
ಹೈದರಾಬಾದ್(ಅ.06): ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನೆದರ್‌ಲೆಂಡ್ಸ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ನೆದರ್‌ಲೆಂಡ್ಸ್ ತಂಡದ ನಾಯಕ ಸ್ಕಾಟ್ ಎಡ್ವರ್ಡ್ಸ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.
ಮೂರು ತಿಂಗಳ ಹಿಂದೆ ತನ್ನ ಮೂವರು ವೇಗಿಗಳು ಪ್ರಚಂಡ ಲಯದಲ್ಲಿದ್ದಾಗ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದ್ದ ಪಾಕಿಸ್ತಾನಕ್ಕೆ ಈಗ ಬೌಲಿಂಗ್‌ನದ್ದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಶುಕ್ರವಾರ ನೆದರ್‌ಲೆಂಡ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಿರುವ ಪಾಕಿಸ್ತಾನ, ಸಮಸ್ಯೆಗಳನ್ನು ಬದಿಗೊತ್ತಿ ದೊಡ್ಡ ಜಯದೊಂದಿಗೆ ಟೂರ್ನಿಯ ಆರಂಭದಲ್ಲೇ ಉತ್ತಮ ನೆಟ್ ರನ್‌ರೇಟ್ ಪಡೆಯಲು ಕಾಯುತ್ತಿದೆ.
ಏಷ್ಯಾಕಪ್‌ನಲ್ಲಿ ಗಾಯಗೊಂಡ ವೇಗಿ ನಸೀಂ ಶಾ ವಿಶ್ವಕಪ್ ನಿಂದಲೇ ಹೊರಬಿದ್ದಿದ್ದು ತಂಡಕ್ಕೆ ಹಿನ್ನಡೆ ಉಂಟು ಮಾಡಿದ್ದು, ಇನ್ನಿಬ್ಬರು ತಾರಾ ವೇಗಿಗಳಾದ ಶಾಹೀನ್ ಅಫ್ರಿದಿ ಹಾಗೂ ಹ್ಯಾರಿಸ್ ರೌಫ್ ಕೂಡ ಸಂಪೂರ್ಣ ಫಿಟ್ ಇಲ್ಲ. ಏಷ್ಯಾಕಪ್‌ನ ಸೂಪರ್-4ನಲ್ಲಿ ಕೊನೆಯ ಸ್ಥಾನ ಪಡೆದಿದ್ದ ಪಾಕ್, ಅಭ್ಯಾಸ ಪಂದ್ಯಗಳಲ್ಲಿ ಹೀನಾಯ ಬೌಲಿಂಗ್ ಪ್ರದರ್ಶನ ನೀಡಿತ್ತು.
ನ್ಯೂಜಿಲೆಂಡ್ ವಿರುದ್ಧ ಮೊದಲ ಅಭ್ಯಾಸ ಪಂದ್ಯದಲ್ಲಿ345 ರನ್ ಗಳಿಸಿದ ಹೊರತಾಗಿಯೂ 6 ಓವರ್ ಬಾಕಿ ಇರುವಂತೆ ಸೋಲುಂಡಿತ್ತು. 2ನೇ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ 351 ರನ್ ಬಿಟ್ಟುಕೊಟ್ಟಿತ್ತು. ಪ್ರಮುಖವಾಗಿ ಕೊನೆಯ 20 ಓವರ್‌ಗಳಲ್ಲಿ ಪಾಕಿಸ್ತಾನಿ ಬೌಲರ್‌ಗಳು ಭಾರಿ ದುಬಾರಿಯಾಗುತ್ತಿದ್ದು, ಟೂರ್ನಿ ಸಾಗಿದಂತೆ ಬೌಲಿಂಗ್ ಸಮಸ್ಯೆಯೇ ಪಾಕಿಸ್ತಾನಕ್ಕೆ ಮಾರಕವಾಗಬಹುದು. ಇದರ ಜೊತೆಗೆ ಉಪನಾಯಕ ಶದಾಬ್ ಖಾನ್ ಲಯಕ್ಕೆ ಮರಳಲು
ಪರದಾಡುತ್ತಿದ್ದಾರೆ. ಬಾಬರ್ ಆಜಂ ಹಾಗೂ ಮೊಹಮದ್ ರಿಜ್ವಾನ್ ಉತ್ತಮ ಫಾರ್ಮ್‌ನಲ್ಲಿದ್ದು, ಇಫ್ತಿಕಾರ್ ಅಹ್ಮದ್ ಮೇಲೆ ತಂಡ ತಕ್ಕಮಟ್ಟಿಗೆ ನಿರೀಕ್ಷೆ ಇಟ್ಟುಕೊಳ್ಳಬಹುದು.
ಮತ್ತೊಂದೆಡೆ ನೆದರ್‌ಲೆಂಡ್ಸ್ ಒಂದು ತಿಂಗಳ ಮೊದಲೇ ಭಾರತಕ್ಕೆ ಬಂದಿಳಿದರೂ, ತಂಡ ಇನ್ನಷ್ಟೇ ಯಶಸ್ಸು ಕಾಣಬೇಕಿದೆ. ಶಿಬಿರದ ವೇಳೆ ಕರ್ನಾಟಕಕ್ಕೆ ಶರಣಾಗಿದ್ದ ಡಚ್ ಪಡೆಯ ವಿಶ್ವಕಪ್ ಅಭ್ಯಾಸ ಪಂದ್ಯಗಳು ಮಳೆಗೆ ಬಲಿಯಾಗಿದ್ದವು. ತಂಡದಲ್ಲಿ ಕೆಲ ಹಿರಿಯ ಹಾಗೂ ಅನುಭವಿ ಆಟಗಾರರಿದ್ದು, ಪಾಕ್‌ಗೆ ಸೋಲುಣಿಸಿದರೆ ವಿಶ್ವಕಪ್‌ನ ಆರಂಭದಲ್ಲೇ ಅತಿ ರೋಚಕ ಫಲಿತಾಂಶವೊಂದಕ್ಕೆ ಸಾಕ್ಷಿಯಾದ ಹಿರಿಮೆ ನೆದರ್‌ಲೆಂಡ್ಸ್‌ಗೆ ಒಲಿಯಲಿದೆ.
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಪಾಕಿಸ್ತಾನ ಹಾಗೂ ನೆದರ್‌ಲೆಂಡ್ಸ್ ತಂಡಗಳು ಒಟ್ಟು 6 ಬಾರಿ ಮುಖಾಮುಖಿಯಾಗಿದ್ದು, ಆರೂ ಬಾರಿಯೂ ಪಾಕಿಸ್ತಾನವೇ ಗೆಲುವಿನ ನಗೆ ಬೀರಿದೆ. ಹೀಗಾಗಿ ಸಹಜವಾಗಿಯೇ ಇಂದು ಕೂಡಾ ನೆದರ್‌ಲೆಂಡ್ಸ್ ಎದುರು ಪಾಕ್ ಪಂದ್ಯ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. ಇನ್ನು ಪಾಕ್‌ಗೆ ಶಾಕ್ ನೀಡಲು ನೆದರ್‌ಲೆಂಡ್ಸ್ ತಂಡ ಸಜ್ಜಾಗಿದೆ.
ಉಭಯ ತಂಡಗಳ ಆಟಗಾರರ ಪಟ್ಟಿ ಹೀಗಿದೆ ನೋಡಿ:
ಪಾಕಿಸ್ತಾನ:
ಫಖರ್ ಜಮಾನ್, ಇಮಾಮ್ ಉಲ್ ಹಕ್, ಬಾಬರ್ ಅಜಂ(ನಾಯಕ), ಮೊಹಮ್ಮದ್ ರಿಜ್ವಾನ್, ಶಕೀಲ್, ಇಫ್ತಿಕಾರ್ ಅಹಮ್ಮದ್, ಶದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್.
ನೆದರ್‌ಲೆಂಡ್ಸ್:
ವಿಕ್ರಂಜಿತ್, ಓ ಡೌಡ್, ಬಾರ್ರೆಸ್ಸಿ, ಡಿ ಲೀಡೆ, ಆಕರ್‌ಮನ್, ಎಡ್ವರ್ಡ್ಸ್(ನಾಯಕ), ಕ್ಲೇನ್, ವಾನ್ ಬೀಕ್, ವ್ಯಾನ್ ಡರ್ ಮರ್ವೆ, ಶಾರಿಜ್, ವಾನ್ ಮೀಕೆರೆನ್.
ಪಂದ್ಯ ಆರಂಭ: ಮಧ್ಯಾಹ್ನ 2ಕ್ಕೆ
ನೇರ ಪ್ರಸಾರ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.