ಪ್ರಿಯತಮನ ಜತೆ ಜಗಳ.. ಪಿಜಿಯಲ್ಲಿ ನೇಣಿಗೆ ಶರಣಾದ ಬಿಬಿಎ ವಿದ್ಯಾರ್ಥಿನಿ: ಪ್ರೇಮಿ ವಿರುದ್ಧ ಎಫ್‌ಐಆರ್

Published : Oct 19, 2025, 10:25 AM IST
BBA student

ಸಾರಾಂಶ

ವೈಯಕ್ತಿಕ ಕಾರಣದ ಹಿನ್ನೆಲೆಯಲ್ಲಿ ಬೇಸರಗೊಂಡು ಖಾಸಗಿ ಕಾಲೇಜಿನ ಎರಡನೇ ವರ್ಷದ ಬಿಬಿಎ ವಿದ್ಯಾರ್ಥಿನಿಯೊಬ್ಬಳು ಆತ್ಮ*ಹತ್ಯೆಗೆ ಶರಣಾಗಿರುವ ಘಟನೆ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು (ಅ.19): ವೈಯಕ್ತಿಕ ಕಾರಣದ ಹಿನ್ನೆಲೆಯಲ್ಲಿ ಬೇಸರಗೊಂಡು ಖಾಸಗಿ ಕಾಲೇಜಿನ ಎರಡನೇ ವರ್ಷದ ಬಿಬಿಎ ವಿದ್ಯಾರ್ಥಿನಿಯೊಬ್ಬಳು ಆತ್ಮ*ಹತ್ಯೆಗೆ ಶರಣಾಗಿರುವ ಘಟನೆ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾಡುಸೊಣ್ಣಪ್ಪನಹಳ್ಳಿಯ ಗ್ರೀನ್‌ ಗಾರ್ಡನ್ ಲೇಔಟ್‌ನ ಪಿಜಿ ನಿವಾಸಿ ಸನಾ ಪರ್ವಿನ್‌ (19) ಮೃತ ದುರ್ದೈವಿ. ಪಿಜಿಯಲ್ಲಿ ಶುಕ್ರವಾರ ಮಧ್ಯಾಹ್ನ ಸನಾ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದು, ಕೆಲ ಹೊತ್ತಿನ ಬಳಿಕ ಪಿಜಿಗೆ ಮೃತಳ ಸ್ನೇಹಿತೆಯರು ಮರಳಿದಾಗ ಘಟನೆ ಬೆಳಕಿಗೆ ಬಂದಿದೆ.

ಪ್ರೇಮ ಗಲಾಟೆ?: ಕಾಡುಸೊಣ್ಣಪ್ಪನಹಳ್ಳಿ ಸಮೀಪದ ಖಾಸಗಿ ಕಾಲೇಜಿನಲ್ಲಿ ಮಡಿಕೇರಿಯ ಸೋಮವಾರಪೇಟೆ ತಾಲೂಕಿನ ಗರಗಂಡೂರು ಗ್ರಾಮದ ಗುತ್ತಿಗೆದಾರ ಅಬ್ದುಲ್‌ ನಜೀರ್ ಪುತ್ರಿ ಸನಾ ಪರ್ವಿನ್‌ ಓದುತ್ತಿದ್ದಳು. ಅದೇ ಕಾಲೇಜಿನ ಹಳೆಯ ವಿದ್ಯಾರ್ಥಿ ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ರಿಫಾಸ್‌ ಜತೆ ಸನಾ ಸ್ನೇಹವಾಗಿತ್ತು. ಈ ಗೆಳೆತನವು ಬಳಿಕ ಪ್ರೇಮವಾಗಿತ್ತು. ಈ ಪ್ರೇಮಿಗಳ ಮಧ್ಯೆ ಸಣ್ಣಪುಟ್ಟ ವಿಚಾರಗಳಿಗೆ ವಿರಸವಾಗಿ ಮುನಿಸುಕೊಳ್ಳುತ್ತಿದ್ದರು. ಅಂತೆಯೇ ಶುಕ್ರವಾರ ಕೂಡ ರಿಫಾಸ್ ಜತೆ ವೈಯಕ್ತಿಕ ವಿಚಾರವಾಗಿ ಸನಾಳಿಗೆ ಜಗಳವಾಗಿದೆ.

ಬಳಿಕ ತನ್ನ ಸ್ನೇಹಿತರಿಗೆ ಕಾಲೇಜಿಗೆ ಬರುವುದಿಲ್ಲ ಎಂದು ಹೇಳಿ ಪಿಜಿಯಲ್ಲೇ ಸನಾ ಉಳಿದಿದ್ದಾಳೆ. ಗೆಳತಿಗೆ ಮತ್ತೆ ರಿಫಾಸ್‌ ಕರೆ ಮಾಡಿದ್ದಾನೆ. ಆದರೆ ಆಕೆ ಕರೆ ಸ್ವೀಕರಿಸಿಲ್ಲ, ಇದರಿಂದ ಆತಂಕಗೊಂಡ ರಿಫಾಸ್‌, ಕೂಡಲೇ ತನ್ನ ಸ್ನೇಹಿತರಿಗೆ ಕರೆ ಮಾಡಿ ತಕ್ಷಣವೇ ಸನಾಳ ಪಿಜಿಗೆ ಹೋಗುವಂತೆ ಹೇಳಿದ್ದಾನೆ. ಆಗ ಮಾಹಿತಿ ಪಡೆದು ಸನಾ ಸ್ನೇಹಿತೆಯರ ಜತೆ ಪಿಜಿ ಬಳಿಗೆ ರಿಫಾನ್ ಸ್ನೇಹಿತರು ಬಂದಿದ್ದಾರೆ. ಅಷ್ಟರಲ್ಲಿ ನೇಣು ಬಿಗಿದುಕೊಂಡು ಸನಾ ಆತ್ಮ*ಹತ್ಯೆ ಮಾಡಿಕೊಂಡಿದ್ದಳು ಎಂದು ಪೊಲೀಸ್ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಕೇರಳದ ರಿಫಾಸ್ ವಿರುದ್ಧ ಎಫ್‌ಐಆರ್: ತಮ್ಮ ಮಗಳ ಸಾವಿಗೆ ರಿಫಾಸ್‌ ಕಾರಣವಾಗಿದ್ದಾನೆ ಎಂದು ಆರೋಪಿಸಿ ಬಾಗಲೂರು ಠಾಣೆ ಪೊಲೀಸರಿಗೆ ಮೃತಳ ಪೋಷಕರು ದೂರು ನೀಡಿದ್ದಾರೆ. ಅದರನ್ವಯ ಮೃತಳ ಸ್ನೇಹಿತನ ಮೇಲೆ ಆತ್ಮ*ಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಮ್ಮ ಮಗಳು ಸನಾಳಿಗೆ ಪದೇ ಪದೇ ಕರೆ ಹಾಗೂ ಮೆಸೇಜ್ ಮಾಡಿ ರಿಫಾಸ್‌ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ನಮಗೆ ಮಗಳು ಹೇಳಿದ್ದಳು. ಈ ವಿಷಯವನ್ನು ಕಾಲೇಜಿನ ಬಿಬಿಎ ವಿಭಾಗದ ಮುಖ್ಯಸ್ಥರಿಗೆ ತಿಳಿಸಿದ್ದೆವು. ಆಗ ರಿಫಾಸ್‌ನನ್ನು ಕರೆಸಿ ಸನಾಳ ತಂಟೆಗೆ ಹೋಗದಂತೆ ಎಚ್‌ಓಡಿ ಎಚ್ಚರಿಕೆ ಕೊಟ್ಟಿದ್ದರು. ಇದಾದ ನಂತರವು ಮಗಳಿಗೆ ಆತನು ಕಿರುಕುಳ ಕೊಡುತ್ತಿದ್ದ. ಈತನ ಹಿಂಸೆ ಸಹಿಸಲಾರದೆ ಮಗಳು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ತಂದೆ ನಜೀರ್ ಆರೋಪಿಸಿದ್ದಾರೆ.

ವಿಶೇಷ ಮನವಿ

ಆತ್ಮ8ತ್ಯೆ ಮಾಡಿಕೊಳ್ಳುವ ಮುನ್ನ ಒಮ್ಮೆ ಯೋಚಿಸಿ... ಆತ್ಮ8ತ್ಯೆ ಮಾಡಿಕೊಂಡ ನಂತ್ರ ಮುಂದೇನು? ಸಮಸ್ಯೆಗೆ ಪರಿಹಾರ ಸಿಗುತ್ತಾ? ಇಲ್ಲ... ಬದಲಾಗಿ ಯಾವ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡ್ರೋ ಅದೇ ನಿಮ್ಮ ಐಡೆಂಟಿಟಿಯಾಗಿ ಬಿಡುತ್ತೆ. ಮುಂದೆ, ಆತ್ಮ8ತ್ಯೆ ಮಾಡಿಕೊಂಡವರನ್ನು ಆ 'ಕಾರಣ'ಕ್ಕಾಗಿಯೇ ನೆನಪಿಟ್ಟುಕೊಳ್ಳಲಾಗುತ್ತೆ. ನೀವು ಅಥವಾ ನಿಮಗೆ ಪರಿಚಿತರಾದ ಯಾರಾದರೂ 'ಆತ್ಮ8ತ್ಯೆ' ಯೋಚನೆಗಳನ್ನು ಹೊಂದಿದ್ದರೆ, ನಿಮಗಾಗಿ ನೆರವು ಲಭ್ಯವಿದೆ. ಜಗತ್ತಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ನೀವು ಒಬ್ಬರು ಮಾತ್ರವಲ್ಲ ಎಂಬುದನ್ನು ದಯವಿಟ್ಟು ತಿಳಿದುಕೊಳ್ಳಿ. ಕೆಲವೊಮ್ಮೆ ಜೀವನ ಬಹಳ ಬೇಡವೆಂದೇ ಅನಿಸುತ್ತಿರಬಹುದು, ಆದರೆ ನೆರವು ಯಾವಾಗಲೂ ಲಭ್ಯವಿರುತ್ತದೆ. ಜಗತ್ತಿನಲ್ಲಿ ಪರಿಹಾರವಿಲ್ಲದ ಸಮಸ್ಯೆಗಳಿಲ್ಲ. ತಮ್ಮವರ ಅಥ್ವಾ ಯಾರಾದರ ಜೊತೆ ಮಾತನಾಡುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಖಂಡಿತಾ ಸಿಗುತ್ತೆ. ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಲು ಅಥವಾ ಸಹಾಯವಾಣಿಗೆ ಕರೆ ಮಾಡಿ: Sahai Helpline - 080 2549 7777

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!