
ರಾಯಲ್ ಚಾಲೆಂಜರ್ಸ್ ಬೆಂಗಳೂರು. ಇದೊಂದು ಫ್ರಾಂಚೈಸಿಯಲ್ಲ. ಕನ್ನಡಿಗರ ಹೆಮ್ಮೆ. ಕನ್ನಡಿಗರ ಗರ್ವ. ಆರ್.ಸಿ.ಬಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಆರ್.ಸಿ.ಬಿ ಅಂದ್ರೆ ಕನ್ನಡಿಗರ ಅಸ್ಮಿತೆ. ಆರ್.ಸಿ.ಬಿ ಅಂದ್ರೆ ಕನ್ನಡಿಗರ ಸ್ವಾಭಿಮಾನ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹುಟ್ಟಿದ್ದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ. ಬೆಳೆದದ್ದೂ ಚಿನ್ನಸ್ವಾಮಿಯಲ್ಲಿ. ಬ್ರ್ಯಾಂಡ್ ಆಗಲು ಕಾರಣ ಚಿನ್ನಸ್ವಾಮಿ ಕ್ರೀಡಾಂಗಣ. ಆರ್.ಸಿ.ಬಿ ತಂಡಕ್ಕೆ ಚಿನ್ನಸ್ವಾಮಿ ಮೈದಾನವೇ ಕರ್ಮಭೂಮಿ. ಅದರಲ್ಲೂ ಆರ್.ಸಿ.ಬಿ ರಣಧೀರ ವಿರಾಟ್ ಕೊಹ್ಲಿ ಪಾಲಿಗಂತೂ ಚಿನ್ನಸ್ವಾಮಿ ಸ್ಟೇಡಿಯಂ ಮತ್ತು ಬೆಂಗಳೂರು 2ನೇ ಮನೆ. ನಿರಂತರ 18 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ ವಿರಾಟ್ ಕೊಹ್ಲಿ ಒಂದರ್ಥದಲ್ಲಿ ಕನ್ನಡದ ಮನೆಮಗನೇ ಆಗಿ ಬಿಟ್ಟಿದ್ದಾರೆ.
ಕಳೆದ ವರ್ಷ ಜೂನ್ 3ರಂದು ಅಹ್ಮದಾಬಾದ್‌ನಲ್ಲಿ ನಡೆದ ಐಪಿಎಲ್ ಫೈನಲ್’ನಲ್ಲಿ ಗೆದ್ದ ಆರ್.ಸಿ.ಬಿ ಈ ಸಲ ಕಪ್ ನಮ್ದೇ ಅಂತ ಹೆಮ್ಮೆಯಿಂದ ಹೇಳಿತ್ತು. ಆರ್.ಸಿ.ಬಿ ಅಭಿಮಾನಿಗಳ 18 ವರ್ಷಗಳ ಸುದೀರ್ಘ ಕಾಯುವಿಕೆಗೆ ವಿರಾಟ್ ಕೊಹ್ಲಿ & ಟೀಮ್ ಐಪಿಎಲ್ ಕಪ್’ನ ಉಡುಗೊರೆ ಕೊಟ್ಟಿತ್ತು. ಅವತ್ತು ವಿರಾಟ್ ಕೊಹ್ಲಿ ಐಪಿಎಲ್ ಕಪ್ ಗೆದ್ದು ಕಾತರಿಸಿದ್ದು ಬೆಂಗಳೂರಿನ ಸಂಭ್ರಮವನ್ನು ನೋಡಲು. 18 ವರ್ಷಗಳ ನಂತರ ಐಪಿಎಲ್ ಟ್ರೋಫಿ ಗೆದ್ದು ಕೊಹ್ಲಿ ಹೃದಯ ಮಿಡಿದದ್ದು ಕನ್ನಡಿಗರಿಗಾಗಿ ಜನರಿಗಾಗಿ. ಇದ್ರಲ್ಲೇ ಅರ್ಥ ಆಗತ್ತೆ, ಆರ್.ಸಿ.ಬಿ ಮೇಲೆ ಕನ್ನಡಿಗರಿಗಿರೋದು ಅದೆಂಥಾ ಪ್ರೀತಿ, ಅಭಿಮಾನ ಅಂತ. ಯೆಸ್. ಇವತ್ತು ಆರ್.ಸಿ.ಬಿ ಕ್ರೀಡಾ ಜಗತ್ತಿನ ದೊಡ್ಡ ಫ್ರಾಂಚೈಸಿಯಾಗಿ ಬೆಳೆದು ನಿಂತಿದೆ ಅಂದ್ರೆ ಅದಕ್ಕೆ ಕಾರಣ ಕನ್ನಡಿಗರು. ಆರ್.ಸಿ.ಬಿ ಕೇವಲ ಫ್ರಾಂಚೈಸಿಯಲ್ಲ, ಅದು ಕೋಟ್ಯಂತರ ಉಸಿರು ಅನ್ನೋ ಮಟ್ಟಿಗೆ ಬೆಳೆದಿದೆ ಅಂದ್ರೆ ಅದಕ್ಕೆ ಕಾರಣ ಕನ್ನಡಿಗರು. ಆದ್ರೆ ಅದೇ ಕನ್ನಡಿಗರಿಗೆ ಆರ್.ಸಿ.ಬಿ ಫ್ರಾಂಚೈಸಿ ಅದೆಂಥಾ ದೋಖಾ ಮಾಡಲು ಹೊರಟಿದೆ ಗೊತ್ತಾ?
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಮತ್ತು ಅಂತರಾಷ್ಟ್ರೀಯ ಪಂದ್ಯಗಳನ್ನಾಡಿಸಲು ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಕೆ.ಎಸ್.ಸಿ.ಎ ಕೂಡ ಎಲ್ಲಾ ರೀತಿಯಿಂದಲೂ ಐಪಿಎಲ್ ಪಂದ್ಯಗಳಿಗೆ ಆತಿಥ್ಯ ವಹಿಸಲು ಸರ್ವ ಸನ್ನದ್ಧವಾಗಿದೆ. ಇದನ್ನು ಸ್ವತಃ ಕೆ.ಎಸ್.ಸಿ.ಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವ್ರೇ ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟ ಪಡಿಸಿದ್ದಾರೆ. ದಯವಿಟ್ಟು ಚಿನ್ನಸ್ವಾಮಿಯಲ್ಲಿ ಆಡಿ ಅಂತ ಆರ್.ಸಿ.ಬಿ ಫ್ರಾಂಚೈಸಿಗೆ ವೆಂಕಟೇಶ್ ಪ್ರಸಾದ್ ಮನವಿ ಮಾಡಿದ್ದಾರೆ. ಕಳೆದ ವರ್ಷ ಸಂಭವಿಸಿದ ಕಾಲ್ತುಳಿತ ದುರಂತದ ನಂತರ ಚಿನ್ನಸ್ವಾಮಿ ಮೈದಾನದಲ್ಲಿ ಕ್ರಿಕೆಟ್ ಪಂದ್ಯಗಳಿಗೆ ಬ್ರೇಕ್ ಬಿದ್ದಿತ್ತು. ಆದ್ರೆ ವೆಂಕಟೇಶ್ ಪ್ರಸಾದ್ ಮತ್ತವರ ತಂಡ ರಾಜ್ಯ ಕ್ರಿಕೆಟ್ ಸಂಸ್ಥೆಯ ಚುಕ್ಕಾಣಿ ಹಿಡಿದ ನಂತ್ರ, ಕೇವಲ 45 ದಿನಗಳಲ್ಲಿ ಹಗಲೂ ರಾತ್ರಿ ಕೆಲಸ ಮಾಡಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹಮಂತ್ರಿಗಳನ್ನು ಭೇಟಿ ಮಾಡಿ, ಪೊಲೀಸ್ ಇಲಾಖೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಚಿನ್ನಸ್ವಾಮಿ ಮೈದಾನದಲ್ಲಿ ಒಂದಷ್ಟು ಬದಲಾವಣೆಗಳನ್ನೂ ಮಾಡಿ, ಮತ್ತೆ ಚಿನ್ನಸ್ವಾಮಿಯಲ್ಲಿ ಪಂದ್ಯಗಳನ್ನು ಆಯೋಜಿಸಲು ಸರ್ಕಾರದಿಂದ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿತ್ತು.
ರಾಜ್ಯ ಕ್ರಿಕೆಟ್ ಸಂಸ್ಥೆ ವೆಂಕಟೇಶ್ ಪ್ರಸಾದ್ ಅವರ ಸಾರಥ್ಯದಲ್ಲಿ ಇಷ್ಟೆಲ್ಲಾ ಮಾಡಿದ್ರೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯೇ ರೆಡಿ ಇಲ್ಲ. ಈಗಾಗ್ಲೇ ತನ್ನ ತವರು ಪಂದ್ಯಗಳನ್ನು ಮುಂಬೈನ ಡಿ.ವೈ ಪಾಟೀಲ್ ಮೈದಾನ ಮತ್ತು ಛತ್ತೀಸ್’ಗಢದ ರಾಯ್ಪುರದಲ್ಲಿ ಆಡಿಸಲು ಆರ್.ಸಿ.ಬಿ ಫ್ರಾಂಚೈಸಿ ಮುಂದಾಗಿದೆ. ಸ್ವತಃ ಆರ್.ಸಿ.ಬಿ ಸಿಇಓ ರಾಜೇಶ್ ಮೆನನ್, ಛತ್ತೀಸ್’ಗಢ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಬಂದಿದ್ದಾರೆ. ಆರ್.ಸಿ.ಬಿ ರಾಯ್ಪುರದಲ್ಲಿ ತನ್ನ ಎರಡು ತವರು ಪಂದ್ಯಗಳನ್ನಾಡಲಿದೆ ಅಂತ ಛತ್ತೀಸ್’ಗಢ ಮುಖ್ಯಮಂತ್ರಿ ಘೋಷಣೆಯನ್ನೂ ಮಾಡಿ ಬಿಟ್ಟಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣವೇ ರೆಡಿ ಇರೋವಾಗ, ಐಪಿಎಲ್ ಪಂದ್ಯಗಳನ್ನು ನಡೆಸಲು ರಾಜ್ಯ ಸರ್ಕಾರ ಅನುಮತಿ ಕೊಟ್ಟಿರೋವಾಗ ಆರ್.ಸಿ.ಬಿ ಫ್ರಾಂಚೈಸಿಗೆ ಚಿನ್ನಸ್ವಾಮಿಯಲ್ಲಿ ಆಡಲು ಏನ್ ಕಷ್ಟ? ನಾವು ಇಲ್ಲಿ ಆಡಲ್ಲ ಅಂತ ಆರ್.ಸಿ.ಬಿ ತಂಡದ ಮಾಲೀಕರು ಹೇಳ್ತಾ ಇರೋದ್ಯಾಕೆ? ಕಳೆದ ವರ್ಷದ ಕಾಲ್ತುಳಿತ ದುರಂತಕ್ಕೆ ತಮ್ಮನ್ನು ಹೊಣೆ ಮಾಡಿದ ಕೋಪವೇ ಇದಕ್ಕೆಲ್ಲಾ ಕಾರಣನಾ?
ಇದೇ ನಿಜವಾಗಿದ್ರೆ, ಇದಕ್ಕೂ ರಾಜ್ಯ ಕ್ರಿಕೆಟ್ ಸಂಸ್ಥೆಗೂ ಏನ್ ಸಂಬಂಧ? ಆರ್.ಸಿ.ಬಿಯನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿದ್ದು ಸರ್ಕಾರವೇ ಹೊರತು ಕೆ.ಎಸ್.ಸಿ.ಎ ಅಲ್ಲ. ಹೀಗಿರೋವಾಗ ಚಿನ್ನಸ್ವಾಮಿಯಲ್ಲಿ ಆಡಲು ಆರ್.ಸಿ.ಬಿ ಫ್ರಾಂಚೈಸಿ ಹಿಂದೇಟು ಹಾಕ್ತಾ ಇರೋದ್ಯಾಕೆ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಈ ಮಟ್ಟಿಗೆ ಬೆಳೆಯಲು ಕಾರಣ ಚಿನ್ನಸ್ವಾಮಿ ಕ್ರೀಡಾಂಗಣ ಮತ್ತು ಕನ್ನಡಿಗರು. ನಿರಂತರ 17 ವರ್ಷಗಳ ವೈಫಲ್ಯದ ಮಧ್ಯೆಯೂ ಆರ್.ಸಿ.ಬಿ ತಂಡವನ್ನು ಕನ್ನಡಿಗರು ಆರಾಧಿಸಿದ್ದಾರೆ. ಸೋತು ಸೋತು ಸುಣ್ಣವಾದ ಸಮಯದಲ್ಲೂ ತಂಡದ ಬೆನ್ನಿಗೆ ನಿಂತಿದ್ದಾರೆ. ಆದ್ರೆ ಅಂಥಾ ಅಭಿಮಾನಿಗಳಿಗೆ ಆರ್.ಸಿ.ಬಿ ಈಗ ಅನ್ಯಾಯ ಮಾಡಲು ಹೊರಟಿದೆ. ಒಂದು ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲು ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿ ನಿರಾಕರಿಸಿಬಿಟ್ರೆ, ಆಗ ಅಖಾಡಕ್ಕೆ ಎಂಟ್ರಿಯಾಗಲಿದೆ ಕೋಲ್ಕತಾ ನೈಟ್ ರೈಡರ್ಸ್.
ಯೆಸ್. ಚಿನ್ನಸ್ವಾಮಿ ಕ್ರೀಡಾಂಗಣವನ್ನು ತವರು ಮೈದಾನವಾಗಿಸಿಕೊಳ್ಳಲು ಶಾರೂಖ್ ಖಾನ್ ಒಡೆತನದ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿ ತುದಿಗಾಲಲ್ಲಿ ನಿಂತಿದೆ. ಕಾರಣ ಇಷ್ಟೇ. ಐಪಿಎಲ್ ಟೂರ್ನಿಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.. ಹೀಗಾಗಿ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಬೇಕಿದ್ದ ಕೆಕೆಆರ್ ತಂಡದ ಪಂದ್ಯಗಳನ್ನು ಬೇರೆ ಕಡೆ ಶಿಫ್ಟ್ ಮಾಡಬೇಕಿದೆ. ಇದೇ ಕಾರಣದಿಂದ ತನ್ನ ತವರು ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲು ಕೆಕೆಆರ್ ಫ್ರಾಂಚೈಸಿ ಉತ್ಸುಕವಾಗಿದೆ. ಒಂದು ವೇಳೆ ಚಿನ್ನಸ್ವಾಮಿ ಕ್ರೀಡಾಂಗಣವನ್ನು ಆರ್.ಸಿ.ಬಿ ಎಡಗಾಲಿಂದ ಒದ್ದು ಹೊರ ನಡೆದರೆ, ಅದೇ ಚಿನ್ನಸ್ವಾಮಿಯನ್ನು ತಲೆ ಮೇಲೆ ಹೊತ್ತು ಮೆರೆಸಲು ಮುಂದಾಗಿದೆ ಕೋಲ್ಕತಾ ನೈಟ್ ರೈಡರ್ಸ್. ಹಾಗಾದ್ರೆ ಆರ್.ಸಿ.ಬಿ ಈಗ ಏನ್ ಮಾಡತ್ತೆ? ತನ್ನ ಮನೆಯ ಅಭಿಮಾನಿಗಳ ಭಾವನೆಗಳಿಗೆ ಬೆಲೆ ಕೊಟ್ಟು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಆಡುತ್ತಾ? ಅಭಿಮಾನಿಗಳ ಭಾವನೆಗಳನ್ನು ಧಿಕ್ಕರಿಸಿ ಹೊರ ನಡೆಯುತ್ತಾ? ಇದೇ ಈಗ ಮಿಲಿಯನ್ ಡಾಲರ್ ಪ್ರಶ್ನೆ.
ಸ್ಪೋರ್ಟ್ಸ್ ಬ್ಯೂರೋ ಏಷ್ಯಾನೆಟ್ ಸುವರ್ಣ ನ್ಯೂಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.