ಸ್ನೇಹಿತನ ಮನೆಗೆ ಪಾರ್ಟಿ ಬಂದು ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಸುಬ್ರಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಡಿ.14): ಸ್ನೇಹಿತನ ಮನೆಗೆ ಪಾರ್ಟಿ ಬಂದು ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಸುಬ್ರಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉತ್ತರಹಳ್ಳಿಯ ಮೂಕಾಂಬಿಕಾನಗರದ ಅಪಾರ್ಟ್‌ಮೆಂಟ್ ನಿವಾಸಿ ಎಂ.ಭರತ್(25) ಬಂಧಿತ. ಆರೋಪಿಯಿಂದ ಸುಮಾರು ₹35 ಲಕ್ಷ ಮೌಲ್ಯದ 453 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಗೌಡನಪಾಳ್ಯ ವೈ.ಸಿ.ಕೆಂಪಣ್ಣ ಲೇಔಟ್ ನಿವಾಸಿ ಪಾಂಡು ನಾಯ್ಡು ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಏನಿದು ಪ್ರಕರಣ?: ದೂರುದಾರ ಪಾಂಡು ನಾಯ್ಡು ಅವರು ಡಿ.4ರಂದು ಅಕ್ಕನ ಮಗನ ಮದುವೆ ಹಿನ್ನೆಲೆ ಕುಟುಂಬದ ಸದಸ್ಯರ ಆಂಧ್ರಪ್ರದೇಶ ಚಿತ್ತೂರಿಗೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ಅವರ ಮಗ ಮಣಿ ಮಾತ್ರ ಇದ್ದ. ಅಂದು ಮನೆಯಲ್ಲಿ ಯಾರು ಇಲ್ಲದಿದ್ದರಿಂದ ಮಣಿ ತನ್ನ ಸ್ನೇಹಿತರಾದ ಭರತ್, ವೆಂಕಟೇಶ್, ದಿನೇಶ್ ಅವರನ್ನು ಮನೆಗೆ ಕರೆಸಿಕೊಂಡು ರಾತ್ರಿ ಮನೆಯಲ್ಲೇ ಪಾರ್ಟಿ ಮಾಡಿದ್ದರು. ಬಳಿಕ ನಾಲ್ವರೂ ಅಲ್ಲೇ ಮಲಗಿದ್ದಾರೆ. ಮಾರನೇ ದಿನ ಬೆಳಗ್ಗೆ ನಿದ್ದೆಯಿಂದ ಎದ್ದ ಬಳಿಕ ಮಣಿ, ಮೂವರು ಸ್ನೇಹಿತರು ಪುಷ್ಪ-2 ಸಿನಿಮಾಗೆ ಹೋಗಿ ಬಳಿಕ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ.
ಲಾಠಿಚಾರ್ಜ್ ಮಾಡಿಸಿದ ಐಪಿಎಸ್ ಅಧಿಕಾರಿ ಮುಂಬಡ್ತಿ ತಡೆಯುವೆ: ಶಾಸಕ ಯತ್ನಾಳ್
ಪೋಷಕರು ಮನೆಗೆ ಬಂದಾಗ ಕಳ್ಳತನ ಬೆಳಕಿಗೆ: ಪಾಂಡು ನಾಯ್ಡು ಅವರು ಡಿ.5ರಂದು ಮಧ್ಯಾಹ್ನ ಆಂಧ್ರಪ್ರದೇಶದಿಂದ ಮನೆಗೆ ವಾಪಾಸ್ ಆಗಿದ್ದಾರೆ. ಈ ವೇಳೆ ಬೀರುವಿನಲ್ಲಿದ್ದ ಚಿನ್ನಾಭರಣಗಳು ಕಾಣಿಸಿಲ್ಲ. ಈ ಬಗ್ಗೆ ಮಗ ಮಣಿಯನ್ನು ವಿಚಾರ ಮಾಡಿದಾಗ, ರಾತ್ರಿ ಮೂವರು ಸ್ನೇಹಿತರು ಮನೆಗೆ ಬಂದಿದ್ದು, ಊಟ ಮಾಡಿಕೊಂಡು ಇಲ್ಲೇ ಮಲಗಿ ಬೆಳಗ್ಗೆ ಎದ್ದು ಹೋದರು. ಬೀರುವಿನಲ್ಲಿದ್ದ ಚಿನ್ನಾಭರಣ ಕಳ್ಳತನದ ಬಗ್ಗೆ ಗೊತ್ತಿಲ್ಲ ಎಂದು ಹೇಳಿದ್ದಾನೆ. ಹೀಗಾಗಿ ಪಾಂಡು ನಾಯ್ಡು ಅವರು ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
undefined
ಸ್ನೇಹಿತರು ನಿದ್ದೆಯಲ್ಲಿದ್ದಾಗ ಕಳವು: ಈ ದೂರಿನ ಮೇರೆಗೆ ತನಿಖೆ ಆರಂಭಿಸಿದ ಪೊಲೀಸರು, ದೂರುದಾರರ ಪುತ್ರ ಮಣಿ ಹಾಗೂ ಆತನ ಮೂವರು ಸ್ನೇಹಿತರನ್ನು ಕರೆಸಿ ವಿಚಾರಣೆ ಮಾಡಿದ್ದಾರೆ. ಈ ವೇಳೆ ಭರತ್ ಮೇಲೆ ಅನುಮಾನಗೊಂಡು ತೀವ್ರ ವಿಚಾರಣೆ ಮಾಡಿದಾಗ ಬೀರಿವಿನಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಅಂದು ಪಾರ್ಟಿ ಬಳಿಕ ಎಲ್ಲರೂ ನಿದ್ದೆಗೆ ಜಾರಿದ್ದರು. ನಾನು ಮಧ್ಯರಾತ್ರಿ ಎದ್ದು ಬೀರುವಿನ ಬಾಗಿಲು ತೆರೆದು ಚಿನ್ನಾಭರಣ ಕದ್ದು ಪ್ಯಾಂಟಿನ ಜೇಬಿನಲ್ಲಿ ಇರಿಸಿಕೊಂಡು ಮತ್ತೆ ಮಲಗಿದ್ದೆ.
ಮಾರನೇ ದಿನ ಸ್ನೇಹಿತರ ಜತೆಗೆ ಸಿನಿಮಾ ನೋಡಿ ಬಳಿಕ ಮನೆಗೆ ತೆರಳಿದ್ದೆ. ಕದ್ದ ಚಿನ್ನಾಭರಣಗಳನ್ನು ತನ್ನ ಮನೆಯಲ್ಲಿ ಬಚ್ಚಿಟ್ಟಿರುವುದಾಗಿ ಬಾಯ್ಬಿಟ್ಟಿದ್ದಾನೆ. ಈತ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಮೂಕಾಂಬಿಕಾನಗರದ ಅಪಾರ್ಟ್‌ಮೆಂಟ್‌ನಲ್ಲಿ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಸದ್ಯ ಆರೋಪಿ ಭರತ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೈಂಗಿಕ ದೌರ್ಜನ್ಯ ಪ್ರಕರಣ ವಿಚಾರಣೆ ಭಾರೀ ಸಂಖ್ಯೆಯಲ್ಲಿ ಬಾಕಿ: ಗೃಹಸಚಿವ ಪರಮೇಶ್ವರ್
ಆರೋಪಿ ಏರೋನಾಟಿಕಲ್ ಇಂಜಿನಿಯರ್: ಬಂಧಿತ ಆರೋಪಿ ಭರತ್ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿಧರನಾಗಿದ್ದಾನೆ. ಎಚ್‌ಎಸ್‌ಆರ್ ಲೇಔಟ್‌ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈತನ ಸ್ನೇಹಿತ ಮಣಿಗೆ ಮದುವೆ ನಿಶ್ಚಯವಾಗಿದ್ದು, ಪೋಷಕರು 453 ಗ್ರಾಂ ಚಿನ್ನಾಭರಣ ಖರೀದಿಸಿ ಮನೆಯಲ್ಲಿರಿಸಿದ್ದರು. ಅಂದು ಪಾರ್ಟಿ ದಿನ ಈ ವಿಚಾರ ತಿಳಿದುಕೊಂಡ ಭರತ್, ಸ್ನೇಹಿತರು ನಿದ್ದೆಗೆ ಜಾರಿದ ಬಳಿಕ ಬೀರು ತೆರೆದು ಚಿನ್ನಾಭರಣ ಕಳವು ಮಾಡಿದ್ದ.