ರೌಡಿ ಬಿಕ್ಲು ಶಿವ ಹತ್ಯೆ ಪ್ರಕರಣ : 2ನೇ ಬಾರಿ ನಾಲ್ಕು ಗಂಟೆ ಬೈರತಿ ಬಸವರಾಜ್‌ ವಿಚಾರಣೆ

Kannadaprabha News   | Kannada Prabha
Published : Jul 24, 2025, 07:51 AM IST
Byrati Basavaraj

ಸಾರಾಂಶ

ಭಾರತಿನಗರದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಎರಡನೇ ಬಾರಿ ಕೆ.ಆರ್‌.ಪುರ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಬೈರತಿ ಬಸವರಾಜು ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಬೆಂಗಳೂರು : ಭಾರತಿನಗರದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಎರಡನೇ ಬಾರಿ ಕೆ.ಆರ್‌.ಪುರ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಬೈರತಿ ಬಸವರಾಜು ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ನೋಟಿಸ್ ಹಿನ್ನೆಲೆಯಲ್ಲಿ ಭಾರತಿನಗರ ಠಾಣೆಯಲ್ಲಿ ಪ್ರಕರಣದ ತನಿಖಾಧಿಕಾರಿ ಆಗಿರುವ ಕೆ.ಜಿ.ಹಳ್ಳಿ ಉಪ ವಿಭಾಗದ ಎಸಿಪಿ ಪ್ರಕಾಶ್ ರಾಥೋಡ್ ಅವರ ಮುಂದೆ ಬುಧವಾರ ಬೆಳಗ್ಗೆ 11ಕ್ಕೆ ಬೈರತಿ ಬಸವರಾಜು ಹಾಜರಾದರು. ನಾಲ್ಕು ತಾಸು ಸುದೀರ್ಘವಾಗಿ ಶಾಸಕರನ್ನು ಪ್ರಶ್ನಿಸಿ ಕೇಳಿ ತನಿಖಾಧಿಕಾರಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಬಳಿಕ ಅಗತ್ಯವಿದ್ದರೆ ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿ ಮಧ್ಯಾಹ್ನ 3ಕ್ಕೆ ಶಾಸಕರನ್ನು ವಾಪಸ್‌ ಕಳುಹಿಸಿದ್ದಾರೆ.ಇನ್ನು ತನಗೂ ರೌಡಿ ಬಿಕ್ಲು ಶಿವ ಹತ್ಯೆಗೂ ಸಂಬಂಧವಿಲ್ಲ. ತಾನು ತಪ್ಪು ಮಾಡಿಲ್ಲ. ನನ್ನ ಮೇಲೆ ರಾಜಕೀಯ ದುರುದ್ದೇಶದಿಂದ ಆರೋಪ ಮಾಡಲಾಗಿದೆ ಎಂದು ವಿಚಾರಣೆ ವೇಳೆ ಮತ್ತೆ ಬೈರತಿ ಅಲವತ್ತುಕೊಂಡಿದ್ದಾರೆ ಎನ್ನಲಾಗಿದೆ.

ಜಗ್ಗನ ಜತೆ ಪೋಟೋ ತೋರಿಸಿ ಗ್ರಿಲ್‌

:ಈ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹೆಣ್ಣೂರಿನ ಜಗದೀಶ್ ಅಲಿಯಾಸ್ ಜಗ್ಗನ ಜತೆ ಸ್ನೇಹವು ಶಾಸಕ ಬೈರತಿ ಬಸವರಾಜು ಅವರಿಗೆ ಸಂಕಷ್ಟ ತಂದೊಡ್ಡಿದೆ ಎನ್ನಲಾಗಿದೆ.

ಮೊದಲ ಬಾರಿಗೆ ವಿಚಾರಣೆ ವೇಳೆ ತನಗೆ ಜಗ್ಗನ ಪರಿಚಯವಿಲ್ಲ ಎಂದು ಶಾಸಕರು ಸಮರ್ಥನೆ ನೀಡಿದ್ದರು. ಆದರೆ ಎರಡನೇ ಬಾರಿಯ ವಿಚಾರಣೆ ಸಂದರ್ಭದಲ್ಲಿ ಜಗ್ಗನ ಜತೆ ಶಾಸಕರ ಫೋಟೋಗಳನ್ನು ಮುಂದಿಟ್ಟು ಪ್ರಶ್ನಿಸಿ ಹೇಳಿಕೆ ಪಡೆದಿದ್ದಾರೆ.

ತಮಗೆ ಪರಿಚಯವಿಲ್ಲ ಅಂದ ಮೇಲೆ ಉತ್ತರ ಪ್ರದೇಶ ರಾಜ್ಯದ ಪ್ರಯಾಗರಾಜ್‌ನಲ್ಲಿ ನಡೆದ ಕುಂಭಮೇಳಕ್ಕೆ ಜಗ್ಗನ ಜತೆ ಹೋಗಿದ್ದೀರಿ. ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಜಗ್ಗನ ಜತೆ ಪ್ರಮುಖವಾಗಿ ಕಾಣಿಸಿಕೊಂಡಿರುವ ಫೋಟೋಗಳು ನಮ್ಮ ಬಳಿ ಇವೆ ಎಂದು ಶಾಸಕರನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗಳಿಗೆ ತಬ್ಬಿಬ್ಬಾಗಿ ಶಾಸಕರ ಹಣೆಯಲ್ಲಿ ಬೆವರು ಹನಿಗಳು ಮೂಡಿವೆ ಎಂದು ಮೂಲಗಳು ಮಾಹಿತಿ ನೀಡಿವೆ.ಅಲ್ಲದೆ ಜಗ್ಗನ ಮನೆಯಲ್ಲಿ ಸಹ ಶಾಸಕರ ಜತೆ ಆತ್ಮೀಯ ಒಡನಾಟದ ಪೋಟೋಗಳು ಪತ್ತೆಯಾಗಿದ್ದವು. ಇವುಗಳನ್ನು ತೋರಿಸಿ ಸಹ ಶಾಸಕರಿಗೆ ತನಿಖಾಧಿಕಾರಿ ವಿವರಣೆ ಕೇಳಿದ್ದಾರೆ. ಆದರೆ ಯಾವುದಕ್ಕೂ ಸ್ಪಷ್ಟ ಉತ್ತರ ನೀಡದೆ ಅವರು ಜಾರಿಕೊಂಡಿದ್ದಾರೆ ಎನ್ನಲಾಗಿದೆ.

ಹಣಕಾಸು ಕುರಿತು ಮಾಹಿತಿ:

ಅಲ್ಲದೆ ಜಗ್ಗನ ಜತೆ ಬೈರತಿ ಬಸವರಾಜು ಅವರು ಹೊಂದಿದ್ದಾರೆ ಎನ್ನಲಾಗಿರುವ ಭೂ ಹಾಗೂ ಆರ್ಥಿಕ ವ್ಯವಹಾರ ಕುರಿತು ಸಹ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಕೆ.ಆರ್‌.ಪುರ ಹಾಗೂ ಮಹದೇವಪುರ ವ್ಯಾಪ್ತಿಯಲ್ಲಿ ಖಾಲಿ ನಿವೇಶನಗಳಿಗೆ ಜಗ್ಗ ಬೇಲಿ ಹಾಕಿ ತೊಂದರೆ ಕೊಡುತ್ತಿದ್ದ. ಇದಕ್ಕೆ ರಾಜಕೀಯ ಶಕ್ತಿಯಾಗಿ ಬೈರತಿ ಬಸವರಾಜು ಅವರ ಹೆಸರನ್ನು ಆತ ಬಳಸಿಕೊಂಡಿರುವ ಆರೋಪಗಳಿವೆ. ಅಲ್ಲದೆ, ಜಗ್ಗನನ್ನು ಮುಂದಿಟ್ಟುಕೊಂಡು ಕೆಲ ಭೂಮಿ ಖರೀದಿ ಹಾಗೂ ಮಾರಾಟದಲ್ಲಿ ಅವರು ಪಾತ್ರವಹಿಸಿದ್ದರು. ಹೀಗಾಗಿ ಈ ವ್ಯವಹಾರ ಕುರಿತು ಸಹ ಶಾಸಕರಿಂದ ಪೊಲೀಸರು ವಿವರಣೆ ಕೇಳಿದ್ದಾರೆ ಎಂದು ತಿಳಿದು ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!