Chitradurga: ಚುನಾವಣೆ ದ್ವೇಷ ಹಿನ್ನೆಲೆ ಮಾರಣಾಂತಿಕ ಹಲ್ಲೆ ನಡೆಸಿದ ಬಂಗಾರಪ್ಪ, ಕಾಟಪ್ಪ ಬೆಂಬಲಿಗರು

By Suvarna News  |  First Published Sep 25, 2022, 6:13 PM IST

ಹಳೇಯ ವೈಷಮ್ಯದಿಂದ ಬಂಗಾರಪ್ಪ ಬೆಂಬಲಿಗರು ಹಾಲಿ ಗ್ರಾ.ಪಂ ಸದಸ್ಯನ‌ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿರೋ ಘಟನೆ ಅರೇಹಳ್ಳಿ ಹಟ್ಟಿಯಲ್ಲಿ ನಡೆದಿದೆ.  


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಸೆ.25): ಗ್ರಾ.ಪಂ ಚುನಾವಣೆ ಮುಗಿದು ವರ್ಷಗಳೇ ಕಳೆದ್ರು ಕೆಲವು ಗ್ರಾಮಗಳಲ್ಲಿ ಮಾತ್ರ ದ್ವೇಷದ ಕಿಚ್ಚು ಮಾತ್ರ ಕಡಿಮೆ ಆಗಿಲ್ಲ. ತನ್ನ ಎದುರು ಗೆದ್ದನಲ್ಲ ಎಂದು ಹಳೇಯ ವೈಷಮ್ಯದಿಂದ ಬಂಗಾರಪ್ಪ ಬೆಂಬಲಿಗರು ಹಾಲಿ ಗ್ರಾ.ಪಂ ಸದಸ್ಯನ‌ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿರೋ ಘಟನೆ ಅರೇಹಳ್ಳಿ ಹಟ್ಟಿಯಲ್ಲಿ ನಡೆದಿದೆ.  ರಾಜ್ಯದಲ್ಲಿ ಈಗಾಗಲೇ ಗ್ರಾ.ಪಂ ಚುನಾವಣೆ ಮುಗಿದು ವರ್ಷಗಳು ಕಳೆದು ಹೋಗಿದೆ. ಆದ್ರೆ ದ್ವೇಷದ ಕಿಚ್ಚು ಮಾತ್ರ ಇನ್ನೂ ಕೆಲ ಗ್ರಾಮಗಳಲ್ಲಿ ಹಾಗೆಯೇ ಇದೆ ಎಂಬುದೇ ವಿಪರ್ಯಾಸ. ನೋಡಿ ಹೀಗೆ, ಮಾರಣಾಂತಿಕ ಹಲ್ಲೆಯಿಂದ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೃಶ್ಯಗಳು ಒಂದೆಡೆಯಾದ್ರೆ,‌ ನಮ್ಮ ಕುಟುಂಬಕ್ಕೆ ಅನ್ಯಾಯ ಆಗಿದೆ ನಮಗೆ ನ್ಯಾಯ ಕೊಡಿಸಿ ಎಂದು ರಾತ್ರೋರಾತ್ರಿ ಎಸ್ಪಿ ಮನೆ ಎದುರು ಬಂದು ಪ್ರತಿಭಟನೆ ಮಾಡ್ತಿರೋ ಗಾಯಾಳುಗಳ ಸಂಬಂಧಿಕರು. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗದಲ್ಲಿ. ಹೌದು, ಚಿತ್ರದುರ್ಗ ಜಿಲ್ಲೆ‌ ಹೊಳಲ್ಕೆರೆ ತಾಲ್ಲೂಕಿನ ಅರೇಹಳ್ಳಿ ಹಟ್ಟಿ ಅಲಿಯಾಸ್ ಅರೇಹಳ್ಳಿ ಸ್ಟೇಷನ್ ಗ್ರಾಮದಲ್ಲಿ ನಿನ್ನೆ ಸಂಜೆ ವೇಳೆಗೆ ಹಾಲಿ ಗ್ರಾ.ಪಂ ಸದಸ್ಯ ಸಣ್ಣ ಪಾಲೇಗೌಡ ಹಾಗೂ ಪ್ರತಿಸ್ಪರ್ಧಿಯಾಗಿ ಸ್ಪರ್ಧಿಸಿ ಸೋತಿದ್ದ ಬಂಗಾರಪ್ಪ ನಡುವೆ  ಗಲಾಟೆ ಶುರುವಾಗುತ್ತದೆ. ಬಂಗಾರಪ್ಪ, ಕಾಟಪ್ಪ ಹಾಗೂ ಅವರ ಸಂಬಂಧಿಕರು ಸಣ್ಣ ಪಾಲೇಗೌಡರ ಮನೆ ಮೇಲೆ ಏಕಾಏಕಿ ದಾಳಿ ಮಾಡಿ, ಮಚ್ಚು, ಕೊಡಲಿ, ಕೋಲುಗಳಿಂದ ಸಣ್ಣ ಪಾಲೇಗೌಡ ಹಾಗೂ ಅವರ ಸಂಬಂಧಿಕರ ಮೇಲೆ‌ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದ್ರಿಂದ ಗಾಯಗೊಂಡ ಸುಮಾರು ೮ಕ್ಕೂ ಅಧಿಕ ಮಂದಿ ಸದ್ಯ ಶಿವಮೊಗ್ಗ ‌ಹಾಗೂ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷರ ಆಗಬೇಕು ಎಂಬುದು ಗಾಯಾಳುಗಳ ಆಗ್ರಹವಾಗಿದೆ.

Tap to resize

Latest Videos

ಸಣ್ಣ ಪಾಲೇಗೌಡ ಗ್ರಾ.ಪಂ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಾಗನಿಂದ ತಾನಾಯ್ತು ತನ್ನ ಕೆಲಸವಾಯ್ತು ಎಂದು ನೋಡಿಕೊಂಡು ಇದ್ದನು. ಆದ್ರೆ ಎದುರಾಳಿ ಬಂಗಾರಪ್ಪ ಅವರ ಸಂಬಂಧಿಕರು ಮಾತ್ರ ಸಣ್ಣ ಪಾಲೇಗೌಡರ ಕುಟುಂಬದ ಮೇಲೆ ನಿತ್ಯ ದ್ವೇಷದ ಮಚ್ಚು ಮಸೆಯುತ್ತಲೇ ಇತ್ತು. ಈ ಹಿಂದೆಯೂ ಹಲವು ಬಾರಿ ಸಣ್ಣ ಪುಟ್ಟ ಜಗಳ ಆಗಿದ್ದವು. ಆ ಕುರಿತು ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಲಾಗಿತ್ತು.

ಆದ್ರೆ ನಿನ್ನೆ ಬಂಗಾರಪ್ಪ ಹಾಗೂ ಅವರ ಸಂಬಂಧಿಕರು ಪ್ಲಾನ್ ಮಾಡಿ, ರಸ್ತೆಯಲ್ಲಿ ಓಡಾಡಬಾರದು ಎಂದು ಅಡ್ಡ ಟ್ರಾಕ್ಟರ್ ನಿಲ್ಲಿಸಿ, ಸಣ್ಣ ಪಾಲೇಗೌಡ ಮನೆಯ ಮೇಲೆ ಕುಟುಂಬ ಸಮೇತ ಕಾರದ ಪುಡಿ ಹುಗ್ಗಿ ಮಚ್ಚುಗಳಿಂದ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾರೆ. ಸದ್ಯ ಊರಿನಲ್ಲಿ ಬಿಗುವಿನ ವಾತಾವರಣ ಇದ್ದು, ಆರೋಪಿಗಳು ಎಲ್ಲಾ ತಲೆ ಮರೆಸಿಕೊಂಡಿದ್ದಾರೆ. ಅವರನ್ನು ಕೂಡಲೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನಮಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸಿ ಎಂದು ಗಾಯಾಳು ಸಂಬಂಧಿಕರು ಒತ್ತಾಯಿಸಿದ್ದಾರೆ.

ಒಟ್ಟಾರೆಯಾಗಿ ಚುನಾವಣೆ ಅಂದ ಮೇಲೆ ಸಣ್ಣ ಪುಟ್ಟ ದ್ವೇಷ ಇರೋದು ಸರ್ವೇ ಸಾಮಾನ್ಯ. ಆದ್ರೆ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪದಾರಿ ಆಗಿರೋ ಪುಂಡರಿಗೆ ಪೊಲೀಸರು ಸರಿಯಾದ ಬುದ್ದಿ ಕಲಿಸಲಿ ಎಂಬುದು ಎಲ್ಲರ ಆಶಯ. 

click me!