ಬಿಎಂಟಿಸಿಗೆ ಬಹುಕೋಟಿ ವಂಚನೆ, ಅಧಿಕಾರಿಗಳಿಂದಲೇ ನಕಲಿ ಸಹಿ: ಎಷ್ಟು ಹಣ, ಅಧಿಕಾರಿಗಳ ಹೆಸರೇನು?

By Kannadaprabha NewsFirst Published Oct 5, 2023, 5:24 AM IST
Highlights

ಮೂರು ವರ್ಷಗಳ ಅವಧಿಯಲ್ಲಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಮತ್ತು ನಿರ್ದೇಶಕರ ನಕಲಿ ಸಹಿ ಮಾಡಿ ಸಂಸ್ಥೆಗೆ ಕೋಟ್ಯಂತ ರುಪಾಯಿ ವಂಚಿಸಿದ ಪ್ರಕರಣ ಸಂಬಂಧ ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರನ್ನು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. 
 

ಬೆಂಗಳೂರು (ಅ.05): ಮೂರು ವರ್ಷಗಳ ಅವಧಿಯಲ್ಲಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಮತ್ತು ನಿರ್ದೇಶಕರ ನಕಲಿ ಸಹಿ ಮಾಡಿ ಸಂಸ್ಥೆಗೆ ಕೋಟ್ಯಂತ ರುಪಾಯಿ ವಂಚಿಸಿದ ಪ್ರಕರಣ ಸಂಬಂಧ ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರನ್ನು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರಾಗಿದ್ದ ಶ್ರೀರಾಮ್‌ ಮುಲ್ಕವಾನ್‌ ಬಂಧಿತರಾಗಿದ್ದು, ತಪ್ಪಿಸಿಕೊಂಡಿರುವ ಬಿಎಂಟಿಸಿ ಕೇಂದ್ರ ಕಚೇರಿಯ ಅಂಕಿ ಅಂಶ ಅಧಿಕಾರಿ ಶ್ಯಾಮಲಾ.ಎಸ್‌.ಮದ್ದೋಡಿ, ಸಹಾಯಕ ಸಂಚಾರ ವ್ಯವಸ್ಥಾಪಕಿ ಬಿ.ಕೆ.ಮಮತಾ, ಸಹಾಯಕ ಸಂಚಾರ ಅಧೀಕ್ಷಕಿ ಟಿ.ಅನಿತಾ, ಕಿರಿಯ ಸಹಾಯಕ ಪ್ರಕಾಶ್ ಕೊಪ್ಪಳ, ಸಹಾಯಕ ಸಂಚಾರ ನಿರೀಕ್ಷಕಿ ಗುಣಶೀಲಾ, ಕಿರಿಯ ಸಹಾಯಕ ಆರ್‌.ವೆಂಕಟೇಶ್ ಪತ್ತೆಗೆ ತನಿಖೆ ನಡೆದಿದೆ. ಈ ಹಗರಣದ ಬಗ್ಗೆ ಭದ್ರತಾ ಮತ್ತು ಜಾಗೃತ ದಳದ ಸಹಾಯಕ ಕಾರ್ಯದರ್ಶಿ ಸಿ.ಕೆ.ರಮ್ಯಾ ದೂರು ನೀಡಿದ್ದರು. ಅದರನ್ವಯ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡ ವಿಲ್ಸನ್‌ ಗಾರ್ಡನ್‌ ಠಾಣೆ ಪೊಲೀಸರು, ಶ್ರೀರಾಮ್‌ ಮುಲ್ಕವಾನ್‌ನನ್ನು ಬಂಧಿಸಿದ್ದಾರೆ.

Latest Videos

ಕಾಂಗ್ರೆಸ್ ಸೋಲಿಸಲು ಬಿಜೆಪಿ-ಜೆಡಿಎಸ್ ಒಂದಾಗಿದೆ: ನಿಖಿಲ್ ಕುಮಾರಸ್ವಾಮಿ

ಹೇಗೆ ವಂಚನೆ: ಬಿಎಂಟಿಸಿಯ ವಾಣಿಜ್ಯ ಶಾಖೆಯಲ್ಲಿ ಆರೋಪಿತ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದರು. ನಗರದ ವಿವಿಧೆಡೆ ಬಿಎಂಟಿಸಿ ಒಡೆತನದ ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದು, ಇದರಲ್ಲಿ ಹೋಟೆಲ್‌ಗಳು, ಮಳಿಗೆಗಳು ಹಾಗೂ ಸಮುದಾಯ ಭವನಗಳಿಗೆ ಬಾಡಿಗೆ ನೀಡಲಾಗಿದೆ. ಇವುಗಳಿಂದ ಬಾಡಿಗೆ ರೂಪದಲ್ಲಿ ಬಿಎಂಟಿಸಿಗೆ ಕೋಟ್ಯಂತರ ರು. ಆದಾಯವಿದೆ. ಆದರೆ ಬಿಎಂಟಿಸಿಗೆ ವಾಣಿಜ್ಯ ವಲಯದ ಆದಾಯದಲ್ಲಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ನಿರ್ದೇಶಕರ ಸಹಿಗಳನ್ನು ನಕಲಿ ಮಾಡಿ ಈ ಆರೋಪಿತ ಅಧಿಕಾರಿಗಳು ವಂಚಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಏನಿದು ಹಗರಣ?:  ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಹಾಗೂ ಭದ್ರತೆ ಮತ್ತು ಜಾಗೃತ ದಳದ ನಿರ್ದೇಶಕ ಕೆ.ಅರುಣ್ ಅವರು ಅನ್ಯ ಕಡತದಲ್ಲಿ ಅನುಮೋದಿಸಿದ್ದ ಸಹಿಗಳನ್ನು ಕಲರ್‌ ಜೆರಾಕ್ಸ್ ಮಾಡಿಸಿ ಪ್ರತ್ಯೇಕವಾಗಿ ₹10.5 ಕೋಟಿ ಹಾಗೂ ₹6.91 ಕೋಟಿ ಅವ್ಯವಹಾರ ನಡೆಸಿದ್ದಾರೆ. ಲಾಕ್‌ಡೌನ್ ವೇಳೆ ವಿನಾಯಿತಿ ನೀಡುವ ಸಂಬಂಧ ಪರವಾನಗಿ ಶುಲ್ಕ ಮನ್ನಾ ಮಾಡಬಹುದು ಎಂದು ಷರಾ ಬರೆದು ವ್ಯವಸ್ಥಾಪಕ ನಿರ್ದೇಶಕರು ರೇಜು ಅವರ ಸಹಿಯನ್ನು ಕಲರ್ ಜೆರಾಕ್ಸ್ ಮಾಡಿಸಿ ಸುಮಾರು ₹21.64 ಲಕ್ಷವನ್ನು ಗುಳುಂ ಮಾಡಿದ್ದರು.

ಯಶವಂತಪುರ ಟಿಟಿಎಂಸಿಯಲ್ಲಿ ಶ್ರೀ ಲಕ್ಷ್ಮಿ ಎಂಟರ್‌ಪ್ರೈಸಸ್‌ ಅವರ ಕರಾರು ಅವಧಿ ಮುಕ್ತಾಯವಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಇಲ್ಲದೆ ಪರವಾನಿಯನ್ನು ತಾತ್ಕಾಲಿಕವಾಗಿ ಮುಂದುವರೆಸಿರುವುದು‌ ಅಲ್ಲದೆ ಕರಾರು ಒಪ್ಪಂದದ ನಿಯಮದಂತೆ ಮಿನಿಮಮ್‌ ಲೇಬರ್‌ ಹೊರತುಪಡಿಸಿ ಏರಿಯ ಬೇಸ್‌ ಅಂತ ಸ್ವಚ್ಛಾ ಕಾರ್ಯನಿರ್ವಹಣೆಗೆ ಅನುಕೂಲ ಮಾಡಿಕೊಡುವ ಸಂಬಂಧ ನಿರ್ದೇಶಕ (ಭದ್ರತೆ ಮತ್ತು ಜಾಗೃತ ದಳ) ಕೆ.ಅರುಣ್ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಅವರ ಸಹಿ ಕಲರ್ ಜೆರಾಕ್ಸ್ ಮಾಡಿ ₹1.05 ಲಕ್ಷವನ್ನು ಅವ್ಯವಹಾರ ಮಾಡಿದ್ದರು.

ಈ ಅಕ್ರಮಗಳ ಬಗ್ಗೆ ಮಾಹಿತಿ ಪಡೆದ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು, ಕೂಡಲೇ ಭದ್ರತೆ ಮತ್ತು ಜಾಗೃತ ದಳದ ಅಧಿಕಾರಿಗಳ ನೇತೃತ್ವದಲ್ಲಿ ಇಲಾಖಾ ಮಟ್ಟದ ಆಂತರಿಕ ವಿಚಾರಣೆಗೆ ಸೂಚಿಸಿದರು. ಆಗ ನಕಲಿ ಸಹಿ ಮಾಡಿ ಸಂಸ್ಥೆಗೆ ಆರೋಪಿತ ಅಧಿಕಾರಿಗಳು ಕೋಟ್ಯಂತರ ರು. ವಂಚಿಸಿರುವುದು ಬಯಲಾಯಿತು. ಅಂತೆಯೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ವಿಲ್ಸನ್ ಗಾರ್ಡನ್ ಠಾಣೆಗೆ ಬಿಎಂಟಿಸಿ ಭದ್ರತೆ ಮತ್ತು ಜಾಗೃತ ದಳದ ಕಾರ್ಯದರ್ಶಿ ದೂರು ನೀಡಿದರು.

ಮಿಸ್ಟರ್ ಡಿಕೆಶಿ ನಿಮ್ಮ ಕೆಟ್ಟ ರಾಜಕೀಯ, ಆಟ ನಡೆಯಲ್ಲ: ದೇವೇಗೌಡ

ಅಮಾನತು ಬಳಿ ಬೇರೆಡೆ ಕೆಲಸ: ಈ ವಂಚನೆ ಕೃತ್ಯ ಬೆಳಕಿಗೆ ಬಂದ ನಂತರ ಆರೋಪಿತ ಅಧಿಕಾರಿಗಳನ್ನು ಅಮಾನತುಗೊಳಿಸಿ ಬಳಿಕ ಬೇರೆಡೆಗೆ ರಾಜ್ಯ ಸಾರಿಗೆ ಇಲಾಖೆ ವರ್ಗಾವಣೆಗೊಳಿಸಿತು. ಹಾಗಾಗಿ ವಂಚನೆ ನಡೆದಾಗ ಬಿಎಂಟಿಸಿಯ ಮುಖ್ಯ ಸಂಚಾರ ನಿರ್ದೇಶಕರಾಗಿದ್ದ ಶ್ರೀರಾಮ್‌ ಮುಲ್ಕವಾನ್‌ ಅವರು ಪ್ರಸುತ್ತ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಮಂಡಳಿಯ ಕಾರ್ಯದರ್ಶಿಯಾಗಿದ್ದಾರೆ. ಇನ್ನುಳಿದ ಆರೋಪಿಗಳು ಬೇರೆಡೆ ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!