ಮತ್ತೊಂದು ಐತಿಹಾಸಿಕ ದಾಖಲೆ ಬರೆದ 15ರ ವಂಡರ್‌ಕಿಡ್ ವೈಭವ್ ಸೂರ್ಯವಂಶಿ

Published : Oct 01, 2026, 08:44 PM IST
vaibhav sooryavanshi

ಸಾರಾಂಶ

ಭಾರತೀಯ ಕ್ರಿಕೆಟ್‌ನ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ 'ಟೈಮ್' ಮ್ಯಾಗಜಿನ್‌ನ 'TIME 100 Next 2026' ಪಟ್ಟಿಯಲ್ಲಿ ಸ್ಥಾನ ಪಡೆದ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದಾರೆ. ಕ್ರೀಡಾ ಜಗತ್ತಿನ 'ಫಿನಾಮ್' ವಿಭಾಗದಲ್ಲಿ ಈ ಜಾಗತಿಕ ಗೌರವಕ್ಕೆ ಪಾತ್ರರಾಗಿದ್ದಾರೆ.

ಬೆಂಗಳೂರು (ಅ.1): ಭಾರತೀಯ ಕ್ರಿಕೆಟ್‌ನ 'ವಂಡರ್‌ಕಿಡ್' ಎಂದೇ ಖ್ಯಾತರಾಗಿರುವ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಈ ಬಾರಿ ಅವರು ಕ್ರಿಕೆಟ್ ಮೈದಾನದ ಹೊರಗೆ ಜಾಗತಿಕ ಮಟ್ಟದ ಮಹತ್ವದ ಗೌರವಕ್ಕೆ ಭಾಜನರಾಗಿದ್ದಾರೆ.

ವಿಶ್ವದಾದ್ಯಂತ ಭವಿಷ್ಯದ ದಿಕ್ಕನ್ನು ಬದಲಾಯಿಸುವ ಮತ್ತು ವಿವಿಧ ರಂಗಗಳಲ್ಲಿ ಪ್ರಭಾವ ಬೀರುತ್ತಿರುವ ಉದಯೋನ್ಮುಖ ತಾರೆಗಳನ್ನು ಗುರುತಿಸುವ ವಿಶ್ವಪ್ರಸಿದ್ಧ 'ಟೈಮ್' (TIME) ಮ್ಯಾಗಜಿನ್‌ನ 'TIME 100 Next 2026' ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿ ಸ್ಥಾನ ಪಡೆದಿದ್ದಾರೆ. ವಿಶೇಷವೆಂದರೆ, ಈ ಬಾರಿಯ ಇಡೀ ಪಟ್ಟಿಯಲ್ಲೇ ವೈಭವ್ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

'ಫಿನಾಮ್' ವಿಭಾಗದಲ್ಲಿ ವೈಭವ್‌ಗೆ ಸ್ಥಾನ

ಟೈಮ್ ಮ್ಯಾಗಜಿನ್ ವೈಭವ್ ಸೂರ್ಯವಂಶಿ ಅವರನ್ನು 'ಫಿನಾಮ್' (Phenom) ವಿಭಾಗದಲ್ಲಿ ಸೇರ್ಪಡೆಗೊಳಿಸಿದೆ. ಕ್ರೀಡಾ ಜಗತ್ತಿನಿಂದ ಈ ಗೌರವಾನ್ವಿತ ಪಟ್ಟಿಯಲ್ಲಿ ಸ್ಥಾನ ಪಡೆದ ಏಳು ಕ್ರೀಡಾಪಟುಗಳಲ್ಲಿ ವೈಭವ್ ಕೂಡ ಒಬ್ಬರಾಗಿದ್ದಾರೆ.

ಈ ಪಟ್ಟಿಯಲ್ಲಿರುವ ಇತರ ಪ್ರಮುಖ ಕ್ರೀಡಾಪಟುಗಳೆಂದರೆ ಆರ್ಚ್ ಮ್ಯಾನಿಂಗ್ (ಅಮೆರಿಕನ್ ಫುಟ್‌ಬಾಲ್ ಕ್ವಾರ್ಟರ್‌ಬ್ಯಾಕ್), ಟೈರೀಸ್ ಮ್ಯಾಕ್ಸಿ (ಎನ್‌ಬಿಎ ಸ್ಟಾರ್), ನಾವೋಮಿ ಗಿರ್ಮಾ (ಮಹಿಳಾ ಫುಟ್‌ಬಾಲ್ ಪಟು), ಫೋಲಾರಿನ್ ಬಾಲೋಗುನ್ (ಫುಟ್‌ಬಾಲ್ ಸ್ಟ್ರೈಕರ್), ಅಲೆಕ್ಸಾಂಡ್ರಾ ಈಲಾ (ಟೆನ್ನಿಸ್ ಆಟಗಾರ್ತಿ) ಹಾಗೂ ಒಲಿವಿಯಾ ಮೈಲ್ಸ್ (ಬಾಸ್ಕೆಟ್‌‌ಬಾಲ್ ಸ್ಟಾರ್).

ಚಿಕ್ಕ ವಯಸ್ಸಿನಲ್ಲೇ ಸಾಧನೆಯ ಶಿಖರಕ್ಕೇರಿದ ವೈಭವ್!

ವೈಭವ್ ಸೂರ್ಯವಂಶಿ ಅವರ ಕ್ರಿಕೆಟ್ ಪಯಣವು ಒಂದು ಕಾಲ್ಪನಿಕ ಕಥೆಯಂತೆ ರೋಚಕವಾಗಿದೆ. 2024ರ ಐಪಿಎಲ್ (IPL) ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ಫ್ರಾಂಚೈಸಿಯು ಕೇವಲ 13 ವರ್ಷದವರಾಗಿದ್ದಾಗ ಇವರನ್ನು ಖರೀದಿಸುವ ಮೂಲಕ ಐಪಿಎಲ್ ಇತಿಹಾಸದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ನಿರ್ಮಿಸಲು ವೇದಿಕೆ ಕಲ್ಪಿಸಿಕೊಟ್ಟಿತ್ತು. ಅದರ ಮರುವರ್ಷವೇ ಐಪಿಎಲ್‌ಗೆ ಪದಾರ್ಪಣೆ ಮಾಡಿದ ವೈಭವ್, ಪುರುಷರ ಟಿ20 ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನಲ್ಲಿ ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಇತಿಹಾಸ ಸೃಷ್ಟಿಸಿದರು. ಪ್ರಸ್ತುತ ಅವರು ಟೀಮ್ ಇಂಡಿಯಾ ಪರ ಸತತವಾಗಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.

ಸಚಿನ್ ತೆಂಡೂಲ್ಕರ್ ದಾಖಲೆ ಧೂಳೀಪಟ!

ವೈಭವ್ ಸೂರ್ಯವಂಶಿ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. ಈ ಹಾದಿಯಲ್ಲಿ ಅವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಲ್ಲಿದ್ದ ಸುದೀರ್ಘ ಅವಧಿಯ ದಾಖಲೆಯನ್ನು ಪತನಗೊಳಿಸಿದ್ದರು. ಪ್ರಸ್ತುತ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ ಭಾರತೀಯ ತಂಡದಲ್ಲೂ ವೈಭವ್ ಅತ್ಯಂತ ಕಿರಿಯ ಕ್ರೀಡಾಪಟುವಾಗಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Cricket; ರಿಸರ್ವ್ ಡೇ ಇಲ್ಲ, ಸೂಪರ್ ಓವರ್ ಇಲ್ಲ; ಭಾರತ-ಪಾಕ್ ಫೈನಲ್ ಪಂದ್ಯ ಮಳೆ ಬಂದು ಪಂದ್ಯ ರದ್ದಾದರೆ, ಮೆಡಲ್‌ ಯಾರಿಗೆ?
ಆಂಧ್ರ ವಿರುದ್ಧದ ರಣಜಿ ಪಂದ್ಯಕ್ಕೆ ಬಲಶಾಲಿ ಕರ್ನಾಟಕ ತಂಡ ಪ್ರಕಟ: ಯುವ ಆಟಗಾರ ರವಿ ಸ್ಮರಣ್ ಕ್ಯಾಪ್ಟನ್!