ಮಹಿಳಾ ಏಷ್ಯಾಕಪ್ 2026: ಭಾರತ ಚಾಂಪಿಯನ್ ಆದರೆ ಪಿಸಿಬಿ ಅಧ್ಯಕ್ಷ ನಖ್ವಿಯಿಂದ ಟ್ರೋಫಿ ಪಡೆಯುತ್ತಾ ಹರ್ಮನ್‌ಪ್ರೀತ್ ಪಡೆ?

Published : Aug 20, 2026, 07:46 PM IST
Indian Womens Cricket Team

ಸಾರಾಂಶ

ಮಹಿಳಾ ಏಷ್ಯಾಕಪ್ 2026ರಲ್ಲಿ, ಭಾರತ ತಂಡ ಫೈನಲ್ ಗೆದ್ದರೆ ಟ್ರೋಫಿ ಸ್ವೀಕಾರದ ಕುರಿತು ವಿವಾದ ಮರುಕಳಿಸುವ ಸಾಧ್ಯತೆಯಿದೆ. ಎಸಿಸಿ ಅಧ್ಯಕ್ಷರಾಗಿ ಪಾಕಿಸ್ತಾನದ ಮೊಹ್ಸಿನ್ ನಖ್ವಿ ಇರುವುದರಿಂದ, ಹರ್ಮನ್‌ಪ್ರೀತ್ ಪಡೆ ಟ್ರೋಫಿ ಸ್ವೀಕರಿಸುವುದೇ ಅಥವಾ ಪುರುಷರ ತಂಡದಂತೆ ನಿರಾಕರಿಸುವುದೇ ಎಂಬ ಕುತೂಹಲ ಮೂಡಿದೆ.

ಬೆಂಗಳೂರು (ಆ.20): ಮುಂಬರುವ ಮಹಿಳಾ ಏಷ್ಯಾಕಪ್ 2026ರಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಫೈನಲ್ ತಲುಪಿ ಚಾಂಪಿಯನ್ ಆದರೆ, ಟ್ರೋಫಿ ಪ್ರದಾನ ಸಮಾರಂಭದಲ್ಲಿ ಹಳೆಯ ವಿವಾದವೇ ಮತ್ತೆ ಮರುಕಳಿಸುವ ಸಾಧ್ಯತೆಯಿದೆ. ಯುಎಇಯ ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಟೂರ್ನಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಆಯೋಜಿಸುತ್ತಿದ್ದು, ಪ್ರಸ್ತುತ ಎಸಿಸಿ ಅಧ್ಯಕ್ಷರಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಮುಖ್ಯಸ್ಥ ಮೊಹ್ಸಿನ್ ನಖ್ವಿಯೇ ಕಾರ್ಯನಿರ್ವಹಿಸುತ್ತಿದ್ದಾರೆ.

ಒಂದು ವೇಳೆ ಹರ್ಮನ್‌ಪ್ರೀತ್ ಕೌರ್ ಪಡೆ ಪ್ರಶಸ್ತಿ ಗೆದ್ದರೆ, ಅವರು ಟ್ರೋಫಿಯನ್ನು ಸ್ವೀಕರಿಸುತ್ತಾರೆಯೇ ಅಥವಾ ಪುರುಷರ ತಂಡದ ಸೂರ್ಯಕುಮಾರ್ ಯಾದವ್ ರೀತಿಯಲ್ಲೇ ಟ್ರೋಫಿ ಇಲ್ಲದೆಯೇ ವಿಜಯೋತ್ಸವ ಆಚರಿಸುತ್ತಾರೆಯೇ ಎಂಬ ದೊಡ್ಡ ಪ್ರಶ್ನೆ ಕ್ರೀಡಾಲೋಕದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಪಾಕಿಸ್ತಾನ ವಿರುದ್ಧ ಸೆಪ್ಟೆಂಬರ್ 5ರಂದು ಸೆಣಸಾಟ

ಮಹಿಳಾ ಏಷ್ಯಾಕಪ್‌ನಲ್ಲಿ ಭಾರತ ತಂಡವು ಸೆಪ್ಟೆಂಬರ್ 5ರಂದು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಗರಿಷ್ಠ ಎರಡು ಬಾರಿ ಮಾತ್ರ ಎದುರಾಗುವ ಅವಕಾಶವಿದೆ (ಗುಂಪು ಹಂತದಲ್ಲಿ ಒಮ್ಮೆ ಮತ್ತು ಫೈನಲ್‌ನಲ್ಲಿ ಮತ್ತೊಮ್ಮೆ). ಈ ಪಂದ್ಯದ ವೇಳೆ ಭಾರತೀಯ ಆಟಗಾರ್ತಿಯರು ಪಾಕಿಸ್ತಾನಿ ಆಟಗಾರ್ತಿಯರೊಂದಿಗೆ ಹಸ್ತಲಾಘವ (Handshake) ಮಾಡುತ್ತಾರೆಯೇ ಇಲ್ಲವೇ ಎಂಬುದು ಮತ್ತೊಂದು ಪ್ರಮುಖ ಕುತೂಹಲವಾಗಿದೆ.

ಟ್ರೋಫಿ ಸ್ವೀಕಾರದ ಗೊಂದಲ

ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ ಚಾಂಪಿಯನ್ ಪಟ್ಟಕ್ಕೇರಿದರೆ ಟ್ರೋಫಿ ಪಡೆಯಲಿದೆ. ಆದರೆ, ವೇದಿಕೆಯಲ್ಲಿ ಪ್ರಶಸ್ತಿ ನೀಡಲು ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಉಪಸ್ಥಿತರಿದ್ದರೆ ಭಾರತ ತಂಡ ಏನು ಮಾಡಲಿದೆ ಅನ್ನೋದೇ ಕುತೂಹಲವಾಗಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ಪುರುಷರ ತಂಡದಂತೆ ಟ್ರೋಫಿ ಸ್ವೀಕರಿಸದೆ ಕೇವಲ ಪಂದ್ಯ ಗೆದ್ದ ಖುಷಿಯಲ್ಲಿ ಸಂಭ್ರಮಿಸುವುದು ಒಂದು ದಾರಿಯಾಗಿದ್ದರೆ, ಇನ್ನೊಂದು, ಮೊಹ್ಸಿನ್ ನಖ್ವಿ ಅವರನ್ನು ಸಂಪೂರ್ಣವಾಗಿ ಬದಿಗೊತ್ತಿ, ಎಸಿಸಿಯ ಲಭ್ಯವಿರುವ ಇತರ ಹಿರಿಯ ಅಧಿಕಾರಿಯಿಂದ ಟ್ರೋಫಿ ಸ್ವೀಕರಿಸಲಿದೆ.

ಪುರುಷರ ಏಷ್ಯಾಕಪ್‌ನಲ್ಲಿ ಏನಾಗಿತ್ತು?

ಈ ಹಿಂದೆ ಪುರುಷರ ಏಷ್ಯಾಕಪ್‌ನಲ್ಲಿ ಭಾರತೀಯ ತಂಡವು ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದಾಗ, 'ಭಾರತ ತಂಡವು ಎಸಿಸಿ ಕಚೇರಿಯಿಂದ ನೇರವಾಗಿ ಟ್ರೋಫಿ ಪಡೆದುಕೊಳ್ಳಬಹುದು' ಎಂದು ನಖ್ವಿ ಹೇಳಿದ್ದರು. ತದನಂತರ ಐಸಿಸಿ ಸಭೆಯೊಂದರಲ್ಲಿ ಬಿಸಿಸಿಐ ಕಾರ್ಯದರ್ಶಿ ದೇವಾಜಿತ್ ಸೈಕಿಯಾ ಅವರು ನಖ್ವಿ ಅವರನ್ನು ಭೇಟಿಯಾಗಿ, 'ಹಿಮ ಕರಗಿದೆ (ಸಮಸ್ಯೆ ಶಮನವಾಗಿದೆ)' ಎಂದು ಹೇಳಿಕೆ ನೀಡಿದ್ದರೂ ಟ್ರೋಫಿ ವಿವಾದ ಬಗೆಹರಿದಿರಲಿಲ್ಲ. ಭಾರತ ತನ್ನಿಂದಲೇ ನೇರವಾಗಿ ಟ್ರೋಫಿ ಪಡೆಯಬೇಕು ಎಂದು ನಖ್ವಿ ಪಟ್ಟು ಹಿಡಿದಿದ್ದರು.

'ನೋ-ಹ್ಯಾಂಡ್‌ಶೇಕ್' ನೀತಿ ಮುಂದುವರಿಯಲಿದೆಯೇ?

ಪಹಲ್ಗಾಮ್ ದಾಳಿ ಮತ್ತು 'ಆಪರೇಷನ್ ಸಿಂಧೂರ್' ನಂತರದ ಉದ್ವಿಗ್ನತೆಯಿಂದಾಗಿ ಕಳೆದ ವರ್ಷದ ಪುರುಷರ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮೂರು ಬಾರಿ ಮುಖಾಮುಖಿಯಾಗಿದ್ದರೂ ಒಮ್ಮೆಯೂ ಹಸ್ತಲಾಘವ ಮಾಡಿರಲಿಲ್ಲ. ಇದೇ ಹಾದಿಯನ್ನು ತುಳಿದಿದ್ದ ಭಾರತೀಯ ಮಹಿಳಾ ತಂಡವು 2025ರ ಏಕದಿನ ವಿಶ್ವಕಪ್ ಮತ್ತು 2026ರ ಟಿ20 ವಿಶ್ವಕಪ್‌ನಲ್ಲೂ ಪಾಕಿಸ್ತಾನ ಆಟಗಾರ್ತಿಯರಿಗೆ ಹಸ್ತಲಾಘವ ಮಾಡಿರಲಿಲ್ಲ.

ಫಾತಿಮಾ ಸನಾ ನೇತೃತ್ವದ ಪಾಕಿಸ್ತಾನ ತಂಡವನ್ನು ಎದುರಿಸುವಾಗ ಹರ್ಮನ್‌ಪ್ರೀತ್ ಪಡೆ ಇದೇ 'ನೋ-ಹ್ಯಾಂಡ್‌ಶೇಕ್' ನೀತಿಯನ್ನು ಮುಂದುವರಿಸುವ ಸ್ಪಷ್ಟ ಸೂಚನೆಗಳಿವೆ. ಆದರೆ, 2026ರ ಹಾಕಿ ವಿಶ್ವಕಪ್‌ನಲ್ಲಿ ಆಮ್ಸ್ಟರ್‌ಡ್ಯಾಮ್‌ನಲ್ಲಿ ನಡೆದ ಪಂದ್ಯದ ವೇಳೆ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತೀಯ ಹಾಕಿ ತಂಡವು ಪಾಕಿಸ್ತಾನಿ ಆಟಗಾರರೊಂದಿಗೆ ಹಸ್ತಲಾಘವ ಮಾಡಿ ಹೈ-ಫೈವ್ ಹಂಚಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ, ಕ್ರಿಕೆಟ್‌ನಲ್ಲಿ ರಾಜಕೀಯ ಮತ್ತು ರಾಜತಾಂತ್ರಿಕ ಪರಿಣಾಮಗಳು ಹೆಚ್ಚು ಪ್ರಭಾವ ಬೀರುವುದರಿಂದ ಎಲ್ಲರ ಕಣ್ಣು ಮುಂಬರುವ ಈ ಪಂದ್ಯಾವಳಿಯ ಮೇಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Watch: ಲಾರ್ಡ್ಸ್ ಬಾಲ್ಕನಿಯಲ್ಲಿ ಮರುಕಳಿಸಿದ 'ದಾದಾ' ಖದರ್: ಇಂಗ್ಲೆಂಡ್ ನೆಲದಲ್ಲಿ ಕೋಟ್ ಬಿಚ್ಚಿ ಸಂಭ್ರಮಿಸಿದ ಭಾರತೀಯ ದಿವ್ಯಾಂಗ ಕ್ರಿಕೆಟಿಗರು!
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಪಂದ್ಯ ಮುಗಿದ ಬೆನ್ನಲ್ಲೇ ಮೈದಾನದಲ್ಲೇ ಎರಡು ಭಾಗವಾಗಿ ಕತ್ತರಿಸಲಾಯ್ತು ಚೆಂಡು!