
ಬೆಂಗಳೂರು (ಮಾ.23): ರಾಜ್ಯ ರಾಜಧಾನಿ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಬರ್ಬರ ಕೊಲೆ ನಡೆದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಮಹಿಳೆಯನ್ನು ಕೊಲೆ ಮಾಡಿ ರಸ್ತೆ ಪಕ್ಕದ ಕಸದ ರಾಶಿಯಲ್ಲಿ ಹಂತಕರು ಎಸೆದು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ಕೆಂಗೇರಿಯ ಮುಖ್ಯ ರಸ್ತೆಯಲ್ಲಿರುವ ಮೈಲ್ಸಂದ್ರ ಬಸ್ ನಿಲ್ದಾಣದ ಹಿಂಭಾಗದಲ್ಲಿ ಈ ಘಟನೆ ನಡೆದಿದೆ. ಮಹದೇಶ್ವರ ಬಡಾವಣೆಯ ನಿವಾಸಿಯಾದ ಕೆಂಪಮ್ಮ (45) ಎಂಬುವವರೇ ಕೊಲೆಯಾದ ದುರ್ದೈವಿ. ಹಂತಕರು ಮಹಿಳೆಯನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ರಸ್ತೆ ಪಕ್ಕದ ಕಸದ ರಾಶಿಯಲ್ಲಿ ಎಸೆದಿದ್ದಾರೆ. ಇಂದು ಮುಂಜಾನೆ ರಸ್ತೆಯಲ್ಲಿ ಓಡಾಡುತ್ತಿದ್ದ ಸ್ಥಳೀಯರು ಕಸದ ರಾಶಿಯಲ್ಲಿ ಮೃತದೇಹ ಇರುವುದನ್ನು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಮಹಿಳೆಯ ತಲೆಗೆ ಯಾವುದೋ ಭಾರವಾದ ವಸ್ತುವಿನಿಂದ ಬಲವಾಗಿ ಹೊಡೆದು ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಹಂತಕರು ಬೇರೆಡೆ ಕೊಲೆ ಮಾಡಿ ಇಲ್ಲಿ ತಂದು ಎಸೆದಿದ್ದಾರೆಯೇ ಅಥವಾ ಇಲ್ಲೇ ಕೃತ್ಯ ಎಸಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಸ್ಥಳೀಯರು 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ (FSL) ತಂಡ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದು, ಬೆರಳಚ್ಚು ಹಾಗೂ ಇತರೆ ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ. ಮೃತ ಮಹಿಳೆ ಕೆಂಪಮ್ಮ ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಹತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನು ತಿಳಿದುಬಂದಿಲ್ಲ. ಹಳೆಯ ದ್ವೇಷ ಅಥವಾ ಹಣಕಾಸಿನ ವಿಚಾರವಾಗಿ ಈ ಕೊಲೆ ನಡೆದಿದೆಯೇ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಜನನಿಬಿಡ ಪ್ರದೇಶವಾದ ಕೆಂಗೇರಿಯ ಮೈಲ್ಸಂದ್ರದ ಬಳಿಯೇ ಇಂತಹ ಘಟನೆ ನಡೆದಿರುವುದು ಸ್ಥಳೀಯ ನಿವಾಸಿಗಳನ್ನು ಆತಂಕಕ್ಕೆ ತಳ್ಳಿದೆ. 'ಬೆಳಗ್ಗೆ ರಸ್ತೆಯಲ್ಲಿ ಹೋಗುವಾಗ ಶವ ಕಂಡುಬಂತು, ಕೂಡಲೇ ಪೊಲೀಸರಿಗೆ ಫೋನ್ ಮಾಡಿದೆವು. ಮಹಿಳೆಯ ತಲೆಗೆ ಜೋರಾಗಿ ಹೊಡೆದಂತೆ ಕಾಣುತ್ತಿತ್ತು' ಎಂದು ಸ್ಥಳೀಯರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿರುವ ಪೊಲೀಸರು ಹಂತಕರ ಪತ್ತೆಗಾಗಿ ಬಲೆ ಬೀಸಿದ್ದಾರೆ. ಈ ಬಗ್ಗೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ