
ಮೌಂಟ್ ಮೌಂಗನುಯಿ(ನ.13): ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ರನ್ ಗಳಿಸದೆ ಔಟಾದ ಬಳಿಕ ವಿರಾಟ್ ಕೊಹ್ಲಿ ಬೇಡದ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. 244 ರನ್‌ಗಳ ಹೀನಾಯ ಸೋಲಿನ ಜತೆಗೆ ಕೊಹ್ಲಿಗೆ ವೈಯಕ್ತಿಕವಾಗಿಯೂ ಇದು ಕರಾಳ ದಿನವಾಗಿ ಮಾರ್ಪಟ್ಟಿದೆ. ಮ್ಯಾಟ್ ಹೆನ್ರಿ ಎಸೆದ ನಾಲ್ಕನೇ ಎಸೆತದಲ್ಲೇ ಕೊಹ್ಲಿ ಔಟಾಗಿದ್ದರು. ಕೊಹ್ಲಿ ಸೇರಿ ರೋಹಿತ್ ಶರ್ಮಾ (0), ಶ್ರೇಯಸ್ ಅಯ್ಯರ್ (0) ಅವರನ್ನೂ ಹೆನ್ರಿ ಅದೇ ಓವರ್‌ನಲ್ಲಿ ಪೆವಿಲಿಯನ್‌ಗಟ್ಟಿದ್ದರು.
ಈ ಕಳಪೆ ಪ್ರದರ್ಶನದೊಂದಿಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ ಅವರ ಡಕ್‌ಗಳ ಸಂಖ್ಯೆ 20ಕ್ಕೇರಿದೆ. ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಇದೀಗ ಕೊಹ್ಲಿ ಸರಿಗಟ್ಟಿದ್ದಾರೆ. ಏಕದಿನದಲ್ಲಿ ಭಾರತದ ಪರ ಅತಿ ಹೆಚ್ಚು ಬಾರಿ ಸೊನ್ನೆಗೆ ಔಟಾದ ಆಟಗಾರ ಎಂಬ ಬೇಡದ ದಾಖಲೆಯನ್ನು ಇನ್ನು ಕೊಹ್ಲಿ, ಸಚಿನ್ ಜತೆ ಹಂಚಿಕೊಳ್ಳಲಿದ್ದಾರೆ. 463 ಪಂದ್ಯಗಳಿಂದ ಸಚಿನ್ 20 ಬಾರಿ ಔಟಾಗಿದ್ದರೆ, 321 ಪಂದ್ಯಗಳನ್ನಾಡಿರುವ ಕೊಹ್ಲಿ ಈ ಬೇಡದ ದಾಖಲೆ ಬರೆದಿದ್ದಾರೆ. 19 ಡಕ್‌ಗಳೊಂದಿಗೆ ಜಾವಗಲ್ ಶ್ರೀನಾಥ್ ಮೂರನೇ ಸ್ಥಾನದಲ್ಲಿದ್ದರೆ, ತಲಾ 18 ಡಕ್‌ಗಳೊಂದಿಗೆ ಅನಿಲ್ ಕುಂಬ್ಳೆ, ರೋಹಿತ್ ಶರ್ಮಾ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಕೂಡ ಗೋಲ್ಡನ್ ಡಕ್ ಆಗಿ ಮರಳಿದ್ದರು.
ಮೌಂಟ್ ಮೌಂಗನುಯಿಯಲ್ಲಿ ನಡೆದ ಪಂದ್ಯದಲ್ಲಿ 334 ರನ್‌ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ, ಮ್ಯಾಟ್ ಹೆನ್ರಿ ಅವರ ಮಾರಕ ಬೌಲಿಂಗ್‌ಗೆ ನಲುಗಿ ಕೇವಲ 26.4 ಓವರ್‌ಗಳಲ್ಲಿ 89 ರನ್‌ಗಳಿಗೆ ಆಲೌಟ್ ಆಯಿತು. ಇತ್ತೀಚಿನ ದಿನಗಳಲ್ಲಿ ಭಾರತ ಅನುಭವಿಸಿದ ಅತಿ ದೊಡ್ಡ ಮುಖಭಂಗಗಳಲ್ಲಿ ಈ ಸೋಲು ಕೂಡ ಒಂದಾಗಿದೆ. 2027ರ ಏಕದಿನ ವಿಶ್ವಕಪ್ ಹೊಸ್ತಿಲಲ್ಲಿರುವಾಗ ಈ ಸೋಲಿನ ಆಘಾತವನ್ನು ಭಾರತಕ್ಕೆ ಅರಗಿಸಿಕೊಳ್ಳಲಾಗುತ್ತಿಲ್ಲ. 2000ನೇ ಇಸವಿಯ ಬಳಿಕ ಏಕದಿನದಲ್ಲಿ ಭಾರತದ ಮೂರನೇ ಅತಿ ಕಡಿಮೆ ಸ್ಕೋರ್ ಇದಾಗಿದೆ.
2000ನೇ ಇಸವಿಯ ಅಕ್ಟೋಬರ್‌ನಲ್ಲಿ ಶಾರ್ಜಾದಲ್ಲಿ ಶ್ರೀಲಂಕಾ ವಿರುದ್ಧ 54 ರನ್‌ಗಳಿಗೆ, 2010ರಲ್ಲಿ ದಂಬುಲ್ಲಾದಲ್ಲಿ ನ್ಯೂಜಿಲೆಂಡ್ ವಿರುದ್ಧ 88 ರನ್‌ಗಳಿಗೆ ಔಟಾಗಿದ್ದು ಇದಕ್ಕೂ ಮುನ್ನದ ಕಳಪೆ ಪ್ರದರ್ಶನಗಳಾಗಿವೆ. ಭಾರತದ ಏಕದಿನ ಇತಿಹಾಸದಲ್ಲಿ ಆರನೇ ಅತಿ ಕಡಿಮೆ ಸ್ಕೋರ್ ಕೂಡ ಇದಾಗಿದೆ. ರನ್‌ಗಳ ಆಧಾರದಲ್ಲಿ ಭಾರತ ಅನುಭವಿಸಿದ ಎರಡನೇ ಅತಿ ದೊಡ್ಡ ಸೋಲು ಇದಾಗಿದೆ (244 ರನ್). 2000ನೇ ಇಸವಿಯಲ್ಲಿ ಶಾರ್ಜಾದಲ್ಲಿ ಶ್ರೀಲಂಕಾ ವಿರುದ್ಧ 245 ರನ್‌ಗಳಿಗೆ ಸೋತಿದ್ದು ಮೊದಲನೆಯದ್ದಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.