ಡ್ರಗ್‌ ಕೇಸ್‌: ತನಿಖಾಧಿಕಾರಿಗಳಿಗೆ ಪೆಪ್ಪರ್‌ ಕಾಟ!

Kannadaprabha News   | Asianet News
Published : Sep 07, 2020, 07:09 AM IST
ಡ್ರಗ್‌ ಕೇಸ್‌: ತನಿಖಾಧಿಕಾರಿಗಳಿಗೆ ಪೆಪ್ಪರ್‌ ಕಾಟ!

ಸಾರಾಂಶ

ಆಫ್ರಿಕ್‌ ಭಾಷೆ ಮಾತ್ರ ಗೊತ್ತು ಎಂದ ಅಂತಾರಾಷ್ಟ್ರೀಯ ಡ್ರಗ್‌ ಪೆಡ್ಲರ್‌| ಸಿಸಿಬಿ ಅಧಿಕಾರಿಗಳ ಮುಂದೆ ಹೈಡ್ರಾಮಾ| ಇಂಗ್ಲಿಷ್‌ನಲ್ಲಿ ಮಾಡಿದ್ದ ವಾಟ್ಸಪ್‌ ಚಾಟ್‌ ಮುಂದಿಟ್ಟಾಗ ತೆಪ್ಪಗಾದ ಪೆಪ್ಪರ್‌| ಡ್ರಗ್‌ ಜಾಲದ ಮಾಹಿತಿ ಬಹಿರಂಗ?|   

ಬೆಂಗಳೂರು(ಸೆ.07): ಕನ್ನಡ ಚಿತ್ರರಂಗದಲ್ಲಿನ ಡ್ರಗ್ಸ್‌ ದಂಧೆಯ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಪ್ರಕರಣದ 7ನೇ ಆರೋಪಿ ಅಂತಾರಾಷ್ಟ್ರೀಯ ಡ್ರಗ್‌ ಪೆಡ್ಲರ್‌ ಲೂಮ್‌ ಪೆಪ್ಪರ್‌, ‘ತನಗೆ ಆಫ್ರಿಕನ್‌ ಭಾಷೆ ಬಿಟ್ಟರೆ, ಬೇರೆ ಯಾವುದೇ ಭಾಷೆ ಬರುವುದಿಲ್ಲ ಎಂದು ವಿಚಾರಣೆ ವೇಳೆ ತನಿಖಾಧಿಕಾರಿಗಳ ಬಳಿ ಹೈಡ್ರಾಮಾ ಮಾಡಿದ್ದಾನೆ.

ರಾಗಿಣಿ ಆಪ್ತ ರವಿಶಂಕರ್‌ ಜತೆ ಆನ್‌ಲೈನ್‌ ಮೂಲಕ ಇಂಗ್ಲಿಷ್‌ನಲ್ಲಿ ಸಂವಹನ ನಡೆಸಿರುವ ದಾಖಲೆಗಳನ್ನು ಮುಂದಿಟ್ಟಾಗ ಪೆಪ್ಪರ್‌ ತೆಪ್ಪಗಾಗಿದ್ದಾನೆ. ಬಳಿಕ ತಾನಾಗಿಯೇ ಕೆಲ ಮಾಹಿತಿ ಹೊರ ಹಾಕಿರುವ ಆರೋಪಿ, ಡ್ರಗ್‌ ದಂಧೆಯಲ್ಲಿ ತನ್ನ ಜತೆ ಭಾಗಿಯಾಗಿರುವ ಪೆಡ್ಲರ್‌ಗಳ ಜಾಲದ ಬಗ್ಗೆ ಮಾಹಿತಿ ನೀಡಿದ್ದಾನೆ. ಆರೋಪಿ ಹೇಳಿಕೆಯನ್ನು ಮತ್ತೊಮ್ಮೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಲೂಮ್‌ ಪೆಪ್ಪರ್‌ ಜತೆ ನಂಟು ಹೊಂದಿರುವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡ್ರಗ್ಸ್ ಮಾಫಿಯಾ: ಮತ್ತೋರ್ವ ನಟಿಗೆ ಶುರುವಾಯ್ತು ಟೆನ್ಷನ್..!

ಲೂಮ್‌ ಪೆಪ್ಪರ್‌ ವಿದೇಶದಿಂದ ಕಳ್ಳ ಸಾಗಾಣೆ ಮಾಡಿಕೊಳ್ಳುತ್ತಿದ್ದ ಡ್ರಗ್ಸ್‌, ಬೆಂಗಳೂರು ಸೇರಿದಂತೆ ಹಲವು ಪ್ರಮುಖ ನಗರಗಳಿಗೂ ಪೂರೈಕೆ ಮಾಡಿದ್ದಾನೆ. ಈ ಹಿಂದೆ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಐಟಿ-ಬಿಟಿಯವರಿಗೆ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ. ಪಬ್‌ವೊಂದರಲ್ಲಿ ಪಾರ್ಟಿ ವೇಳೆ ಪರಿಚಯವಾಗಿದ್ದ ವ್ಯಕ್ತಿಯಿಂದ ದೊಡ್ಡ ಮಟ್ಟದ ಗ್ರಾಹಕರ ಸಂಪರ್ಕ ಬೆಳೆದಿತ್ತು. ಬಳಿಕ ಪಾರ್ಟಿಗಳಿಗೆ ನೇರವಾಗಿ ಹೋಗಿ ಡ್ರಗ್ಸ್‌ ಕೊಡುತ್ತಿದ್ದ. ದಂಧೆಯಲ್ಲಿ ರವಿಶಂಕರ್‌ಗೂ ಕಮೀಷನ್‌ ನೀಡುತ್ತಿದ್ದ ಬಗ್ಗೆ ಶಂಕೆ ಇದೆ. ಬ್ಯಾಂಕ್‌ ವಿವರ ಪರಿಶೀಲಿಸಲಾಗುತ್ತಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ. ಪೆಡ್ಲರ್‌ಗೆ ಕೊರೋನಾ: ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ರಾಜಸ್ಥಾನ ಮೂಲದ ಡ್ರಗ್‌ ಪೆಡ್ಲರ್‌ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಆದರೆ, ಈ ಡ್ರಗ್‌ಪೆಡ್ಲರ್‌ಗೆ ಕೊರೋನಾ ಇರುವುದು ದೃಢಪಟ್ಟಿದೆ. ಆತನನ್ನು ಬೆಂಗಳೂರಿನಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಇನ್ನು ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಪ್ರಶಾಂತ್‌ ರಾಂಕ್‌ನನ್ನು ಭಾನುವಾರ ಸಂಜೆ ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಆಧಿಕಾರಿಗಳು ತಿಳಿಸಿದ್ದಾರೆ.

ಉಳಿದಂತೆ ಪ್ರಕರಣದಲ್ಲಿ ಬಂಧಿತರಾದ ನಟಿ ರಾಗಿಣಿ ದ್ವಿವೇದಿ ಹಾಗೂ ಅವರ ಆಪ್ತ ರವಿಶಂಕರ್‌, ಸೆನೆಗಲ್‌ ಮೂಲದ ಡ್ರಗ್‌ ಪೆಡ್ಲರ್‌ ಲೂಮ್‌ ಪೆಪ್ಪರ್‌, ವಿರೇನ್‌ ಖನ್ನಾ ಹಾಗೂ ಸಂಜನಾ ಗಲ್ರಾನಿ ಸ್ನೇಹಿತ ರಾಹುಲ್‌ನನ್ನು ಭಾನುವಾರ ಕೂಡ ತೀವ್ರ ವಿಚಾರಣೆ ನಡೆಸಿದೆ.

ಆದಿತ್ಯ ಆಳ್ವಾ ಕುಟುಂಬ ನಾಪತ್ತೆ

ಸ್ಯಾಂಡಲ್‌ವುಡ್‌ ಡ್ರಗ್‌ ದಂಧೆ ಪ್ರಕರಣದಲ್ಲಿ ಮಾಜಿ ಸಚಿವ ಜೀವರಾಜ್‌ ಆಳ್ವಾ ಅವರ ಪುತ್ರ ಆದಿತ್ಯ ಆಳ್ವಾನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ ಬೆನ್ನಲ್ಲೇ ಇಡೀ ಕುಟುಂಬ ನಾಪತ್ತೆಯಾಗಿದೆ. ಆದಿತ್ಯ ಆಳ್ವ ಸಂಬಂಧಿ ಸದಾಶಿವ ನಗರದ ಮನೆ ಬಳಿ ಹೋದಾಗ ಮನೆಯಲ್ಲಿ ಯಾರು ಇಲ್ಲದಿರುವುದು ಕಂಡು ಬಂದಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಪ್ರಕರಣದಲ್ಲಿ ಹೆಸರು ಆದಿತ್ಯಾ ಹೆಸರು ಕೇಳಿಬಂದ ಹಿನ್ನೆಲೆ ಆದಿತ್ಯ ಆಳ್ವಾ ಮನೆಗೆ ಬಂದೆ. ಆದರೆ, ಈಗ ಮನೆಯಲ್ಲಿ ಯಾರೂ ಇಲ್ಲ. ಆದಿತ್ಯ ಮುಂಬೈನಲ್ಲಿದ್ದಾನೆ. ನಾನು ಚಿಕ್ಕವಯಸ್ಸಿನಿಂದಲೂ ಆತನನ್ನು ನೋಡಿದ್ದೇನೆ. ಆರೋಪವನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ನಾನು ರಾಗಿಣಿ ಸ್ನೇಹಿತ ಬಂಧಿಸಿ!

ಸ್ಯಾಂಡಲ್‌ವುಡ್‌ ಡ್ರಗ್‌ ಜಾಲದ ನಂಟಿದ್ದು, ನನ್ನನ್ನು ಬಂಧಿಸುವಂತೆ ಅನಿರುದ್ಧ ಎಂಬಾತ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕೇಂದ್ರ ಕಚೇರಿಗೆ ಹೋಗಿದ್ದ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಚಹಾ ಮಾರಾಟ ಮಾಡುವ ಪ್ಲಾಸ್ಕ್‌ ಸಹಿತ ಬಂದ ಅನಿರುದ್ಧ, ರಾಗಿಣಿ ಪ್ರಕರಣದಲ್ಲಿ ನಾನು ಇದ್ದೆ. ಈ ಪ್ರಕರಣದಲ್ಲಿ ನಾನು 13ನೇ ಆರೋಪಿ ಎಂದು ಸಿಸಿಬಿ ಅಧಿಕಾರಿಗಳ ಮುಂದೆ ಹೇಳಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಅನಿರುದ್ಧ ಈ ಹಿಂದೆ ರವಿಶಂಕರ್‌ ಸ್ನೇಹಿತನಾಗಿದ್ದು, ಮಾನಸಿಕ ಅಸ್ವಸ್ಥನಂತೆ ಕಂಡು ಬಂದಿದ್ದಾನೆ. ಪಾರ್ಟಿಯೊಂದರಲ್ಲಿ ರಾಗಿಣಿಯನ್ನು ಅನಿರುದ್ಧ ಭೇಟಿಯಾಗಿದ್ದ. ಆತನಿಗೆ ಬುದ್ಧಿ ಹೇಳಿ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೆಂಗಳೂರು: ತಿಂಡಿ ಎಸೆದು ಪಾತ್ರೆಯಿಂದ ಹಲ್ಲೆ ಮಾಡಿದ ಪುಂಡರಿಗೆ ಕುದಿಯುವ ಎಣ್ಣೆ ಎರಚಿದ ವ್ಯಾಪಾರಿ!
ಅಪರೂಪದ ಕೋತಿ ಪ್ರಭೇದ ಬ್ಯಾಗ್‌ನಲ್ಲಿಟ್ಟು ವಿದೇಶದಿಂದ ಅಕ್ರಮ ಸಾಗಾಟ, ಬೆಂಗಳೂರು ಏರ್ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಪ್ರಯಾಣಿಕ!