
ಮುಲ್ಲಾನ್‌ಪುರ್: ಐಪಿಎಲ್‌ನಲ್ಲಿ ವೈಭವ್ ಸೂರ್ಯವಂಶಿ ಅಬ್ಬರ ಮುಂದುವರಿದಿದೆ. ಶುಕ್ರವಾರ ಗುಜರಾತ್ ಟೈಟಾನ್ಸ್ ವಿರುದ್ಧದ ಕ್ವಾಲಿಫೈಯರ್-2 ಪಂದ್ಯದಲ್ಲಿ ವೈಭವ್ 47 ಎಸೆತದಲ್ಲಿ 96 ರನ್ ಗಳಿಸಿ ಔಟಾಗಿ, ಸತತ 2ನೇ ಪಂದ್ಯದಲ್ಲಿ ಶತಕದಿಂದ ವಂಚಿತರಾದರು. ಆದರೂ, ಕೆಲ ಮಹತ್ವದ ದಾಖಲೆಗಳನ್ನು ಬರೆದರು.
ವೈಭವ್, ಈ ಐಪಿಎಲ್‌ನಲ್ಲಿ 776 ರನ್ ಕಲೆಹಾಕಿದ್ದು, ಈ ಪೈಕಿ 500ಕ್ಕೂ ಹೆಚ್ಚು ರನ್ ಪವರ್-ಪ್ಲೇನಲ್ಲೇ ದಾಖಲಿಸಿದ್ದಾರೆ ಎನ್ನುವುದು ವಿಶೇಷ. 16 ಇನ್ನಿಂಗ್ಸ್‌ಗಳಲ್ಲಿ 521 ರನ್ ಚಚ್ಚಿರುವ ವೈಭವ್, ಟಿ20 ಟೂರ್ನಿಯೊಂದರಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟಿಗ ಎನ್ನುವ ಅಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ. 2016ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದ ಡೇವಿಡ್ ವಾರ್ನರ್ 467 ರನ್ ಗಳಿಸಿದ್ದು, ಈ ಹಿಂದಿನ ದಾಖಲೆ ಎನಿಸಿತ್ತು.
ವೈಭವ್ ಗಳಿಸಿರುವ 776 ರನ್‌ಗಳ ಪೈಕಿ 684 ರನ್ ಬೌಂಡರಿ ಹಾಗೂ ಸಿಕ್ಸರ್‌ಗಳ ಮೂಲಕವೇ ಬಂದಿದೆ. ಅವರು ಈ ವರ್ಷ 63 ಬೌಂಡರಿ, 72 ಸಿಕ್ಸರ್ ಚಚ್ಚಿದ್ದಾರೆ. ವೈಭವ್ ಗಳಿಸಿರುವ ಒಟ್ಟು ರನ್‌ಗಳಲ್ಲಿ ಶೇ.88ಕ್ಕಿಂತ ಹೆಚ್ಚು ರನ್ ಬೌಂಡರಿ ಹಾಗೂ ಸಿಕ್ಸರ್‌ನಿಂದಲೇ ದಾಖಲಾಗಿರುವುದು ವಿಶೇಷ.
ಬೌಂಡರಿ ದಾಖಲೆ: ಐಪಿಎಲ್ ಆವೃತ್ತಿಯೊಂದರಲ್ಲಿ ಅತಿಹೆಚ್ಚು ಬೌಂಡರಿ (ಫೋರ್ ಹಾಗೂ ಸಿಕ್ಸರ್) ಬಾರಿಸಿದ ದಾಖಲೆಯನ್ನೂ ವೈಭವ್ ಬರೆದಿದ್ದಾರೆ. ಅವರು ಈ ಬಾರಿ ಒಟ್ಟು 135 ಬೌಂಡರಿ (63 ಫೋರ್, 72 ಸಿಕ್ಸರ್) ಗಳಿಸಿದ್ದಾರೆ. 2022ರಲ್ಲಿ ಜೋಸ್ ಬಟ್ಲರ್ 83 ಫೋರ್ ಹಾಗೂ 45 ಸಿಕ್ಸರ್‌ಗಳೊಂದಿಗೆ ಒಟ್ಟು 128 ಬೌಂಡರಿ ಗಳಿಸಿದ್ದರು. ಆ ದಾಖಲೆಯನ್ನು ವೈಭವ್ ಮುರಿದಿದ್ದಾರೆ.
ಕಳೆದ ಆವೃತ್ತಿಯಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿ ಗಮನ ಸೆಳೆದಿದ್ದ ವೈಭವ್, ತಮ್ಮ 2ನೇ ಆವೃತ್ತಿಯಲ್ಲಿ ಎದುರಾಳಿಗಳಿಗೆ ಇನ್ನಷ್ಟು ಅಪಾಯಕಾರಿಯಾಗಿ ಪರಿಣಮಿಸಿದ್ದಾರೆ. ಕೇವಲ 440 ಎಸೆತಗಳಲ್ಲಿ 1000 ರನ್ ಮೈಲುಗಲ್ಲು ತಲುಪಿ, ಐಪಿಎಲ್‌ನಲ್ಲಿ ಅತಿವೇಗವಾಗಿ 1000 ರನ್ ಪೂರೈಸಿದ ಆಟಗಾರ ಎನ್ನುವ ದಾಖಲೆ ಬರೆದಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೆಕೆಆರ್ ಪರ ಹಲವು ವರ್ಷ ಆಡಿದ್ದ ಆ್ಯಂಡ್ರೆ ರಸೆಲ್, ತಮ್ಮ ಮೊದಲ 1000 ರನ್‌ಗೆ 545 ರನ್ ತೆಗೆದುಕೊಂಡಿದ್ದರು. ಇದು ಈ ಹಿಂದಿನ ಅತಿವೇಗದ 1000 ರನ್ ದಾಖಲೆ ಎನಿಸಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.