
ಲಂಡನ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ, ಇಂಡಿಯನ್ ಪ್ರೀಮಿಯರ್ ಲೀಗ್ ಮಾಜಿ ಕಮಿಷನರ್ ಲಲಿತ್ ಮೋದಿ ಹಾಗೂ ಯೂನಿವರ್ಸಲ್ ಬಾಸ್ ಖ್ಯಾತಿಯ ಆರ್‌ಸಿಬಿ, ಪಂಜಾಬ್ ಮಾಜಿ ಕ್ರಿಕೆಟಿಗ ಕ್ರಿಸ್ ಗೇಲ್ ಲಂಡನ್‌ನಲ್ಲಿ ಭೇಟಿಯಾಗಿದ್ದು, ಒಟ್ಟಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹೊಸ ಚರ್ಚೆಗಳನ್ನು ಹುಟ್ಟುಹಾಕಿದೆ.
ತಮ್ಮ ವಿಸ್ಪೋಟಕ ಬ್ಯಾಟಿಂಗ್‌ನಿಂದಲೇ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಕ್ರಿಸ್ ಗೇಲ್, 2011ರಿಂದ 2017ರ ವರೆಗೆ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. ಇದಾದ ಬಳಿಕ 2018ರಿಂದ ಪಂಜಾಬ್ ಕಿಂಗ್ಸ್ ತಂಡದ ಪಾಲಾಗಿದ್ದರು. ಕ್ರಿಸ್ ಗೇಲ್, ಕೋಲ್ಕತಾ ನೈಟ್ ರೈಡರ್ಸ್ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರೂ, ಗೇಲ್‌ಗೆ ಹೆಚ್ಚು ಯಶಸ್ಸು ಸಿಕ್ಕಿದ್ದು ಆರ್‌ಸಿಬಿ ತಂಡದಲ್ಲಿ.
ಇದೀಗ ಆರ್‌ಸಿಬಿ ಮಾಜಿ ಮಾಲೀಕ ವಿಜಯ್ ಮಲ್ಯ, ಭಾರತ ತೊರೆದು ಇಂಗ್ಲೆಂಡ್‌ನಲ್ಲಿ ನೆಲೆಯೂರಿದ್ದಾರೆ. ಇನ್ನು ಲಲಿತ್ ಮೋದಿ ಕೂಡಾ ಲಂಡನ್‌ನಲ್ಲಿ ಉಳಿದುಕೊಂಡಿದ್ದಾರೆ. ಈ ಜೋಡಿ ಕ್ರಿಸ್ ಗೇಲ್ ಅವರನ್ನು ಭೇಟಿಯಾಗಿದೆ. ಇದೊಂದು ಸಾಮಾನ್ಯ ಔಪಚಾರಿಕ ಭೇಟಿ ಎನಿಸಿಕೊಂಡಿದೆಯಾದರೂ, ಕೆಲವು ಕ್ರಿಕೆಟ್ ಪಂಡಿತರು, ಈ 3 ಲೆಜೆಂಡ್ಸ್ ಭೇಟಿ ಹಿಂದೆ ಯಾವುದೋ ದೊಡ್ಡ ಕಾರಣ ಇರಬಹುದು ಎನ್ನುವಂತಹ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಮೂವರು ಲೆಜೆಂಡ್ಸ್ ಒಟ್ಟಿಗೆ ಭೇಟಿಯಾಗಿರುವುದು, ಐಪಿಎಲ್‌ನಲ್ಲಿ ಏನೋ ದೊಡ್ಡ ಘಟನೆಗೆ ಸಾಕ್ಷಿಯಾಗಬಹುದು ಎನ್ನುವಂತಹ ಚರ್ಚೆಗಳು ಜೋರಾಗಿವೆ. ಈ ತ್ರಿವಳಿ ಲೆಜೆಂಡ್ಸ್ ಸೇರಿ ಐಪಿಎಲ್‌ನಲ್ಲಿ ಬೆಂಗಳೂರು ಫ್ರಾಂಚೈಸಿಯನ್ನು ಖರೀದಿಸುತ್ತಾರಾ ಎನ್ನುವಂತಹ ಚರ್ಚೆ ಕೂಡಾ ಜೋರಾಗಿ ನಡೆಯುತ್ತಿದೆ.
ವಿಜಯ್ ಮಲ್ಯ ಅವರು 17 ಭಾರತೀಯ ಬ್ಯಾಂಕ್‌ಗೆ ಸುಮಾರು 9 ಸಾವಿರ ಕೋಟಿ ರುಪಾಯಿ ಸಾಲ ಮಾಡಿ ದೇಶ ತೊರೆದಿದ್ದಾರೆ. ಇನ್ನು ಇತ್ತೀಚೆಗೆ ಖ್ಯಾತ ಯೂಟ್ಯೂಬರ್ ರಾಜ್ ಶಮಾನಿ ಅವರು ಉದ್ಯಮಿ ವಿಜಯ್ ಮಲ್ಯ ಅವರನ್ನು ಪಾಡ್‌ಕಾಸ್ಟ್ ಸಂದರ್ಶನ ಮಾಡಿದ್ದರು. ಈ ವಿಡಿಯೋ ಯೂಟ್ಯೂಬ್‌ನಲ್ಲಿ ಹೊಸ ಸಂಚಲನವನ್ನೇ ಹುಟ್ಟುಹಾಕಿತ್ತು. ರಾಜ್ ಶಮಾನಿ ಸುಮಾರು 4 ಗಂಟೆಗಳ ಕಾಲ ವಿಜಯ್ ಮಲ್ಯ ಅವರನ್ನು ಸುದೀರ್ಘ ಸಂದರ್ಶನ ಮಾಡಿದ್ದರು.
ಈ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಹಾಗೂ ಆರ್‌ಸಿಬಿ ಕುರಿತಂತೆಯೂ ವಿಜಯ್ ಮಲ್ಯ ಮನಬಿಚ್ಚಿ ಮಾತನಾಡಿದ್ದರು. ವಿಜಯ್ ಮಲ್ಯ ತಮ್ಮ ರಾಯಲ್ ಚಾಲೆಂಜರ್ಸ್ ವಿಸ್ಕಿ ಪ್ರಮೋಟ್ ಮಾಡುವ ಉದ್ದೇಶದಿಂದ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಖರೀದಿಸಿದ್ದೆ. ಇದು ಕ್ರಿಕೆಟ್ ಮೇಲಿನ ಅಭಿಮಾನಕ್ಕಿಂತ ಹೆಚ್ಚಾಗಿ ತಮ್ಮ ಬ್ಯುಸಿನೆಸ್ ವಿಸ್ತರಿಸುವ ಉದ್ದೇಶದಿಂದ ಐಪಿಎಲ್ ತಂಡ ಖರೀದಿಸಿದ್ದಾಗಿ ಹೇಳಿದ್ದರು. 2008ರಲ್ಲಿ ವಿಜಯ್ ಮಲ್ಯ 485 ಕೋಟಿ ನೀಡಿ ಬೆಂಗಳೂರು ಫ್ರಾಂಚೈಸಿಯನ್ನು ಖರೀದಿಸಿದ್ದರು.
ಇನ್ನು ವಿರಾಟ್ ಕೊಹ್ಲಿಯನ್ನು ಆರ್‌ಸಿಬಿ ಖರೀದಿಸಿದ್ದು ಹೇಗೆ ಎನ್ನುವುದನ್ನು ವಿಜಯ್ ಮಲ್ಯ ವಿವರಿಸಿದ್ದರು. ಡೆಲ್ಲಿ ಫ್ರಾಂಚೈಸಿಯು ಪ್ರದೀಪ್ ಸಾಂಗ್ವಾನ್ ಅವರನ್ನು ಆಯ್ಕೆ ಮಾಡಿಕೊಂಡಿದ್ದರಿಂದ, ಡೆಲ್ಲಿ ಮೂಲದ ಮತ್ತೊಬ್ಬ ಆಟಗಾರ ವಿರಾಟ್ ಕೊಹ್ಲಿ ನಮಗೆ ಸಿಕ್ಕರು ಎಂದು ವಿಜಯ್ ಮಲ್ಯ ಹೇಳಿದ್ದರು. ಇದು ಆರ್‌ಸಿಬಿ ಪಾಲಿಗೆ ಗೇಮ್ ಚೇಂಜರ್ ಎನಿಸಿಕೊಂಡಿತು. ಆರಂಭದಲ್ಲೇ ಕೊಹ್ಲಿಯನ್ನ ಆರ್‌ಸಿಬಿ ಖರೀದಿಸಿತು. ಇಂದು ಕೊಹ್ಲಿ ಆಧುನಿಕ ಕ್ರಿಕೆಟ್‌ನ ದಿಗ್ಗಜ ಬ್ಯಾಟರ್ ಆಗಿ ಬೆಳೆದು ನಿಂತಿದ್ದಾರೆ. ಇದಷ್ಟೇ ಅಲ್ಲದೇ ಕಳೆದ 18 ಐಪಿಎಲ್ ಆವೃತ್ತಿಯಲ್ಲೂ ಆರ್‌ಸಿಬಿ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.