ಶುಲ್ಕದ ನೆಪದಲ್ಲಿ ಪಡೆದ ಸೈಬರ್ ವಂಚಕರು| ಅರೆಕೆರೆ ನಿವಾಸಿ ಹರೀಶ್ ಬಾಬು ವಂಚನೆಗೆ ಒಳಗಾದ ವ್ಯಕ್ತಿ| ಬ್ಯಾಂಕ್ ಹಣ ವರ್ಗಾವಣೆ ಹಾಗೂ ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ ಪೊಲೀಸರು|
ಬೆಂಗಳೂರು(ಏ.28): ಕೇಂದ್ರ ಸರ್ಕಾರದ ಯೋಜನೆಯಡಿ ಸಾಲ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಗೆ ನಂಬಿಸಿ 62.77 ಲಕ್ಷವನ್ನು ಖಾತೆಗೆ ಹಾಕಿಸಿಕೊಂಡು ಸೈಬರ್ ವಂಚಕರು ಟೋಪಿ ಹಾಕಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಅರೆಕೆರೆ ನಿವಾಸಿ ಹರೀಶ್ ಬಾಬು ವಂಚನೆಗೆ ಒಳಗಾಗಿದ್ದು, ಇವರು ನೀಡಿದ ದೂರಿನ ಮೇರೆಗೆ ಗೌರವ್, ಅಮಿತ್ ಶರ್ಮಾ, ಕಿರಣ್ ಗೌಡ, ರಾಧಿಕಾ, ಉದಯ್ ಗೌಡ, ಜಿತೇಶ್ ಮತ್ತು ರೇಣುಕಾ ಮಿತ್ತಲ್ ಸೇರಿದಂತೆ ಇತರರ ವಿರುದ್ಧ ಸಿಸಿಬಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬ್ಯಾಂಕ್ ಹಣ ವರ್ಗಾವಣೆ ಹಾಗೂ ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಧು, ಪೋಷಕರು, ಪೂಜಾರಿ ಎಲ್ಲರೂ ನಕಲಿ.. ಮದುವೆ ಆಸೆಗೆ ಹಣ ಕಳೆದುಕೊಂಡ!
ನವೋದ್ಯಮದ ಕನಸು ಕಂಡಿದ್ದ ಹರೀಶ್ ಅವರು, ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರದ ಮುದ್ರಾ ಹಾಗೂ ನವೋದ್ಯಮದ ಯೋಜನೆಯಡಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು. ಆಗ ವೆಬ್‌ಸೈಟ್‌ನಲ್ಲಿ ಹರೀಶ್ ಅವರ ಮಾಹಿತಿ ಕದ್ದಿರುವ ಆರೋಪಿಗಳು, ಬಳಿಕ ಹರೀಶ್ ಅವರಿಗೆ ಸಾಲ ವಿತರಿಸುವ ನೆಪದಲ್ಲಿ ವಂಚಿಸಿದ್ದಾರೆ. ಸಾಲ ಮಂಜೂರಾಗಿದೆ, ಆದರೆ ಹಣ ಬಿಡುಗಡೆ ಮುನ್ನ ಮಂಜೂರಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಕೆಲವು ಶುಲ್ಕ ಭರಿಸಬೇಕಿದೆ ಎಂದಿದ್ದರು. ಈ ಮಾತು ನಂಬಿ ಹರೀಶ್ ಹಂತ ಹಂತವಾಗಿ ಆರೋಪಿಗಳಿಗೆ 62.77 ಲಕ್ಷವನ್ನು ಅವರು ವರ್ಗಾಯಿಸಿದ್ದಾರೆ. ಹಣ ಸಂದಾಯದ ಬಳಿಕ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಆಗಿದೆ. ವಂಚನೆಗೆ ಒಳಗಾಗಿರುವ ಬಗ್ಗೆ ಮನಗೊಂಡ ಹರೀಶ್ ಸಿಸಿಬಿ ಸೈಬರ್ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.