
ಕೊಪ್ಪಳ (ಅ.13): ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಪೈಲ್ಸ್ ಚಿಕಿತ್ಸೆಗೆಂದು ಕರೆತರಲಾಗಿದ್ದ ವಿಚಾರಣಾಧೀನ ಕೈದಿ ಮಹಮ್ಮದ್ ಖಲೀಲ್ ಅಲಿಯಾಸ್ ಬಾಂಬೆ ಸಲೀಂ, ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಹೈಡ್ರಾಮಾ ಸೃಷ್ಟಿಸಿದ ಘಟನೆ ನಡೆದಿದೆ.
ಕುಖ್ಯಾತ ಕಳ್ಳನಾಗಿರುವ ಬಾಂಬೆ ಸಲೀಂ, ಟಿನ್ನರ್ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೊಲೀಸರಿಗೆ ಬೆದರಿಕೆ ಹಾಕಿದ್ದಾನೆ. ಈ ಘಟನೆಯಲ್ಲಿ ಬಾಂಬೆ ಸಲೀಂ, ಪೊಲೀಸ್ ಸಿಬ್ಬಂದಿ ಸಂತೋಷ್ ಹಾಗೂ ಹುಲಗಪ್ಪ ಎಂಬುವರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಇದರ ಜೊತೆಗೆ, 'ಸ್ಥಳಕ್ಕೆ ಎಸ್ಪಿಯವರನ್ನು ಕರೆಸಿ' ಎಂದು ಗಲಾಟೆ ಮಾಡಿದ್ದಾನೆ.
ಕುಖ್ಯಾತ ಬಾಂಬೆ ಸಲೀಂ ಯಾರು?
ಇತ್ತೀಚೆಗೆ ಪೊಲೀಸ್ ಯೂನಿಫಾರಂ ಧರಿಸಿ ವೈರಲ್ ಆಗಿದ್ದ ಬಾಂಬೆ ಸಲೀಂ, ಆಡುಗೋಡಿ ಪೊಲೀಸ್ ವಸತಿಯ ಕಾನ್ಸ್‌ಟೇಬಲ್ ಮನೆಯಲ್ಲಿ ತಂಗಿದ್ದ ಆರೋಪವನ್ನೂ ಎದುರಿಸುತ್ತಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೆಪಲ್ಲಿ ಪೊಲೀಸ್ ಠಾಣೆಯಲ್ಲಿ ಕಳೆದ ವರ್ಷ ದಾಖಲಾದ ಪ್ರಕರಣದ ಆರೋಪಿಯಾಗಿರುವ ಬಾಂಬೆ ಸಲೀಂ, ಈ ಹಿಂದೆ ಬಳ್ಳಾರಿ ಜೈಲಿನಲ್ಲಿದ್ದು, ಇತ್ತೀಚೆಗೆ ಕೊಪ್ಪಳ ಜೈಲಿಗೆ ವರ್ಗಾವಣೆಯಾಗಿದ್ದ. ಜೈಲಿನಲ್ಲಿ ಅನಾರೋಗ್ಯದ ನೆಪವೊಡ್ಡಿದ್ದರಿಂದ, ಪೊಲೀಸರು ಆರೋಪಿಯನ್ನ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದರು. ಆದರೆ, ಆಸ್ಪತ್ರೆಯಲ್ಲಿ ಈತ ಗಲಾಟೆ ಆರಂಭಿಸಿ, ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.
ಸದ್ಯ, ಈ ಘಟನೆಗೆ ಸಂಬಂಧಿಸಿದಂತೆ ಕೊಪ್ಪಳ ನಗರ ಠಾಣೆಯಲ್ಲಿ ಪೊಲೀಸ್ ಹಾಗೂ ಜಿಲ್ಲಾಸ್ಪತ್ರೆಯ ಸಿಬ್ಬಂದಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಈ ಘಟನೆಯಿಂದ ಆಸ್ಪತ್ರೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ