
ರಾಯಚೂರು (ಫೆ.5): ಯಾರಿಗೆ ಯಾವಾಗ ಸಾವು ಬರುತ್ತದೆಂಬುದು ಹೇಳೋಕೆ ಆಗೋಲ್ಲ. ಈಗ ಇದ್ದವರು ಇನ್ನೊಂದು ತಾಸಲ್ಲಿ ಇರೋದಿಲ್ಲ. ನಿನ್ನೆ ಚೆನ್ನಾಗಿದ್ದವರು ಇಂದು ಏಕಾಏಕಿ ತೀರಿಕೊಂಡ ಸುದ್ದಿ, ಈಗ್ತಾನೆ ಮನೆಯಿಂದ ಬೈಕ್ ಹತ್ತಿ ಹೋದ ಮಗ ಅಪಘಾತದಲ್ಲಿ ತೀರಿಕೊಂಡನೆಂಬ ಸುದ್ದಿ ಬಂದಾಗ ಶಾಕ್ ಆಗುತ್ತಲ್ಲವೇ? ಇದೀಗ ಅಂಥದ್ದೇ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ದೇವರ ಜಾತ್ರೆಗೆಂದು ಸಂಭ್ರಮದಿಂದ ರೆಡಿಯಾಗಿ ಹೊರಟಿದ್ದವರ ಬೈಕ್‌ಗೆ ಬಸ್ ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಸುರಪುರ ತಾ. ಶಾಂತಪುರ ಕ್ರಾಸ್ ಬಳಿ ಸಂಭವಿಸಿದೆ.
ಆಂಜನೇಯ (35), ಗಂಗಮ್ಮ (28),ಹಣಮಂತ (1.5), ಪವಿತ್ರ (5), ರಾಯಪ್ಪ(3) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು.ಮೃತರ ಪೈಕಿ ಮೂವರು ಲಿಂಗಸೂಗೂರು ತಾ. ಮೆಟಮರಡಿ ದೊಡ್ಡಿಯವರು. ದೇವರಭೂಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೆಟಮರಡಿ ದೊಡ್ಡಿಯಲ್ಲಿ ನಾಳೆ ದೇವರ ಜಾತ್ರೆ ನಡೆಯುತ್ತಿದೆ. ಜಾತ್ರೆಗೆಂದು ಬೈಕ್‌ನಲ್ಲಿ ಹೊರಟಿದ್ದರು ಈ ವೇಳೆ ಬೈಕ್‌ಗೆ ಡಿಕ್ಕಿಯಾಗಿರುವ ಬಸ್. ಡಿಕ್ಕಿಯಾದ ರಭಸಕ್ಕೆ ಐವರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.
ಇದನ್ನೂ ಓದಿ: ಮಹಾಕುಂಭದಿಂದ ಮರಳುತ್ತಿದ್ದ ಇಬ್ಬರು ಮಕ್ಕಳು ಸೇರಿ ನಾಲ್ವರು ಅಪಘಾತಕ್ಕೆ ಬಲಿ, 6 ಮಂದಿಗೆ ಗಾಯ
ಜಾತ್ರೆ ನಿಮಿತ್ತ ತವರು ಮನೆಯಿಂದ ಬಂದಿದ್ದ ಪತ್ನಿ-ಮಕ್ಕಳು
ತವರುಮನೆಯಲ್ಲಿದ್ದ ಹೆಂಡತಿ ಮಕ್ಕಳನ್ನು ಜಾತ್ರೆಗೆ ಕರೆದುಕೊಂಡು ಬಂದಿದ್ದ ಪತಿ. ಜಾತ್ರೆಗೆಂದು ತವರು ಮನೆಯಿಂದ ಬರುವಾಗ ಮೃತ ಗಂಗಮ್ಮ ತನ್ನ ಮಕ್ಕಳಲ್ಲದೆ, ಸಂಬಂಧಿಕರ ಮಕ್ಕಳನ್ನು ಕರೆತಂದಿದ್ದಳು. ಪ್ರತಿವರ್ಷ ಅದ್ದೂರಿಯಾಗಿ ನಡೆಯುವ ಗ್ರಾಮ ದೇವರ ಜಾತ್ರೆ. ಪ್ರತಿವರ್ಷದಂತೆ ಈ ವರ್ಷವೂ ಮಕ್ಕಳೊಂದಿಗೆ ಹೊರಟಿದ್ದ ಕುಟುಂಬ. ಬೆಳಗ್ಗೆಯೇ ಜಾತ್ರೆಗೆಂದು ಸಂಭ್ರಮದಿಂದ ರೆಡಿಯಾಗಿ ಬೈಕ್ ಹತ್ತಿದ್ದರು. ಶಹಾಪೂರ ತಾ. ಹಳಿಸಗರ ಗ್ರಾಮದಿಂದ ಮೆಟಮರಡಿ ದೊಡ್ಡಿಗೆ ಬರುವಾಗ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಪತಿ, ಪತ್ನಿ ಮಕ್ಕಳು ರಸ್ತೆ ಮೇಲೆ ಚೆಲ್ಲಪಿಲ್ಲಿಯಾಗಿ ಬಿದ್ದು ಸ್ಥಳದಲ್ಲೇ ಅಸುನೀಗಿದ್ದಾರೆ. ಸದ್ಯ ಮೃತದೇಹಗಳು ಸುರಪುರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತೆ. ದೇವರ ಜಾತ್ರೆಯ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಸ್ಮಶಾನ ಮೌನ ಆವರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ