Raichur: ಸತತ ಮಳೆಯಿಂದಾಗಿ ಮನೆ ಗೋಡೆ ಕುಸಿದು ಒಂದೇ ಕುಟುಂಬದ ‌ಮೂವರು ಸಾವು

By Govindaraj SFirst Published Oct 5, 2022, 6:32 AM IST
Highlights

ಜಿಲ್ಲೆಯಾದ್ಯಂತ ಕಳೆದ ನಾಲ್ಕು - ಐದು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಮಳೆಯ ಜೊತೆಗೆ ತಣ್ಣನೆಯ ಗಾಳಿಬೀಸುತ್ತಿದ್ದು, ಜನರು ಹೊರಗೆ ಬರಲು ಆಗದೇ ತಮ್ಮ ಮನೆ ಸೇರಿಕೊಂಡು ನಿದ್ದೆಗೆ ಜಾರುತ್ತಿದ್ದಾರೆ. ಹೀಗೆ ನಿದ್ದೆಗೆ ಜಾರಿದವರೂ ಮಲಗಿದ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. 

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ರಾಯಚೂರು

ರಾಯಚೂರು (ಅ.05): ಜಿಲ್ಲೆಯಾದ್ಯಂತ ಕಳೆದ ನಾಲ್ಕು - ಐದು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಮಳೆಯ ಜೊತೆಗೆ ತಣ್ಣನೆಯ ಗಾಳಿಬೀಸುತ್ತಿದ್ದು, ಜನರು ಹೊರಗೆ ಬರಲು ಆಗದೇ ತಮ್ಮ ಮನೆ ಸೇರಿಕೊಂಡು ನಿದ್ದೆಗೆ ಜಾರುತ್ತಿದ್ದಾರೆ. ಹೀಗೆ ನಿದ್ದೆಗೆ ಜಾರಿದವರೂ ಮಲಗಿದ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಒಬ್ಬರು, ಇಬ್ಬರೂ ಅಲ್ಲ. ಒಟ್ಟು ಮೂರು ಜನರು. ಈ ಘಟನೆಯ ಬಳಿಕ ಈಗ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮ ಪಂಚಾಯತ್‌ನ ಭ್ರಷ್ಟಾಚಾರದ ಬಗ್ಗೆ ಗ್ರಾಮಸ್ಥರು ಮಾತನಾಡಲು ಶುರು ಮಾಡಿದ್ದಾರೆ. 

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಪ್ರತಿ ವರ್ಷವೂ ನಾನಾ ವಸತಿ ಯೋಜನೆಯಲ್ಲಿ ಸರ್ಕಾರ ‌ಮನೆಗಳು ಹಂಚಿಕೆ‌ ಮಾಡುತ್ತಲ್ಲೇ ಬಂದಿದೆ‌. ಕೊರೊನಾ ಕಾರಣದಿಂದ ಕಳೆದ 2-3 ವರ್ಷಗಳಿಂದ ‌ಮನೆಗಳ ಹಂಚಿಕೆ ಆಗಿಲ್ಲ. ಅದು ಬಿಟ್ಟರೇ ನಿರಂತರವಾಗಿ ಪ್ರತಿ ವರ್ಷವೂ ಬಡತನ ರೇಖೆಗಿಂತ ಕೆಳಗಡೆ ಇರುವ ಬಡ ಜನರಿಗೆ ಗುರುತಿಸಿ ಮನೆ ನೀಡುವ ಪದ್ಧತಿ ಇದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ ಮತ್ತು ತಾಲೂಕಾ ಮಟ್ಟದಲ್ಲಿ ತಾಲೂಕಾ ಪಂಚಾಯತ್ ಮತ್ತು  ಗ್ರಾಮದಲ್ಲಿ ಗ್ರಾಮ ಪಂಚಾಯತ್ ಅಂತ ಅಧಿಕಾರವನ್ನು ಹಸ್ತಾಂತರ ಮಾಡಿದ್ದಾರೆ. 

ಒಂದೇ ಟಿಕೆಟ್‌ಗೆ ತಾತ-ಮೊಮ್ಮಗನ ನಡುವೆ ತೀವ್ರ ಪೈಪೋಟಿ; ಯಾರಿಗೆ ಕೊಡುತ್ತೆ ಕೈ?

ಸರ್ಕಾರ ವಿವಿಧ ವಸತಿ ಯೋಜನೆಯಲ್ಲಿ ಮನೆಗಳು ಇಲ್ಲದೆ ಇರುವ ಬಡವರಿಗೆ ಗುರುತಿಸಿ ಗ್ರಾಮ ಮಟ್ಟದಲ್ಲೇ ಗ್ರಾಮಸಭೆ ಮಾಡಿ ಗ್ರಾಮಸ್ಥರ ಎದುರೇ ಪಿಡಿಒ ಮನೆ ಇಲ್ಲದ ಫಲಾನುಭವಿಗಳ ಹೆಸರುಗಳು ಘೋಷಣೆ ‌ಮಾಡಬೇಕು ಎಂಬ ನಿಯಮವಿದೆ. ಆದ್ರೆ ಈಗಿನ ಪಿಡಿಒಗಳು ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಆಯ್ಕೆಗೊಂಡ ಜನಪ್ರತಿನಿಧಿಗಳು ಮನೆ ಹಂಚಿಕೆಯೇ ದೊಡ್ಡ ದಂಧೆ ಮಾಡಿಕೊಂಡಿದ್ದಾರೆ. ಅದರ ಪರಿಣಾಮವೇ ಈ ಮೂವರ ಸಾವು ಎಂದು ಗ್ರಾಮಸ್ಥರ ಆರೋಪವಾಗಿದೆ.

20X20 ವಿಸ್ತೀರ್ಣದ ಮನೆಯಲ್ಲಿ ಮೂವರು ಸಾವು: ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ‌ಕುರ್ಡಿ ಗ್ರಾಮದಲ್ಲಿ ಮಳೆ ನೀರಿಗೆ ಮನೆ ಗೋಡೆ ಬಿದ್ದು ಮೂವರು ಪ್ರಾಣ ಬಿಟ್ಟಿದ್ದಾರೆ. ಘಟನೆಯಲ್ಲಿ 45 ವರ್ಷದ ಪರಮೇಶ್ ಆತನ ಹೆಂಡತಿ ‌ಜಯಮ್ಮ ಹಾಗೂ ತಮ್ಮ ನ ಮಗ ಭರತ್ ಸಾವನ್ನಪ್ಪಿದ್ದಾರೆ. ದುರಂತದ ಸಂಗತಿ ಏನು ಅಂದ್ರೆ,  ಬಿದ್ದಿರುವ ಮನೆಯ ಸುತ್ತಲಿನ ಮೂರು ಭಾಗದಲ್ಲಿ ಶೀಟ್ ಇದೆ. ಒಂದು ಕಡೆ ಮಾತ್ರ ಗೋಡೆಯಿದೆ. ರಾತ್ರಿ ಎಂದಿನಂತೆ ಊಟ ಮಾಡಿ ಮಲಗಿದವರು ಬೆಳಗ್ಗೆ 7 ಗಂಟೆಯಾದರೂ ಯಾವುದೇ ಶಬ್ದ ಬಾರದಕ್ಕೆ ಹೋಗಿ ನೋಡಿದ್ರೆ ಅಲ್ಲಿ ದುರಂತ ಸಂಭವಿಸಿತ್ತು. 

ಗಂಡ - ಹೆಂಡತಿ ಮಲಗಿದ ಹಾಸಿಗೆಯಲ್ಲಿ ಉಸಿರು ಬಿಟ್ಟಿದರೂ, ನಾಲ್ಕು ವರ್ಷದ ತಮ್ಮನ ಮಗ ಭರತ್ ನರಳಾಟ ನಡೆಸಿ, ಇದನ್ನು ನೋಡಿದ ಗ್ರಾಮಸ್ಥರು ನಾಲ್ಕು ವರ್ಷದ ಮಗುವನ್ನು ಕೂಡಲೇ ಮಾನ್ವಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ಪ್ರಯತ್ನ ಮಾಡಿದ್ರೂ, ಆದ್ರೆ ವಿಧಿಯಾಟವೇ ಬೇರೆ ಆಗಿತ್ತು. ಮಗು ಸಹ ಮಾನ್ವಿ ಆಸ್ಪತ್ರೆಗೆ ಹೋಗುವ ಮುನ್ನವೇ ಸಾವನ್ನಪಿತ್ತು. ಈ ಮಾಹಿತಿ ತಿಳಿದು ಎಲ್ಲರೂ ಶಾಕ್ ಆಗಿ ಬಿದ್ದ‌ ಮನೆ ಬಳಿಗೆ ಧಾವಿಸಲು ಮುಂದಾಗಿದ್ರು. ಬಿದ್ದ ಮನೆಯಲ್ಲಿ ಹೋಗಿ ಎರಡು ಶವಗಳನ್ನು ತೆಗೆದು ಬೇರೆ ಸಂಬಂಧಿಕರ ಮನೆ ಬಳಿ ಮಲಗಿಸಿದ್ರು. ಈ ಮಾಹಿತಿ ತಿಳಿದು ಸ್ಥಳಕ್ಕೆ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಭೇಟಿ ನೀಡಿ ಮನೆ ಪರಿಶೀಲನೆಗೆ ಅಂತ ಹೋದಾಗ ಮನೆಯ ಗೋಡೆ ಮತ್ತಷ್ಟು ಶಾಸಕರ ಎದುರೇ ಬಿತ್ತು. ಇದನ್ನು ನೋಡಿದ ಶಾಸಕರು ಶಾಕ್ ಆಗಿದ್ರು.  ಆ ಬಳಿಕ ಮೃತರ ಕುಟುಂಬಸ್ಥರನ್ನ ಭೇಟಿ ಮಾಡಿ ಮಾಹಿತಿ ಕಲೆಹಾಕಿದರು.

ಈ ಮೂವರ ಸಾವಿಗೆ ಯಾರು ಹೊಣೆ: ಕೊರೊನಾ ಕಾರಣದಿಂದ 2-3 ವರ್ಷಗಳಿಂದ ಸರ್ಕಾರದ ವಿವಿಧ ಯೋಜನೆಗಳ ಮನೆಗಳು ಬಂದಿಲ್ಲ. ಹೀಗಾಗಿ ರಾಜ್ಯದಲ್ಲಿ ಮನೆಗಳ ಹಂಚಿಕೆ ಆಗಿಲ್ಲ. ಈ ಹಿಂದೆ ಬಂದಿರುವ ಮನೆಗಳು ಈ ಬಡ ಕುಟುಂಬಕ್ಕೆ ಸಿಕ್ಕಿಲ್ಲ. ಸರ್ಕಾರದ ಮನೆ ಸಿಗದಿದ್ದಕ್ಕೆ ಬಡ ಪರಮೇಶ್ ‌ಕುಟುಂಬವೂ ಮೂರು ಜನ ಮಕ್ಕಳು ‌ಮತ್ತು ಗಂಡ -ಹೆಂಡತಿ ಇದೇ ಪಾಳುಬಿದ್ದ 20X20 ಶೀಟ್ ಮನೆಯಲ್ಲಿ ವಾಸವಾಗಿದ್ರು. ಈ ಮಾಹಿತಿ ಇಡೀ ಗ್ರಾಮ ಪಂಚಾಯತ್ ನ ಸದಸ್ಯರಿಗೆ ಹಾಗೂ ಗ್ರಾಮ ಮಟ್ಟದ ಎಲ್ಲಾ ಅಧಿಕಾರಿಗಳು ಮಾಹಿತಿ ಇತ್ತು. 

ಅದೇ ರೀತಿಯಲ್ಲಿ ಇನ್ನೂ ಹತ್ತಾರು ಕುಟುಂಬಗಳು ಇದೇ ರೀತಿಯಲ್ಲಿ ವಾಸವಾಗಿದ್ದಾರೆ. ಆದ್ರೂ ಈ ಕುಟುಂಬಕ್ಕೆ ಯಾವುದೇ ವಸತಿ ಯೋಜನೆಯ ಲಾಭ ಸಿಕ್ಕಿರಲಿಲ್ಲ. ಈಗ ಅಧಿಕಾರಿಗಳು ಎದ್ದೋ ಬಿದ್ದೋ ಅಂತ ಮೂವರು ಸಾವಿನ ಬಳಿಕ ಸ್ಥಳಕ್ಕೆ ಬಂದು ಅಧಿಕಾರಿಗಳು, ಶಾಸಕರು 24 ಗಂಟೆಯಲ್ಲಿ ಮೃತರ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರ ನೀಡಿ, ಕುಟುಂಬಸ್ಥರಿಗೆ ಸ್ವಾಂತನ ಹೇಳಿದರು. ಆದ್ರೆ ಪ್ರಶ್ನೆ ಅದು ಅಲ್ಲ. ಕಳೆದ 75 ವರ್ಷಗಳಿಂದ ಈ ಗ್ರಾಮಕ್ಕೆ ಮಂಜೂರು ಆಗಿರುವ ಮನೆಗಳು ಯಾರಿಗೆ ಸಿಕ್ಕಿವೆ. ಆ ಬಗ್ಗೆ ತನಿಖೆ ಆಗಬೇಕು ಎಂಬ ಕೂಗು ಗ್ರಾಮಸ್ಥರಿಂದ ಕೇಳಿಬರುತ್ತಿದೆ. ಗ್ರಾಮ ಪಂಚಾಯತ್ನಲ್ಲಿನ ಭ್ರಷ್ಟಾಚಾರವೇ ಈ ಮೂವರ ಸಾವಿಗೆ ಕಾರಣವೆಂಬ ಮಾತುಗಳು ಸಹ ಜೋರಾಗಿವೆ.

ಸರ್ಕಾರದ ಮನೆ ನೀಡಲು 15-20 ಸಾವಿರ ರೂ. ಹಣ ವಸೂಲಿ: ಕೇಂದ್ರ ಮತ್ತು ರಾಜ್ಯ ಸರ್ಕಾರ ಹತ್ತಾರು ವಸತಿ ಯೋಜನೆಗಳು ಜಾರಿಗೆ ತಂದಿದೆ. ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆಯಬಾರದು. ಫಲಾನುಭವಿಗೆ ಸರ್ಕಾರದ ಸೌಲಭ್ಯ ಸಿಗಬೇಕು ಅಂತ ಬ್ಯಾಂಕ್ ಖಾತೆಗೆ ಸರ್ಕಾರವೇ ನೇರವಾಗಿ ಹಣ ಜಮಾ ಮಾಡುತ್ತೆ. ಅಷ್ಟೇ ಅಲ್ಲದೇ ಜಿಪಿಎಸ್ ವ್ಯವಸ್ಥೆಯೂ ಕೂಡ ಜಾರಿಗೆ ತಂದಿದೆ. ಆದ್ರೂ ಸಹ ಗ್ರಾಮ ಪಂಚಾಯತ್ ವ್ಯವಸ್ಥೆಯಲ್ಲಿ ನಡೆಯುವ ಭ್ರಷ್ಟಾಚಾರ ತಡೆಯಲು ಸಾಧ್ಯವಾಗುತ್ತಿಲ್ಲ. ಗ್ರಾಮ ಪಂಚಾಯತ್ ಮಟ್ಟದಲ್ಲಿನ ಪಿಡಿಒ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಹಾಗೂ ಕಂಪ್ಯೂಟರ್ ಆಪರೇಟರ್ ಗಳ ಮೇಲೆ ಸರ್ಕಾರ ‌ತೀವ್ರ‌ ನಿಗಾವಹಿಸಬೇಕಾಗಿದೆ. 

ಈ ಮೂವರು ಹಾಗೂ ಗ್ರಾ.ಪಂ.ಸದಸ್ಯರು ಫಲಾನುಭವಿಗೆ ಮನೆಗೆ ಅರ್ಜಿ ಹಾಕುವ ಮುನ್ಮವೇ ಹಣ ವಸೂಲಿ ‌ಮಾಡುವ ಪದ್ಧತಿ ಶುರು ಮಾಡಿದ್ದಾರೆ. ಯಾರಿಗೆ ಸರ್ಕಾರದ ಮನೆ ಬೇಕೋ ಅವರು 15-20 ಸಾವಿರ ರೂಪಾಯಿ ‌ಗ್ರಾಮ ಪಂಚಾಯತ್ ಸದಸ್ಯರಿಗೆ ನೀಡಬೇಕು. ಆಗ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳ ಸಮೂಹದಲ್ಲಿ ಹಣ ನೀಡಿದವರ ದಾಖಲೆಗಳು ಪಡೆಯುತ್ತಾರೆ. ಆ ಬಳಿಕ  ಗ್ರಾಮ ಸಭೆ ಮಾಡಿ ಗ್ರಾಮಸ್ಥರ ಸಮ್ಮುಖದಲ್ಲಿ ಕೆಲ ಹೆಸರುಗಳು ಘೋಷಣೆ ಮಾಡಿ ದಾಖಲೆಗಳು ರೆಡಿ ಮಾಡುತ್ತಾರೆ. 

ದಸರಾ ಆಚರಣೆಗೆ ರಾಯಚೂರು ನಗರಸಭೆ ಸಿದ್ಧತೆ: ಸಿಬ್ಬಂದಿ, ಪೌರಕಾರ್ಮಿಕರಿಗೆ ಹೊಸ ಬಟ್ಟೆ ವಿತರಣೆ

ಆ ಬಳಿಕ ಯಾವುದೋ ಹೋಟೆಲ್ ಅಥವಾ ಡಾಬಾಗಳಲ್ಲಿ ಕುಳಿತು ಹಣ ನೀಡಿದವರ ಹೆಸರಿನ ಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ನೀಡುತ್ತಾರೆ. ಸರ್ಕಾರ ಪಿಡಿಒ ನೀಡಿದ ಪಟ್ಟಿ ಪೈನಲ್ ಮಾಡಿ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುತ್ತೆ.‌ ಆಗ ಮನೆ ಇದ್ದವರಿಗೆ ಹಣ ಇದ್ದವರಿಗೆ ಮತ್ತೆ ಸರ್ಕಾರದ ಸೌಲಭ್ಯಗಳನ್ನು ದೊರೆಯುತ್ತಾ  ಹೋಗುತ್ತೆ. ಹಣ ಇಲ್ಲದ ಬಡವರೂ ಮನೆ ಅಂತ ಕೇಳಿದ್ರೆ ನಾನು ಲಿಸ್ಟ್ ಕಳುಹಿಸಿದ್ದೇವೆ. ಸರ್ಕಾರ ನೀಡಬೇಕು ಅಂತ ಹಾರಿಕೆ ಉತ್ತರ ನೀಡುತ್ತಾ ಕಾಲಹರಣ ಮಾಡುತ್ತಾರೆ. 

ಹೀಗಾಗಿ ಈ ಬಗ್ಗೆ ತನಿಖೆ ನಡೆಯಬೇಕು. ಅಷ್ಟೇ ಅಲ್ಲದೇ ಗ್ರಾಮ ಪಂಚಾಯತ್ ಸದಸ್ಯರೇ ತಮ್ಮ ಕುಟುಂಬಸ್ಥರ ಹೆಸರಿನಲ್ಲಿ ಮನೆಗಳು ಹಾಕಿಕೊಂಡು ಹಣ ಮಾಡುವ ದಂಧೆಯೂ ವ್ಯವಸ್ಥಿತವಾಗಿ ನಡೆದಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ ಮತ್ತೊಂದು ದುರಂತ ಆಗದಂತೆ ತಡೆಯಬೇಕಾಗಿದೆ. ಒಟ್ಟಿನಲ್ಲಿ ರಾಯಚೂರು ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯತ್ ಮಟ್ಟದಲ್ಲಿ ವಸತಿ ಯೋಜನೆಯಲ್ಲಿ ಭಾರೀ  ಭ್ರಷ್ಟಾಚಾರ ನಡೆದಿದೆ. ಈಗಲೂ ಸಹ ನಡೆಯುತ್ತಿದೆ ಈ ಮೂವರ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಗ್ರಾಮ ಪಂಚಾಯತ್ ಮಟ್ಟದಲ್ಲಿನ ಹಣ ವಸೂಲಿ ದಂಧೆಗೆ ಜಿಲ್ಲಾ ಪಂಚಾಯತ ಮಟ್ಟದ ಅಧಿಕಾರಿಗಳು ಕಡಿವಾಣ ಹಾಕಬೇಕಾಗಿದೆ.

click me!