ದಾವಣಗೆರೆಯಲ್ಲಿ ವಿಮಾ ಹಣಕ್ಕಾಗಿ ಸಂಬಂಧಿಕನನ್ನು ಕೊಲೆ ಮಾಡಿದ ಘಟನೆ ನಡೆದಿದೆ. ಹಣ್ಣಿನ ವ್ಯಾಪಾರಿ ದುಗ್ಗೇಶ್‌ನನ್ನು ಆತನ ಸಂಬಂಧಿ ಗಣೇಶ್ ಮತ್ತು ಇತರ ಮೂವರು ಸ್ನೇಹಿತರು ಕೊಲೆ ಮಾಡಿದ್ದಾರೆ. ದುಗ್ಗೇಶ್ ಹೆಸರಿನಲ್ಲಿ 40 ಲಕ್ಷ ರೂ. ವಿಮೆ ಮಾಡಿಸಿ, ಹಣ ಪಡೆಯುವ ಉದ್ದೇಶದಿಂದ ಕೊಲೆ ಮಾಡಿದ್ದಾರೆ.
ದಾವಣಗೆರೆ (ಅ.06): ಹುಟ್ಟುತ್ತಾ ಅಣ್ಣ ತಮ್ಮಂದಿರು, ಸಂಬಂಧಿಗಳು. ಆದರೆ, ಬೆಳೆಯುತ್ತಾ ದಾಯಾದಿಗಳು ಎನ್ನುವಂತೆ ಇನ್ಸೂರೆನ್ಸ್ ಹಣಕ್ಕಾಗಿ ಸ್ವತಃ ಜೊತೆಯಲ್ಲಿ ಆಡಿಕೊಂಡು ಬೆಳೆದ ಸಂಬಂಧಿಕನನ್ನೇ ಕೊಲೆ ಮಾಡಿದ ಘಟನೆ ಬೆಣ್ಣೆದೋಸೆ ನಗರಿ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ ಜಿಲ್ಲೆಯ ಇಮಾಂನಗರದಲ್ಲಿ ಘಟನೆ ನಡೆದಿದೆ. ಹಣ್ಣಿನ ವ್ಯಾಪಾರಿ ದುಗ್ಗೇಶಿ ಕೊಲೆಯಾದ ಮೃತ ದುರ್ದೈವಿ ಆಗಿದ್ದಾರೆ. ಬಂಬೂ ಬಜಾರ್‌ನ ಗಣೇಶ(24), ಹರಳಯ್ಯ ನಗರದ ಅನಿಲ್(18) ಹಳೆ ಚಿಕ್ಕನಹಳ್ಳಿಯ ಶಿವಕುಮಾರ್ (25) ಮತ್ತು ಭಾರತ್ ಕಾಲೋನಿಯ ಮಾರುತಿ(24) ಬಂಧಿತ ಕೊಲೆ ಆರೋಪಿಗಳು ಆಗಿದ್ದಾರೆ. ಒಂದೇ ಬೀದಿಯಲ್ಲಿ ಹುಟ್ಟಿ ಬೆಳೆದು ಸ್ನೇಹಿತರಾಗಿ, ಸಂಬಂಧಿಕರಾಗಿ ಬೆಳೆದ ದುಗ್ಗೇಶ್ ಮತ್ತು ಗಣೇಶ್ ಇಬ್ಬರೂ ತಮ್ಮ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ. ಅದರಲ್ಲಿ ಅಣ್ಣ ದುಗ್ಗೇಶ್ ಸ್ಥಳೀಯವಾಗಿ ಹಣ್ಣಿನ ವ್ಯಾಪಾರ ಮಾಡುತ್ತಾ ಜೀವನ ಕಟ್ಟಿಕೊಂಡಿದ್ದು, ಆರ್ಥಿಕವಾಗಿ ಸಬಲನೂ ಆಗಿದ್ದನು. ನಿತ್ಯ ಸಾವಿರಾರು ರೂ. ಹಣ ಟರ್ನವರ್ ಮಾಡುತ್ತಿದ್ದನು. ಇನ್ನು ಗಣೇಶ ಆಗಾಗ ದುಗ್ಗೇಶನಿಗೆ ಹಣದ ವಿಚಾರದಲ್ಲಿ ಸಾಲ ಕೊಡಿಸುವ ಹಾಗೂ ಬಡ್ಡಿ ವಸೂಲಿ ಮಾಡಿಕೊಡುವ ಮೂಲಕ ಹಣವನ್ನು ದುಡಿಯಲು ಬಿಟ್ಟು, ಅದರಿಂದ ಕಮೀಷನ್ ಕೂಡ ಪಡೆಯುತ್ತಿದ್ದನು.
undefined
ಕೆಲವು ದಿನಗಳ ಹಿಂದೆ ದುಗ್ಗೇಶನ ಸಹೋದರ ಗೋಪಿಗೆ 10 ರೂ. ಬಡ್ಡಿ ದರದಂತೆ 1 ಲಕ್ಷ ರೂ. ಹಣವನ್ನು ಕೊಡಿಸಿದ್ದನು. ಆರಂಭದಲ್ಲಿ ಬಡ್ಡಿ ಹಣ ಕಟ್ಟಿದ ಗೋಪಿ ನಂತರ ಸಾಲ ಕಟ್ಟಲಾಗದೇ ಬೆಂಗಳೂರಿಗೆ ಹೋಗಿದ್ದನು. ಇನ್ನು ತನ್ನ ಹಣವನ್ನು ಬೇರೆಯವರಿಗೆ ಕೊಟ್ಟ ದುಗ್ಗೇಶಿಗೆ ಹಣದ ಅಗತ್ಯವಿದ್ದಾಗ ಸಾಲ ಕೊಡಿಸುವುದಾಗಿ ಗಣೇಶ ಕೆಲವು ದಾಖಲೆಗಳನ್ನು ಪಡೆದುಕೊಂಡಿದ್ದನು. ದುಗ್ಗೇಶನ ಬ್ಯಾಂಕ್ ಖಾತೆ ಪುಸ್ತಕ, ಸಹಿ ಮಾಡಿದ ಚೆಕ್ ಬುಕ್, ಮೊಬೈಲ್ ನಂಬರ್ ಹಾಗೂ ದುಗ್ಗೇಶನ ತಾಯಿಯ ಬ್ಯಾಂಕ್ ಪುಸ್ತಕ ಹಾಗೂ ಅವರ ಹೆಬ್ಬೆಟ್ಟು ಒತ್ತಿರುವ ಬ್ಯಾಂಕ್‌ನ ಚೆಕ್ ಪುಸ್ತಕವನ್ನೂ ಪಡೆದುಕೊಂಡಿದ್ದನು.
ಇದನ್ನೂ ಓದಿ: ಬೆಂಗಳೂರಲ್ಲಿ ಲೈವ್ ವ್ಲಾಗ್ ಮಾಡ್ತಿದ್ದ ಯುವತಿಗೆ ನಡು ರಸ್ತೆಯಲ್ಲಿ ಎದೆಭಾಗಕ್ಕೆ ಕೈ ಹಾಕಿದ ಯುವಕ!
ಬ್ಯಾಂಕ್‌ನಿಂದ ಸಾಲ ಕೊಡಿಸುವುದಾಗಿ ಎಲ್ಲ ದಾಖಲೆಗಳನ್ನು ಪಡೆದುಕೊಂಡು ದುಗ್ಗೇಶನ ಹೆಸರಿನಲ್ಲಿ ಕಳೆದ 8 ತಿಂಗಳ ಹಿಂದೆ (ಫೆಬ್ರವರಿ) 40 ಲಕ್ಷ ರೂ. ಮೌಲ್ಯದ ಜೀವ ವಿಮೆ ಮಾಡಿಸಿದ್ದನು. ಕಷ್ಟಪಟ್ಟು ಮೊದಲ ಕಂತಿನ ಹಣವನ್ನೂ ಕಟ್ಟಿದ್ದನು. ಇದಾದ ನಂತರ ಮುಂದಿನ 2025ರ ಜನವರಿಗೆ ದುಗ್ಗೇಶನ ಹೆಸರಿನಲ್ಲಿರುವ ಇನ್ಸೂರೆನ್ಸ್‌ಗೆ 2.09 ಲಕ್ಷ ಹಣವನ್ನು ವಿಮಾ ಕಂತು ಪಾವತಿ ಮಾಡಬೇಕಿತ್ತು. ಆದರೆ, ದುಗ್ಗೇಶನಿಗೆ ಗೊತ್ತಿಲ್ಲದೇ ಆತನ ಹೆಸರಿನಲ್ಲಿ ವಿಮೆ ಮಾಡಿಸಿದ್ದ ಉದ್ದೇಶವೇ ಬೇರೆ ಆಗಿತ್ತು. ಹೀಗಾಗಿ, ದುಗ್ಗೇಶ್ ಹಾಗೂ ಆತನ ತಾಯಿಯ ಸಹಿ ಇರುವ ಚೆಕ್‌ಬುಕ್, ಇನ್ಸೂರೆನ್ಸ್ ಬಾಂಡ್ ಅವರಿಗೆ ಕೊಟ್ಟಿರಲಿಲ್ಲ.
ಹಣ್ಣಿನ ವ್ಯಾಪಾರ ಮಾಡುತ್ತಾ ದಿನ ಕಳೆಯುತ್ತಿದ್ದ ದುಗ್ಗೇಶನಿಗೆ ಎಲ್ಲಿಯೂ ಹೋಗುತ್ತಿರಲಿಲ್ಲ. ಬ್ಯಾಂಕ್ ವ್ಯವಹಾರ ಏನಿದ್ದರೂ ನೀನೇ ನೋಡಿಕೋ ಎಂದು ಸಹಿ ಮಾಡಿಕೊಟ್ಟು ಅಗತ್ಯವಿದ್ದರೆ ನನ್ನ ಮೊಬೈಲ್ ತೆಗೆದುಕೊಂಡು ಹೋಗಿ ಒಟಿಪಿ ಹೇಳುವಂತೆ ಸಂಬಂಧಿಕ ಗಣೇಶನಿಗೆ ಜವಾಬ್ದಾರಿ ನೀಡುತ್ತಿದ್ದನು. ಆದರೆ, ಕೋಳಿ ಚಿನ್ನದ ಮೊಟ್ಟೆ ಇಡುತ್ತದೆ ಎಂದು ಅದರ ಹೊಟ್ಟೆಯನ್ನು ಕೊಯ್ದ ಕಿರಾತಕರಂತೆ ಹಣವನ್ನು ದುಗ್ಗೇಶನ ಹೆಸರಿನಲ್ಲಿ ಹಣ ಹೊಡೆಯಲು ಸಂಚು ರೂಪಿಸಿದ್ದನು. ದುಗ್ಗೇಶನ ಹೆಸರಿನಲ್ಲಿ ವಿಮೆ ಮಾಡಿಸಿ, ಮೊದಲ ಕಂತು ಪಾವತಿಗೂ ಮೊದಲೇ ಆತನನ್ನು ಕೊಲೆ ಮಾಡಿ, ವಿಮೆಯ 40 ಲಕ್ಷ ರೂ. ಹಣವನ್ನು ತಾವು ಪಡೆದುಕೊಳ್ಳಬಹುದು ಎಂದು ಯೋಜನೆ ರೂಪಿಸಿದ್ದರು. ಹೀಗಾಗಿ, ದುಗ್ಗೇಶನ ಇನ್ಸೂರೆನ್ಸ್‌ಗೆ ಆತನ ತಾಯಿಯನ್ನೇ ನಾಮಿನಿಯಾಗಿ ಮಾಡಲಾಗಿತ್ತು. ಇದೀಗ ದುಗ್ಗೇಶ ಸತ್ತ ನಂತರ ತಾಯಿಯ ಬ್ಯಾಂಕ್ ಖಾತೆಗೆ ಬರುವ ಹಣವನ್ನು ಪಡೆಯಲು ಆತನ ತಾಯಿಯ ಹೆಬ್ಬೆಟ್ಟು ಒತ್ತಿರುವ ಚೆಕ್ ಕೂಡ ಪಡೆದುಕೊಂಡಿದ್ದನು.
ಇದನ್ನೂ ಓದಿ: ಜಾಮೀನು ಕೊಡಿಸಿ ಕಳ್ಳತನ ಮಾಡಿಸುತ್ತಿದ್ದ ರೌಡಿ ದಂಪತಿ ಸೇರಿ ಐವರ ಬಂಧನ!
ಎಲ್ಲವೂ ಅಂದುಕೊಂಡಂತೆ ಸಾಗುತ್ತಿರುವಾಗ, ದುಗ್ಗೇಶನನ್ನು ಕೊಲೆ ಮಾಡುವ ದಿನ ಬಂದೇ ಬಿಡುತ್ತದೆ. ಆಗ ಸಂಬಂಧಿಕ ಗಣೇಶ ತನ್ನೊಂದಿಗೆ ಇತರೆ ಮೂವರು ಸ್ನೇಹಿತರನ್ನು ಕರೆದುಕೊಂಡು ದುಗ್ಗೇಶನನ್ನು ಕೊಲೆ ಮಾಡುವುದಕ್ಕೆ ಸಂಚು ರೂಪಿಸುತ್ತಾನೆ. ಅದರಂತೆ ದುಗ್ಗೇಶನ ವ್ಯಾಪಾರ ಮುಗಿದ ನಂತರ ರಾತ್ರಿ ವೇಳೆ ಮದ್ಯ ಸೇವನೆಗೆ ಕರೆದುಕೊಂಡು ಹೋಗಿ ಬರುವಾಗ ಬೈಕ್‌ನಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಕಥೆ ಕಟ್ಟಿದ್ದರು. ಆದರೆ, ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ತಾಯಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಆಗ ಮರಣೋತ್ತರ ಪರೀಕ್ಷೆ ಮಾಡಿಸಿದಾಗ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಘಟನೆಯ ಆರೋಪಿಗನ್ನು ಅಜಾದ್ ನಗರ ಪೊಲೀಸರು ಬಂಧಿಸಿದ್ದಾರೆ.