ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಜೂನ್ 07ರಿಂದ ಆರಂಭ
ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಭಾರತ-ಆಸ್ಟ್ರೇಲಿಯಾ ಕಾದಾಟ
ಮತ್ತೆ ವಿರಾಟ್ ಕೊಹ್ಲಿ, ಟೀಂ ಇಂಡಿಯಾ ಕ್ಯಾಪ್ಟನ್ ಆಗ್ತಾರಾ?
ನವದೆಹಲಿ(ಏ.28): ಮುಂಬರುವ ಜೂನ್ 07ರಿಂದ ಆರಂಭವಾಗಲಿರುವ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಕಾದಾಡಲಿವೆ. ಒಂದು ವೇಳೆ ರೋಹಿತ್ ಶರ್ಮಾ ಅನಿರೀಕ್ಷಿತ ಪರಿಸ್ಥಿತಿಯಲ್ಲಿ ತಂಡದಿಂದ ಹೊರಬಿದ್ದರೇ, ವಿರಾಟ್ ಕೊಹ್ಲಿಯವರನ್ನು ನಾಯಕತ್ವದ ಆಯ್ಕೆಯಾಗಿ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಪರಿಗಣಿಸಬೇಕು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಹೆಡ್‌ಕೋಚ್ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ವಿರಾಟ್ ಕೊಹ್ಲಿ, ಭಾರತ ಕ್ರಿಕೆಟ್ ತಂಡವು ಕಂಡ ಅತ್ಯಂತ ಯಶಸ್ವಿ ಟೆಸ್ಟ್ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಫೈನಲ್ ಪ್ರವೇಶಿಸಿತ್ತು. ಆದರೆ ಸೌಥಾಂಪ್ಟನ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ಎದುರು ಟೀಂ ಇಂಡಿಯಾ ಮುಗ್ಗರಿಸುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಮಹೇಂದ್ರ ಸಿಂಗ್ ಧೋನಿ, 2014ರ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗ ಟೆಸ್ಟ್ ಸರಣಿಯ ಮಧ್ಯದಲ್ಲಿಯೇ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇದರ ಬೆನ್ನಲೇ ಮೆಲ್ಬೊರ್ನ್ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ, ಭಾರತ ಟೆಸ್ಟ್ ತಂಡದ ಪೂರ್ಣಾವಧಿ ನಾಯಕರಾಗಿ ನೇಮಕವಾಗಿದ್ದರು. 7 ವರ್ಷಗಳ ಕಾಲ ಟೀಂ ಇಂಡಿಯಾ ಟೆಸ್ಟ್ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದ ಕೊಹ್ಲಿ, ಕಳೆದ ವರ್ಷ ದಕ್ಷಿಣ ಅಫ್ರಿಕಾ ಎದುರಿನ ಸರಣಿ ಸೋಲುತ್ತಿದ್ದಂತೆಯೇ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು.
" ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಂತಹ ಮಹತ್ವದ ಪಂದ್ಯವೆಂದಾಗ, ರೋಹಿತ್ ಶರ್ಮಾ ಸಂಪೂರ್ಣ ಫಿಟ್ ಆಗಿದ್ದು ತಂಡವನ್ನು ಮುನ್ನಡೆಸಬೇಕು. ಆದರೆ ಒಂದು ವೇಳೆ ಅನಿರೀಕ್ಷತ ಪರಿಸ್ಥಿತಿಯಿಂದಾಗಿ ಅವರು ತಂಡದ ಆಯ್ಕೆಗೆ ಅಲಭ್ಯರಾದರೆ, ನಾನಂತೂ ವಿರಾಟ್ ಕೊಹ್ಲಿಯವರನ್ನು ನಾಯಕರನ್ನಾಗಿ ನೋಡಲು ಬಯಸುತ್ತೇನೆ ಎಂದು ESPNcricinfo ವೆಬ್‌ಸೈಟ್ ಜತೆ ಮಾತನಾಡುವಾಗ ತಿಳಿಸಿದ್ದಾರೆ.
ಇನ್ನು ಇದೇ ವೇಳೆ ರವಿಶಾಸ್ತ್ರಿ, ಕಳೆದ ವರ್ಷ ಬರ್ಮಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ದ ನಡೆದ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಅವರನ್ನು ನಾಯಕರನ್ನಾಗಿ ಮಾಡುವ ಬದಲು ವಿರಾಟ್ ಕೊಹ್ಲಿಯವರನ್ನೇ ನಾಯಕರನ್ನಾಗಿ ಮಾಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
" ರೋಹಿತ್ ಶರ್ಮಾ, ಗಾಯಗೊಂಡಾಗ ವಿರಾಟ್ ಕೊಹ್ಲಿಗೆ ನಾಯಕರಾಗಿ ಎಂದು ಕೇಳಿಕೊಂಡಿದ್ದರು ಎಂದು ಭಾವಿಸುತ್ತೇನೆ. ಒಂದು ವೇಳೆ ಆಗ ನಾನೇ ಹೆಡ್ ಕೋಚ್ ಆಗಿದ್ದರೆ, ಹಾಗೆಯೇ ಮಾಡುತ್ತಿದ್ದೆ. ರಾಹುಲ್ ದ್ರಾವಿಡ್ ಕೂಡಾ ಹಾಗೆ ಮಾಡಿದ್ದರೇ ಎನ್ನುವ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ಈ ಬಗ್ಗೆ ನಾನು ಅವರ ಜತೆ ಮಾತನಾಡಿಲ್ಲ. ಒಂದು ವೇಳೆ ಅವರು ತಂಡವನ್ನು ಮುನ್ನಡೆಸಲು ಸಿದ್ದರಿದ್ದರೇ, ಬಿಸಿಸಿಐಗೆ ಅವರನ್ನು ಆ ಪಂದ್ಯಕ್ಕೆ ನಾಯಕರನ್ನಾಗಿ ನೇಮಿಸಿ ಎಂದು ನಾನೇ ಶಿಫಾರಸು ಮಾಡುತ್ತಿದ್ದೆ. ಯಾಕೆಂದರೆ, ಆ ಸರಣಿಯಲ್ಲಿ ಕೊಹ್ಲಿ ನೇತೃತ್ವದಲ್ಲಿ ಟೀಂ ಇಂಡಿಯಾ 2-1ರ ಮುನ್ನಡೆ ಸಾಧಿಸಿತ್ತು.
WTC Final: ಬಲಿಷ್ಠ ಟೀಂ ಇಂಡಿಯಾ ಪ್ರಕಟ; ಸೂರ್ಯ, ಶ್ರೇಯಸ್‌ಗಿಲ್ಲ ಸ್ಥಾನ..! CSK ಆಟಗಾರನಿಗೆ ಜಾಕ್‌ಪಾಟ್
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ, 2017ರಿಂದ 2021ರ ವರೆಗೆ ಭಾರತ ಕ್ರಿಕೆಟ್ ತಂಡದ ಹೆಡ್‌ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ವಿರಾಟ್ ಕೊಹ್ಲಿ, ಸಾಕಷ್ಟು ಧನಾತ್ಮಕ ಮನಸ್ಥಿತಿ ಹೊಂದಿದ್ದಾರೆ ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಭಾರತ ತಂಡ ಹೀಗಿದೆ ನೋಡಿ:
ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ ಎಲ್ ರಾಹುಲ್, ಕೆ ಎಸ್ ಭರತ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕತ್.