* ಸಹೋದರನ ಜತೆ ಸೇರಿ ಪತ್ನಿ ಕತ್ತು ಹಿಸುಕಿ ಕೊಲೆ ಮಾಡಿದ ಪತಿ
* ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆ
* ಈ ಸಂಬಂಧ ಗುತ್ತಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು
ಗುತ್ತಲ(ಸೆ.26): ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು, ಆಕೆಯ ಸಹೋದರನ ಜತೆ ಸೇರಿಕೊಂಡು ಕತ್ತು ಹಿಸುಕಿ ಕೊಲೆ(Murder) ಮಾಡಿ, ಸುಟ್ಟುಹಾಕಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕೆರೆಕೊಪ್ಪ ಗ್ರಾಮದ ಶೇಖವ್ವ ಹನುಮಂತಪ್ಪ ಉಪ್ಪಾರ (30) ಮೃತ ಮಹಿಳೆ.
ಸೆ. 20ರಂದು ಸಂಜೆ ಗ್ರಾಮದ ಹೊರವಲಯದಲ್ಲಿ ಮೃತ ಮಹಿಳೆಯ ಗಂಡ ಹನುಮಂತಪ್ಪ ಉಪ್ಪಾರ ಹಾಗೂ ಮೃತ ಮಹಿಳೆಯ ಸಹೋದರ ಬಸವರಾಜ ಉಪ್ಪಾರ ಇಬ್ಬರೂ ಸೇರಿ ಕೊಲೆ ಮಾಡಿ, ಆನಂತರ ಸಾಕ್ಷಿ ದೊರೆಯದಂತೆ ಗ್ರಾಮದ ಸ್ಮಶಾನದಲ್ಲಿ ಸುಟ್ಟು ಹಾಕಿದ್ದಾರೆ.
ಮಗಳ ಗಂಡನೊಂದಿಗೆ ಅತ್ತೆ ಅಕ್ರಮ ಸಂಬಂಧ : ಕೊಲೆಯಲ್ಲಿ ಅಂತ್ಯವಾಯ್ತು
ಶೇಖವ್ವ ಅವಳನ್ನು 13 ವರ್ಷಗಳ ಹಿಂದೆ ಹನುಮಂತಪ್ಪ ಉಪ್ಪಾರ ವಿವಾಹವಾಗಿದ್ದರು. ಕೆಲವು ವರ್ಷಗಳಿಂದ ಗ್ರಾಮದ ಹಾಗೂ ಇತರ ಗ್ರಾಮದ ವ್ಯಕ್ತಿಗಳೊಂದಿಗೆ ಶೇಖವ್ವ ಅನೈತಿಕ ಸಂಬಂಧ(Illicit Relationship) ಇಟ್ಟುಕೊಂಡಿದ್ದಳು ಎನ್ನಲಾಗಿದೆ. 20 ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದಳು. ಮನೆಯವರು ಅನೇಕ ಕಡೆ ಹುಡುಕಿದರೂ ಪತ್ತೆಯಾಗಿರಲಿಲ್ಲ. ಸೆ. 20ರಂದು ತಮ್ಮ ಜಮೀನಿನಲ್ಲಿ ಶೇಖವ್ವ ಇರುವ ಮಾಹಿತಿ ಪಡೆದ ಹನುಮಂತಪ್ಪ ಭೀಮಪ್ಪ ಉಪ್ಪಾರ ಹಾಗೂ ಶೇಖವ್ವಳ ಸಹೋದರ ಹಿರೇಕೆರೂರು ತಾಲೂಕಿನ ಚಿನ್ನಮುಳಗುಂದ ಗ್ರಾಮದ ಬಸವರಾಜ ಭರಮಪ್ಪ ಉಪ್ಪಾರ ಆಗಮಿಸಿದ್ದಾರೆ. ಶೇಖವ್ವಳನ್ನು ಉಪಾಯದಿಂದ ಬೈಕ್‌ನಲ್ಲಿ ಗುಡ್ಡದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಸಹೋದರ ಬಸವರಾಜ ಶೇಖವ್ವಳ ಕೈಗಳನ್ನು ಬಿಗಿಯಾಗಿ ಹಿಡಿದುಕೊಂಡಿದ್ದರೆ, ಪತಿ ಹನುಮಂತಪ್ಪ ಉಪ್ಪಾರ ಆಕೆಯ ಕತ್ತಿಗೆ ಟವೆಲ್ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೋಲಿಸ್(Police) ವರಿಷ್ಠಾಧಿಕಾರಿ ಹನುಮಂತರಾಯ, ಡಿವೈಎಸ್ಪಿ ಶಂಕರ ಮಾರಿಹಾಳ, ಗ್ರಾಮೀಣ ಠಾಣೆಯ ಸಿಪಿಐ ನಾಗಮ್ಮ ಕೆ., ಪಿಎಸ್‌ಐ ಜಗದೀಶ ಜಿ., ವಿಧಿವಿಜ್ಞಾನ ತಜ್ಞ ಛಾಯಾಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಗುತ್ತಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.