
ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮಾಜಿ ಚೀಫ್ ಸೆಲೆಕ್ಟರ್ ಕೃಷ್ಣಮಾಚಾರಿ ಶ್ರೀಕಾಂತ್, ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಮತ್ತು ಆಯ್ಕೆ ಸಮಿತಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಿರಿಯ ವೇಗಿ ಮೊಹಮ್ಮದ್ ಶಮಿಯನ್ನು ಮೂರೂ ಮಾದರಿಗಳಿಂದ ಸಂಪೂರ್ಣವಾಗಿ ಹೊರಗಿಟ್ಟಿದ್ದಕ್ಕೆ ಶ್ರೀಕಾಂತ್ ಗರಂ ಆಗಿದ್ದಾರೆ. 2023ರ ಏಕದಿನ ವಿಶ್ವಕಪ್‌ನಲ್ಲಿ 24 ವಿಕೆಟ್ ಪಡೆದು ಟೂರ್ನಿಯ ಶ್ರೇಷ್ಠ ಬೌಲರ್ ಎನಿಸಿದ್ದ ಶಮಿ, 2025ರ ಚಾಂಪಿಯನ್ಸ್ ಟ್ರೋಫಿ ನಂತರ ಭಾರತ ಪರ ಆಡಿಲ್ಲ. ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಆಯ್ಕೆಗಾರರು ಶಮಿಯನ್ನು ಪರಿಗಣಿಸಲಿಲ್ಲ.
2027ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಭಾರತದ ವೇಗದ ಬೌಲಿಂಗ್ ಪಡೆ ಹೇಗಿರಬೇಕು ಎಂಬ ಚರ್ಚೆ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನಡೆಯುತ್ತಿತ್ತು. ಈ ವೇಳೆ ಶ್ರೀಕಾಂತ್ ತಮ್ಮ ಅಭಿಪ್ರಾಯವನ್ನು ಖಡಕ್ಕಾಗಿ ತಿಳಿಸಿದರು. "ಪ್ರಿನ್ಸ್ ಯಾದವ್, ಗುರ್ನೂರ್ ಬ್ರಾರ್ ಮತ್ತು ಮೊಹ್ಸಿನ್ ಖಾನ್ ಉತ್ತಮ ಬೌಲರ್‌ಗಳು. ಅವರನ್ನು ಯಾರೂ ಕಡೆಗಣಿಸಬಾರದು. ವಿಶ್ವಕಪ್‌ಗೆ ಇನ್ನೂ 15 ತಿಂಗಳ ಸಮಯವಿದೆ, ಹಾಗಾಗಿ ಅವರಿಗೆ ತಂಡಕ್ಕೆ ಬರುವ ಅವಕಾಶವಿದೆ. ಆದರೆ ಶಮಿ ಒಬ್ಬ ಅಸಾಮಾನ್ಯ ಬೌಲರ್ ಆಗಿದ್ದ. ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಅವನನ್ನು ಕಡೆಗಣಿಸಿ ಕಡೆಗಣಿಸಿ, ಏನೂ ಇಲ್ಲದವನನ್ನಾಗಿ ಮಾಡಿಬಿಟ್ಟಿದ್ದು ನನಗೆ ಆಶ್ಚರ್ಯ ತರಿಸಿದೆ" ಎಂದು ಶ್ರೀಕಾಂತ್ ಹೇಳಿದರು.
ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಸಂಪೂರ್ಣ ಭರವಸೆ ಜಸ್ಪ್ರೀತ್ ಬುಮ್ರಾ ಹೆಗಲ ಮೇಲಿದೆ ಎಂದೂ ಶ್ರೀಕಾಂತ್ ಅಭಿಪ್ರಾಯಪಟ್ಟರು. "ವಿಶ್ವಕಪ್ ಹತ್ತಿರವಾಗುತ್ತಿದ್ದಂತೆ ಬುಮ್ರಾ ಅವರ ಮೇಲಿನ ಒತ್ತಡವನ್ನು ನಿರ್ವಹಿಸುವುದು ಬಹಳ ಮುಖ್ಯ. ಅವನು ಭಾರತದ ಅಪರೂಪದ ವಜ್ರ. ಬುಮ್ರಾ ಇದ್ದರೆ ಮಾತ್ರ ಭಾರತ ವಿಶ್ವಕಪ್ ಗೆಲ್ಲಲು ಸ್ವಲ್ಪವಾದರೂ ಅವಕಾಶವಿದೆ. ಆತ ಇಲ್ಲದಿದ್ದರೆ, ಬೇರೆ ಬೌಲರ್‌ಗಳನ್ನು ಇಟ್ಟುಕೊಂಡು ಭಾರತಕ್ಕೆ ಯಾವುದೇ ಚಾನ್ಸ್ ಇಲ್ಲ" ಎಂದು ಅವರು ಸ್ಪಷ್ಟಪಡಿಸಿದರು. ದಕ್ಷಿಣ ಆಫ್ರಿಕಾದ ವಿಕೆಟ್‌ಗಳಲ್ಲಿ ಬುಮ್ರಾಗೆ ಪ್ರಸಿದ್ಧ್ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್ ಕೂಡ ಸಾಥ್ ನೀಡಿ ಮಿಂಚಬಲ್ಲರು ಎಂದು ಶ್ರೀಕಾಂತ್ ತಿಳಿಸಿದರು.
ಭಾರತದ ಎಡಗೈ ವೇಗಿ ಅರ್ಶದೀಪ್ ಸಿಂಗ್ ಅವರನ್ನು ಏಕದಿನ ಕ್ರಿಕೆಟ್‌ಗೆ ಪರಿಗಣಿಸಬಾರದು ಎಂದು ಶ್ರೀಕಾಂತ್ ನೇರವಾಗಿ ಹೇಳಿದರು. "ಅರ್ಶದೀಪ್ 50 ಓವರ್‌ಗಳ ಮಾದರಿಗೆ ಸರಿಹೊಂದುವುದಿಲ್ಲ. ಎರಡು ಓವರ್‌ಗಳ ನಂತರ ಚೆಂಡು ಸ್ವಿಂಗ್ ಆಗುವುದಿಲ್ಲ. ಸ್ವಿಂಗ್ ಇದ್ದಾಗ ಮಾತ್ರ ಅವನು ಅಪಾಯಕಾರಿ. ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲೂ ಮೊದಲ ಓವರ್ ನಂತರ ಬ್ಯಾಟರ್‌ಗಳು ಅವನನ್ನು ಮನಬಂದಂತೆ ಬಾರಿಸಿದ್ದರು. ಹಾಗಾಗಿ, ಅವನನ್ನು ಏಕದಿನಕ್ಕೆ ಪರಿಗಣಿಸಬಾರದು" ಎಂದು ಶ್ರೀಕಾಂತ್ ಖಡಾಖಂಡಿತವಾಗಿ ನುಡಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.