವಿಫಲವಾಗಿರುವುದಾಗಿ ತಿಳಿದು ಬಂದಿದೆ.