India vs South Africa: ವೈಟ್‌ವಾಶ್‌ ಮುಖಭಂಗ ತಪ್ಪಿಸಿಕೊಳ್ಳುತ್ತಾ ಭಾರತ?

By Kannadaprabha NewsFirst Published Jan 23, 2022, 11:30 AM IST
Highlights

* ಇಂದು ಭಾರತ-ದ.ಆಫ್ರಿಕಾ 3ನೇ ಏಕದಿನ

* ವೈಟ್‌ವಾಶ್‌ ಮುಖಭಂಗ ತಪ್ಪಿಸಿಕೊಳ್ಳುತ್ತಾ ಭಾರತ?

ಕೇಪ್‌ಟೌನ್‌(ಜ.23): ಈಗಾಗಲೇ ಸರಣಿ ಕಳೆದುಕೊಂಡು ಮುಖಭಂಗಕ್ಕೀಡಾಗಿರುವ ಟೀಂ ಇಂಡಿಯಾ, ಏಕದಿನ ಸರಣಿಯ 3ನೇ ಹಾಗೂ ಕೊನೆ ಪಂದ್ಯದಲ್ಲಿ ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ಮರ್ಯಾದೆ ಉಳಿಸಿಕೊಳ್ಳುವ ಜೊತೆಗೆ ವೈಟ್‌ವಾಶ್‌ ತಪ್ಪಿಸಿಕೊಳ್ಳಲು ಹೋರಾಡಲಿದೆ.

ಟೆಸ್ಟ್‌ ಸರಣಿ ಸೋತ ಒಂದು ವಾರದ ಅಂತರದಲ್ಲಿ ಏಕದಿನ ಸರಣಿಯಲ್ಲೂ ಸೋಲುಂಡಿರುವ ಕೆ.ಎಲ್‌.ರಾಹುಲ್‌ ಬಳಗ ಗೆಲುವಿನೊಂದಿಗೆ ದ.ಆಫ್ರಿಕಾ ಪ್ರವಾಸ ಕೊನೆಗೊಳಿಸಲು ಎದುರು ನೋಡುತ್ತಿದೆ. ಇನ್ನು, ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವ ಆತಿಥೇಯ ಆಫ್ರಿಕಾ ತಂಡ ಕ್ಲೀನ್‌ ಸ್ವೀಪ್‌ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದೆ. 2018ರಲ್ಲಿ ತವರಿನಲ್ಲಿ ನಡೆದ ಸರಣಿಯಲ್ಲಿ ಸೋತಿದ್ದ ದ.ಆಫ್ರಿಕಾ, ಈ ಬಾರಿ 3-0ಯಲ್ಲಿ ಗೆಲ್ಲಲು ಕಾಯುತ್ತಿದೆ.

Latest Videos

ಭಾರತಕ್ಕೆ ಮೊದಲ ಪಂದ್ಯದಲ್ಲಿ ಬ್ಯಾಟರ್‌ಗಳು ಕೈಕೊಟ್ಟರೆ, 2ನೇ ಪಂದ್ಯದಲ್ಲಿ ಬೌಲರ್‌ಗಳು ವೈಫಲ್ಯ ಕಂಡಿದ್ದರು. ಈ ಪಂದ್ಯದಲ್ಲಿ ಭಾರತ ಮೂರೂ ವಿಭಾಗಗಳಲ್ಲಿ ಸುಧಾರಿತ ಪ್ರದರ್ಶನ ತೋರಲು ಎದುರು ನೋಡುತ್ತಿದೆ.

ಹಲವು ಬದಲಾವಣೆ ಸಾಧ್ಯತೆ: ಶ್ರೇಯಸ್‌ ಅಯ್ಯರ್‌, ಯುವ ಆಲ್ರೌಂಡರ್‌ ವೆಂಕಟೇಶ್‌ ಅಯ್ಯರ್‌ ಎರಡೂ ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಅವರ ಬದಲು ಸೂರ್ಯಕುಮಾರ್‌ ಯಾದವ್‌, ಋುತುರಾಜ್‌ ಗಾಯಕ್ವಾಡ್‌ ತಂಡಕ್ಕೆ ಸೇರ್ಪಡೆಯಾಗಬಹುದು. ಋುತುರಾಜ್‌ರನ್ನು ಆರಂಭಿಕನಾಗಿ ಕಣಕ್ಕಿಳಿಸಿದರೆ ರಾಹುಲ್‌ ಮಧ್ಯಮ ಕ್ರಮಾಂಕದಲ್ಲಿ ಆಡಬೇಕಾಗಬಹುದು.

ಭಾರತದ ಬೌಲರ್‌ಗಳು ಎರಡೂ ಪಂದ್ಯಗಳಲ್ಲಿ ದ.ಆಫ್ರಿಕಾ ಬ್ಯಾಟರ್‌ಗಳನ್ನು ಕಟ್ಟಿಹಾಕಲು ವಿಫಲರಾಗಿದ್ದಾರೆ. 2 ಪಂದ್ಯಗಳಲ್ಲಿ ಬೌಲರ್‌ಗಳು ಕೇವಲ 7 ವಿಕೆಟ್‌ ಪಡೆದಿದ್ದು, ಬೌಲಿಂಗ್‌ ವಿಭಾಗದಲ್ಲಿ ಬದಲಾವಣೆ ಬಹುತೇಕ ಖಚಿತ. ಭುವನೇಶ್ವರ್‌ ಬದಲು ಮೊಹಮದ್‌ ಸಿರಾಜ್‌ ಅಥವಾ ದೀಪಕ್‌ ಚಹರ್‌ ಆಡುವ ಸಾಧ್ಯತೆ ಇದೆ. ಅಶ್ವಿನ್‌ ಬದಲು ಜಯಂತ್‌ ಯಾದವ್‌ರನ್ನು ಆಡಿಸಿದರೂ ಅಚ್ಚರಿಯಿಲ್ಲ. ದ.ಆಫ್ರಿಕಾ ತಂಡದಲ್ಲಿ ಯಾವುದೇ ಬದಲಾವಣೆಯ ನಿರೀಕ್ಷೆ ಇಲ್ಲ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಋುತುರಾಜ್‌, ಧವನ್‌, ಕೊಹ್ಲಿ, ಪಂತ್‌, ರಾಹುಲ್‌(ನಾಯಕ), ಸೂರ್ಯ, ಅಶ್ವಿನ್‌/ಜಯಂತ್‌, ಶಾರ್ದೂಲ್‌, ಸಿರಾಜ್‌/ದೀಪಕ್‌, ಬೂಮ್ರಾ, ಚಹಲ್‌.

ದ.ಆಫ್ರಿಕಾ: ಡಿ ಕಾಕ್‌, ಮಲಾನ್‌, ಬವುಮಾ(ನಾಯಕ), ಮಾರ್ಕ್ರಮ್‌, ಡುಸ್ಸೆನ್‌, ಮಿಲ್ಲರ್‌, ಫೆಲುಕ್ವಾಯೋ, ಮಗಾಲ, ಕೇಶವ್‌, ಎನ್‌ಗಿಡಿ, ಶಮ್ಸಿ.

ಪಂದ್ಯ ಆರಂಭ: ಮಧ್ಯಾಹ್ನ 2ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

click me!