
ಬೆಂಗಳೂರು (ಏ.30): ಎರಡು ಪ್ರತ್ಯೇಕ ಮನೆಗಳವು ಪ್ರಕರಣಗಳಲ್ಲಿ ಮಹಿಳಾ ರೌಡಿ ಶೀಟರ್ ಸೇರಿ ನಾಲ್ವರನ್ನು ಬಂಧಿಸಿರುವ ಬೊಮ್ಮನಹಳ್ಳಿ ಠಾಣೆ ಪೊಲೀಸರು, ಆರೋಪಿಗಳಿಂದ ₹14 ಲಕ್ಷ ಮೌಲ್ಯದ 160 ಗ್ರಾಂ ಚಿನ್ನಾಭರಣ ಹಾಗೂ ಆಟೋ ರಿಕ್ಷಾವನ್ನು ಜಪ್ತಿ ಮಾಡಿದ್ದಾರೆ.
ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ ಡಿ.ಜೆ.ಹಳ್ಳಿಯ ಶಬರೀನ್ ತಾಜ್ (38), ನೀಲಂ ಅಲಿಯಾಸ್ ನೀಲೋಫರ್ (22) ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ₹11 ಲಕ್ಷ ಮೌಲ್ಯದ 130 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಆಟೋ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಗಾರ್ವೆಬಾವಿಪಾಳ್ಯದ ಮನೆಯೊಂದರ ಬೀಗ ಮುರಿದು ದುಷ್ಕರ್ಮಿಗಳು ಕಳವು ಮಾಡಿದ್ದರು.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪ್ರಕರಣ: ವಿಚಾರಣೆಗೆ ಮಹಿಳಾ ವಕೀಲೆ ನೇಮಕ!
ಬಂಧಿತ ಆರೋಪಿಗಳ ಪೈಕಿ ಶಬರೀನ್ ತಾಜ್ ಡಿ.ಜೆ.ಹಳ್ಳಿಯ ರೌಡಿ ಶೀಟರ್ ಆಗಿದ್ದರೆ, ಆರೋಪಿ ನೀಲಂ ಆಟೋ ಚಾಲಕಿಯಾಗಿದ್ದಾಳೆ. ನೀಲಂ ಪೋಷಕರು ಬಾಲ್ಯದಲ್ಲೇ ಮೃತಪಟ್ಟಿದ್ದಾರೆ. ಹೀಗಾಗಿ ತಂಗಿ ಜತೆಗೆ ಶಬರೀನ್ ತಾಜ್ ಮನೆಯಲ್ಲೇ ಬೆಳೆದಿದ್ದಳು. ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಇಬ್ಬರು ಸೇರಿಕೊಂಡು ಮನೆಗಳವು ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
ಪುರುಷರ ಡ್ರೆಸ್‌ನಲ್ಲಿ ಸುತ್ತಾಟ:
ಆರೋಪಿ ನೀಲಂ ಪುರುಷರಂತೆ ತಲೆ ಕೂದಲು ಕತ್ತರಿಸಿಕೊಂಡು ಪ್ಯಾಂಟ್ ಹಾಗೂ ಶರ್ಟ್ ಧರಿಸಿ ಬಳಿಕ ಆಟೋದಲ್ಲಿ ಶಬರೀನ್ ತಾಜ್‌ಳನ್ನು ಕೂರಿಸಿಕೊಂಡು ನಗರದ ವಿವಿಧೆಡೆ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸಿಕೊಂಡು ಬಳಿಕ ಬೀಗ ಮುರಿದು ಕಳವು ಮಾಡುತ್ತಿದ್ದರು. ಈ ಹಿಂದೆ ಬಾಗಲಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಡಹಗಲೇ ಮನೆಯೊಂದಕ್ಕೆ ನುಗ್ಗಿ ಕಳವು ಮಾಡಿ ಜೈಲು ಸೇರಿದ್ದರು. ಜಾಮೀನು ಪಡೆದು ಹೊರಗೆ ಬಂದ ಬಳಿಕವೂ ತನ್ನ ಕಳವು ಚಾಳಿ ಮುಂದುವರೆಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪ್ರಕರಣ: ವಿಚಾರಣೆ ಮುಂದೂಡಲು ಒಪ್ಪದ ಕೋರ್ಟ್
ರಾಪಿಡೋ ಬೈಕ್ ಸವಾರ ಸೇರಿ ಇಬ್ಬರ ಬಂಧನ:
ಮತ್ತೊಂದು ಪ್ರಕರಣದಲ್ಲಿ ಬೀಗ ಹಾಕಿದ ಮನೆಗಳನ್ನು ಗುರುತಿಸಿಕೊಂಡು ಕಳವು ಮಾಡುತ್ತಿದ್ದ ರಾಪಿಡೋ ಬೈಕ್ ಸವಾರ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ರಾಜು ದಾಸನ್(39) ಹಾಗೂ ಜಿಬಿನ್ ಸರ್ಕಾರ್(28) ಬಂಧಿತರು. ಆರೋಪಿಗಳಿಂದ 3 ಲಕ್ಷ ರು. ಮೌಲ್ಯದ 30 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಬೇಗೂರಿನಲ್ಲಿ ನೆಲೆಸಿದ್ದ ರಾಜು ದಾಸನ್ ರಾಪಿಡೋ ಬೈಕ್ ಚಾಲನೆ ಮಾಡುತ್ತಿದ್ದ. ಜಿಬಿನ್ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರು ಇತ್ತೀಚೆಗೆ ಕಾವೇರಿನಗರದ ಮನೆಯೊಂದರ ಬೀಗ ಮುರಿದು ಕಳವು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ