WTC Final: ಅಂಪೈರ್‌ ತೀರ್ಮಾನ ಟೀಕಿಸಿದ ಗಿಲ್‌ಗೆ ಬಿತ್ತು ಭಾರೀ ದಂಡ..!

By Naveen KodaseFirst Published Jun 12, 2023, 6:15 PM IST
Highlights

ಟೆಸ್ಟ್ ವಿಶ್ವಕಪ್ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾಗೆ ಮತ್ತೊಂದು ಶಾಕ್
ಅಂಪೈರ್ ತೀರ್ಪು ಪ್ರಶ್ನಿಸಿದ ಶುಭ್‌ಮನ್ ಗಿಲ್‌ಗೆ ದಂಡ
ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ ಟೀಂ ಇಂಡಿಯಾ ಆರಂಭಿಕ ಬ್ಯಾಟರ್

ಲಂಡನ್(ಜೂ.12): ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಟೀಂ ಇಂಡಿಯಾ ಆಘಾತಕಾರಿ ಸೋಲು ಅನುಭವಿಸಿದೆ. ಈ ಸೋಲಿನ ಶಾಕ್‌ನಿಂದ ಹೊರಬರುವ ಮುನ್ನವೇ ಟೀಂ ಇಂಡಿಯಾಗೆ ಹಾಗೂ ಟೀಂ ಇಂಡಿಯಾ ಆರಂಭಿಕ ಬ್ಯಾಟರ್‌ ಶುಭ್‌ಮನ್ ಗಿಲ್‌ಗೆ ಐಸಿಸಿ ಮತ್ತೊಂದು ದೊಡ್ಡ ಶಾಕ್ ನೀಡಿದೆ. ಅಂಪೈರ್ ತೀರ್ಮಾನವನ್ನು ಸೋಷಿಯಲ್ ಮೀಡಿಯಾದಲ್ಲಿ ಟೀಕಿಸಿದ್ದ ಶುಭ್‌ಮನ್ ಗಿಲ್ ಇದೀಗ ದೊಡ್ಡ ಬೆಲೆ ತೆತ್ತಿದ್ದಾರೆ. 

ಹೌದು, ಇಲ್ಲಿನ ದಿ ಓವಲ್ ಮೈದಾನದಲ್ಲಿ ನಡೆದ ಟೆಸ್ಟ್ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ತಪ್ಪಿಗಾಗಿ ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡದ ಎಲ್ಲಾ ಆಟಗಾರರಿಗೆ ಪಂದ್ಯದ ಸಂಭಾವನೆಯ 100% ದಂಡ ವಿಧಿಸಲಾಗಿದೆ. ಇನ್ನು ಭಾರತ ತಂಡದ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್ (Shubman Gill), ಎರಡನೇ ಇನಿಂಗ್ಸ್‌ನಲ್ಲಿ ಥರ್ಡ್‌ ಅಂಪೈರ್ ನೀಡಿದ್ದ ತೀರ್ಪನ್ನು ಸೋಷಿಯಲ್ ಮೀಡಿಯಾದಲ್ಲಿ ಟೀಕಿಸಿದ ತಪ್ಪಿಗಾಗಿ ಮ್ಯಾಚ್‌ ರೆಫ್ರಿ, ಆರಂಭಿಕ ಬ್ಯಾಟರ್‌ಗೆ 15% ದಂಡ ವಿಧಿಸಿದ್ದಾರೆ. ಹೀಗಾಗಿ ಶುಭ್‌ಮನ್ ಗಿಲ್‌ಗೆ ಪಂದ್ಯದ ಸಂಭಾವನೆ ಮೀರಿ ಒಟ್ಟಾರೆ 115% ದಂಡ ವಿಧಿಸಲಾಗಿದೆ.

ಆಸ್ಟ್ರೇಲಿಯಾ (Australia Cricket Team) ನೀಡಿದ್ದ 444 ರನ್‌ಗಳ ಗುರಿ ಬೆನ್ನತ್ತಿದ ಭಾರತ ಎರಡನೇ ಇನಿಂಗ್ಸ್‌ನಲ್ಲಿ ಉತ್ತಮ ಆರಂಭ ಪಡೆದು ಮುನ್ನುಗ್ಗುತ್ತಿದ್ದ ವೇಳೆ ಬೋಲೆಂಡ್‌ರ ಬೌಲಿಂಗ್‌ನಲ್ಲಿ ಆಫ್‌ಸ್ಟಂಪ್‌ನಿಂದ ಹೊರಹೋಗುತ್ತಿದ್ದ ಚೆಂಡು ಗಿಲ್‌ರ ಬ್ಯಾಟ್‌ಗೆ ತಾಗಿ ಸ್ಲಿಫ್ಸ್‌ನತ್ತ ಸಾಗಿತು. ಕ್ಯಾಮರೂನ್‌ ಗ್ರೀನ್‌ ತಮ್ಮ ಎಡಕ್ಕೆ ಜಿಗಿದು ಆಕರ್ಷಕ ಕ್ಯಾಚ್‌ ಹಿಡಿದರು. ಆದರೆ ಚೆಂಡು ನೆಲಕ್ಕೆ ತಾಗಿದೆಯೇ ಎನ್ನುವ ಅನುಮಾನ ಪರಿಹರಿಸಿಕೊಳ್ಳಲು 3ನೇ ಅಂಪೈರ್‌ನ ನೆರವು ಪಡೆಯಲಾಯಿತು. 3ನೇ ಅಂಪೈರ್‌ ಹಲವು ಬಾರಿ ದೃಶ್ಯಗಳನ್ನು ಪರಿಶೀಲಿಸಿ, ಐಸಿಸಿಯ(ICC) ನಿಯಮವನ್ನು ಗಮನದಲ್ಲಿಟ್ಟುಕೊಂಡು ಔಟ್‌ ಎಂದು ತೀರ್ಪಿತ್ತರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಕ್ಯಾಚ್ ಕುರಿತಂತೆ ಐಸಿಸಿ ನಿಯಮಗಳು ಏನು?

1. ಚೆಂಡು ಬ್ಯಾಟರ್‌ನ ಬ್ಯಾಟ್‌ಗೆ ತಾಗಿ, ಅದನ್ನು ಫೀಲ್ಡರ್‌ ನೆಲಕ್ಕೆ ತಾಗದಂತೆ ಹಿಡಿದರೆ ಅದು ಔಟ್‌.

2. ಚೆಂಡು ಫೀಲ್ಡರ್‌ನ ಕೈ/ಕೈಗಳಲ್ಲಿ ಸುರಕ್ಷಿತವಾಗಿದ್ದು, ಕೈ/ಕೈಗಳು ನೆಲಕ್ಕೆ ತಾಗುತ್ತಿದ್ದರೂ ಅದು ಔಟ್‌.

3. ಚೆಂಡು ಫೀಲ್ಡರ್‌ನ ಕೈ ಸೇರಿದ ಕ್ಷಣದಿಂದ ಕ್ಯಾಚ್‌ನ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಫೀಲ್ಡರ್‌ ಚೆಂಡು ಹಾಗೂ ತನ್ನ ಚಲನೆಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದಾಗ ಕ್ಯಾಚ್‌ ಪೂರ್ಣಗೊಳ್ಳಲಿದೆ.

ಭಾರತದಲ್ಲಿ ತಂಡಕ್ಕಿಂತ ವ್ಯಕ್ತಿಯೇ ಮೇಲು: WTC Final ಸೋಲಿನ ಬೆನ್ನಲ್ಲೇ ಗಂಭೀರ್ ಸಿಡಿಮಿಡಿ

ಇನ್ನು ನಾಲ್ಕನೇ ದಿನದಾಟ ಮುಕ್ತಾಯದ ಬಳಿಕ ಶುಭ್‌ಮನ್ ಗಿಲ್, ಈ ವಿವಾದಾತ್ಮಕ ಔಟ್ ಫೋಟೋ ಜತೆಗೆ ಥರ್ಡ್ ಅಂಪೈರ್ ತೀರ್ಮಾನವನ್ನು ಪ್ರಶ್ನಿಸುವ ರೀತಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. 

ಈ ಕುರಿತಂತೆ ಪ್ರಕಟಣೆ ಹೊರಡಿಸಿರುವ ಐಸಿಸಿ, ಶುಭ್‌ಮನ್ ಗಿಲ್ ಅವರು ಐಸಿಸಿ ನೀತಿಸಂಹಿತೆಯ ಆರ್ಟಿಕಲ್ 2.7ನ್ನು ಉಲ್ಲಂಘಿಸಿದ್ದಾರೆ ಎಂದು ವಿವರಿಸಿದೆ. ಆರ್ಟಿಕಲ್ 2.7 ಪ್ರಕಾರ ಅಂತಾರಾಷ್ಟ್ರೀಯ ಪಂದ್ಯದಲ್ಲಿ ನಡೆದ ಪ್ರಕರಣವನ್ನು ಸಾರ್ವಜನಿಕವಾಗಿ ಟೀಕಿಸುವುದು ಅಥವಾ ಅಸಂಬದ್ದವಾಗಿ ಕಾಮೆಂಟ್ ಮಾಡುವುದಾಗಿದೆ ಎಂದು ತಿಳಿಸಿದೆ. ಟಿವಿ ಅಂಪೈರ್ ರಿಚರ್ಡ್ ಕೆಟ್ಟೆಲ್‌ಬರ್ಗ್‌, ಕ್ಯಾಮರೋನ್ ಗ್ರೀನ್ ಹಿಡಿದ ಕ್ಯಾಚ್‌ ಕ್ರಮಬದ್ದವಾಗಿದೆ ಎಂದು ತೀರ್ಪಿತ್ತಿದ್ದರು. ಅದೇ ದಿನ ಶುಭ್‌ಮನ್ ಗಿಲ್ ಅಂಪೈರ್ ತೀರ್ಮಾನವನ್ನು ಪ್ರಶ್ನಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಹೀಗಾಗಿ ಅವರಿಗೆ ಪಂದ್ಯದ ಸಂಭಾವನೆಯ 15% ದಂಡ ವಿಧಿಸಲಾಗಿದೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

click me!