ವಲಸೆ ಕಾರ್ಮಿಕರನ್ನೇ ದೋಚಿದ ಪೊಲೀಸಪ್ಪ..!

By Kannadaprabha NewsFirst Published Dec 9, 2020, 8:48 AM IST
Highlights

ಡಕಾಯಿತಿ ಮಾಡಿಸಿದ ಹೆಡ್‌ ಕಾನ್‌ಸ್ಟೇಬಲ್‌| ಮಾಸಿಕ ಹಫ್ತಾ ವಸೂಲಿ ನಿಗದಿ ಪಡಿಸಲು ಕೃತ್ಯ ಎಸಗಿದ| ಈ ಸಂಬಂಧ ವೈಟ್‌ಫೀಲ್ಡ್‌ ಠಾಣೆಗೆ ದೂರು ನೀಡಿದ್ದ ವಲಸೆ ಕಾರ್ಮಿಕರು| ಶಿವಾಜಿ ನಗರದ ಹೆಡ್‌ಕಾನ್‌ಸ್ಟೇಬಲ್‌ ಸೈಯದ್‌ ಸಮೀವುಲ್ಲಾ ಸೂಚನೆಯಂತೆ ಕೃತ್ಯ ಎಸಗಿರುವುದಾಗಿ ಬಾಯ್ಬಿಟ್ಟಿದ್ದ ಆರೋಪಿಗಳು| 

ಬೆಂಗಳೂರು(ಡಿ.09):  ಡಕಾಯಿತಿ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇರೆಗೆ ಶಿವಾಜಿನಗರ ಹೆಡ್‌ ಕಾನ್‌ಸ್ಟೇಬಲ್‌ವೊಬ್ಬರನ್ನು ಅಮಾನತುಗೊಳಿಸಲಾಗಿದೆ.

ಶಿವಾಜಿನಗರ ಹೆಡ್‌ಕಾನ್‌ಸ್ಟೇಬಲ್‌ ಸೈಯದ್‌ ಸಮೀವುಲ್ಲಾ ಅಮಾನತುಗೊಂಡವರು. ವೈಟ್‌ಫೀಲ್ಡ್‌ ಡಿಸಿಪಿ ದೇವರಾಜ್‌ ಅವರು ಕೊಟ್ಟದೂರಿನ ಮೇರೆಗೆ ಹೆಡ್‌ ಕಾನ್‌ಸ್ಟೇಬಲ್‌ನನ್ನು ಅಮಾನತು ಮಾಡಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಎಸ್‌.ಡಿ.ಶರಣಪ್ಪ ಹೇಳಿದ್ದಾರೆ.

ಸಮುದಾಯ ಭವನ ಕೀ ಕೇಳಿದ ಪೊಲೀಸಪ್ಪನ ಕಿವಿ ಕಚ್ಚಿದ ಶಿಕ್ಷಕ!

ವೈಟ್‌ಫೀಲ್ಡ್‌ ಠಾಣಾ ವ್ಯಾಪ್ತಿಯಲ್ಲಿ ಸುಮಾರು 150ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಕುಟುಂಬ ಶೆಡ್‌ ಹಾಕಿಕೊಂಡು ವಾಸವಿದೆ. ಅ.29ರಂದು ರಾತ್ರಿ 11ರ ಸುಮಾರಿಗೆ ಎಂಟು ಮಂದಿ ಇದ್ದ ಗ್ಯಾಂಗ್‌ ಎರಡು ಕಾರಿನಲ್ಲಿ ಬಂದು ಶೆಡ್‌ಗಳಿಗೆ ಅತಿಕ್ರಮ ಪ್ರವೇಶ ಮಾಡಿತ್ತು. ವಲಸೆ ಕಾರ್ಮಿಕರ ಬಳಿ ಗಲಾಟೆ ಮಾಡಿ ‘ನಾವು ಪೊಲೀಸರು ನಮಗೆ ಹಣ ನೀಡಬೇಕು. ಇಲ್ಲದಿದ್ದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ’ ಎಂದು ಪ್ರಾಣ ಬೆದರಿಕೆ ಹಾಕಿದ್ದರು. ಅಲ್ಲದೆ, ಅವಾಚ್ಯ ಶಬ್ದದಿಂದ ನಿಂದಿಸಿ ಮಾರಕಾಸ್ತ್ರಗಳಿಂದ ನಾಲ್ಕೈದು ಮಂದಿ ಮೇಲೆ ಹಲ್ಲೆ ನಡೆಸಿ ಎಂಟು ಮೊಬೈಲ್‌ ಹಾಗೂ ನಗದು ಕಸಿದುಕೊಂಡು ಪರಾರಿಯಾಗಿದ್ದರು.

ಈ ಸಂಬಂಧ ವಲಸೆ ಕಾರ್ಮಿಕರು ವೈಟ್‌ಫೀಲ್ಡ್‌ ಠಾಣೆಗೆ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿ ಹೊಸಕೋಟೆ ಮೂಲದ ಆರೋಪಿಗಳನ್ನು ಬಂಧಿಸಲಾಯಿತು. ವಿಚಾರಣೆ ವೇಳೆ ಆರೋಪಿಗಳು ಶಿವಾಜಿ ನಗರದ ಹೆಡ್‌ಕಾನ್‌ಸ್ಟೇಬಲ್‌ ಸೈಯದ್‌ ಸಮೀವುಲ್ಲಾ ಅವರ ಸೂಚನೆಯಂತೆ ಕೃತ್ಯ ಎಸಗಿರುವುದಾಗಿ ಬಾಯ್ಬಿಟ್ಟಿದ್ದರು. ವಲಸೆ ಕಾರ್ಮಿಕ ಕುಟುಂಬದ ಬಳಿ ಮಾಸಿಕ ಹಫ್ತಾ ವಸೂಲಿ ನಿಗದಿಪಡಿಸಲು ಹೆಡ್‌ಕಾನ್‌ಸ್ಟೇಬಲ್‌ ಆರೋಪಿಗಳನ್ನು ಕಳುಹಿಸಿ ಡಕಾಯಿತಿ ಮಾಡಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಡಿಸಿಪಿ ದೇವರಾಜ್‌ ತಿಳಿಸಿದರು.
 

click me!