ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಪಾಕ್ ಪಡೆ ಚಚ್ಚಿ ಬೀಸಾಕಿದ ಭಾರತ; ಆರ್ಯವೀರ್ ಸೆಹ್ವಾಗ್‌ಗೆ ಸ್ಟಾರ್ ಬಾಯ್ ಪಟ್ಟ ಕೊಟ್ಟ ವೈಭವ್ ಸೂರ್ಯವಂಶಿ..!

Published : Nov 15, 2026, 10:44 AM IST
Vaibhav Sooryavanshi on Aaryavir Sehwag

ಸಾರಾಂಶ

ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ರೋಚಕ ಗೆಲುವು ಸಾಧಿಸಿದೆ. 361 ರನ್ ಗಳಿಸಿ ಟೂರ್ನಿಯ ಶ್ರೇಷ್ಠ ಆಟಗಾರನಾದ ಆರ್ಯವೀರ್ ಸೆಹ್ವಾಗ್ ಅವರ ಪ್ರದರ್ಶನವನ್ನು ವೈಭವ್ ಸೂರ್ಯವಂಶಿ ಕೊಂಡಾಡಿದ್ದಾರೆ.

ಬೆಂಗಳೂರು(ನ.15): ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ ರೋಚಕ ಗೆಲುವು ದಾಖಲಿಸಿರುವುದಕ್ಕೆ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಕೂಡ ಸಂಭ್ರಮಿಸಿದ್ದಾರೆ. ಶನಿವಾರ ನಡೆದ ಈ ರೋಚಕ ಪಂದ್ಯದಲ್ಲಿ ಕೊನೆಯ ಎಸೆತದವರೆಗೂ ಗೆಲುವಿಗಾಗಿ ಹೋರಾಟ ನಡೆಸಿದ ಭಾರತ, ಅಂತಿಮವಾಗಿ ಒಂದು ವಿಕೆಟ್‌ನಿಂದ ಜಯ ಸಾಧಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಈ ಪಂದ್ಯವನ್ನು ವೀಕ್ಷಿಸಿದ ವೈಭವ್, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಇದೇ ವೇಳೆ ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ಗೆದ್ದ ವಿರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಅವರಿಗೂ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಂದ್ಯದ ಬಹುತೇಕ ಸಮಯದಲ್ಲಿ ಪಾಕಿಸ್ತಾನ ಮೇಲುಗೈ ಸಾಧಿಸಿತ್ತು. ಆದರೆ ಕೊನೆಯ ಹಂತದಲ್ಲಿ ಅದ್ಭುತ ಹೋರಾಟ ನಡೆಸಿದ ಭಾರತ ತಂಡ ಕೊನೆಯ ಎಸೆತದಲ್ಲಿ ಗೆಲುವಿನ ನಗೆ ಬೀರಿತು. ಗ್ರೂಪ್ ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋಲು ಅನುಭವಿಸಿದ್ದ ಭಾರತ, ಫೈನಲ್‌ನಲ್ಲಿ ಸೇಡು ತೀರಿಸಿಕೊಂಡು ಟ್ರೋಫಿ ಎತ್ತಿಹಿಡಿಯಿತು.

'ಎಂತಹ ಅದ್ಭುತ ಪಂದ್ಯವಿದು!' ಎಂದ ವೈಭವ್ ಸೂರ್ಯವಂಶಿ

ಪಂದ್ಯದ ರೋಚಕತೆಯನ್ನು ಕಂಡು ಅಚ್ಚರಿಗೊಂಡ ವೈಭವ್ ಸೂರ್ಯವಂಶಿ, ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. “ಅಭಿನಂದನೆಗಳು. ಓ ಮೈ ಗಾಡ್! ಎಂತಹ ಅದ್ಭುತ ಪಂದ್ಯ!” ಎಂದು ವೈಭವ್ ಬರೆದುಕೊಂಡಿದ್ದಾರೆ. ಕೇವಲ 15 ವರ್ಷದ ವೈಭವ್, ಭಾರತ ತಂಡದ ಈ ರೋಚಕ ಗೆಲುವನ್ನು ಕ್ರಿಕೆಟ್ ಅಭಿಮಾನಿಯಂತೆ ಸಂಭ್ರಮಿಸಿದ್ದಾರೆ.

ಆರ್ಯವೀರ್ ಸೆಹ್ವಾಗ್‌ಗೆ 'ಸ್ಟಾರ್ ಬಾಯ್' ಪಟ್ಟ!

ಇನ್ನೊಂದು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವೈಭವ್ ಸೂರ್ಯವಂಶಿ, ವಿರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ಅವರನ್ನು ವಿಶೇಷವಾಗಿ ಹೊಗಳಿದ್ದಾರೆ. ಅಂಡರ್-19 ಏಷ್ಯಾಕಪ್‌ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಆರ್ಯವೀರ್, ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದರು. ಆರ್ಯವೀರ್ ಅವರನ್ನು ಉದ್ದೇಶಿಸಿ “ಸ್ಟಾರ್ ಬಾಯ್, ಆರ್ಯವೀರ್ ಸೆಹ್ವಾಗ್” ಎಂದು ವೈಭವ್ ಬರೆದುಕೊಂಡಿದ್ದಾರೆ. ಈ ಮೂಲಕ ಯುವ ಆಟಗಾರನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟೂರ್ನಿಯಲ್ಲಿ 361 ರನ್; ಫೈನಲ್‌ನಲ್ಲೂ ಆರ್ಯವೀರ್ ಅಬ್ಬರ

ಅಂಡರ್-19 ಏಷ್ಯಾಕಪ್‌ನಲ್ಲಿ ಆರ್ಯವೀರ್ ಒಟ್ಟು 361 ರನ್ ಗಳಿಸುವ ಮೂಲಕ ಟೂರ್ನಿಯ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡಿದ್ದರು. ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲೂ ಅವರು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆರಂಭಿಕ ಆಟಗಾರನಾಗಿ ನಾಯಕ ಲಕ್ಷ್ಯ ರೈಚಂದಾನಿ ಜೊತೆ ಕಣಕ್ಕಿಳಿದ ಆರ್ಯವೀರ್, 61 ಎಸೆತಗಳಲ್ಲಿ 58 ರನ್ ಗಳಿಸಿದರು.

ಪಂದ್ಯದ ಬಳಿಕ ಮಾತನಾಡಿದ ಆರ್ಯವೀರ್, 338 ರನ್‌ಗಳ ಬೃಹತ್ ಗುರಿ ಬೆನ್ನಟ್ಟುವಾಗ ತಂಡದ ಯೋಜನೆ ಏನಾಗಿತ್ತು ಎಂಬುದನ್ನು ವಿವರಿಸಿದ್ದರು. “ಪಿಚ್ ಬ್ಯಾಟಿಂಗ್‌ಗೆ ತುಂಬಾ ಚೆನ್ನಾಗಿದೆ, ಇದು ಅಷ್ಟೊಂದು ದೊಡ್ಡ ಮೊತ್ತವಲ್ಲ. ನಾವು ಸಹಜವಾಗಿ ಬ್ಯಾಟಿಂಗ್ ಮಾಡಿ, ನಮ್ಮ ಸಾಮಾನ್ಯ ಹೊಡೆತಗಳನ್ನು ಆಡಿದರೆ ಗುರಿ ತಲುಪಬಹುದು ಎಂಬ ಚರ್ಚೆ ನಡೆದಿತ್ತು. ಗುರಿಯನ್ನು ಬೆನ್ನಟ್ಟುತ್ತೇವೆ ಎಂಬ ವಿಶ್ವಾಸ ಯಾವಾಗಲೂ ನಮ್ಮಲ್ಲಿತ್ತು,” ಎಂದು ಆರ್ಯವೀರ್ ಹೇಳಿದ್ದಾರೆ.

ಪಾಕಿಸ್ತಾನ ವಿರುದ್ಧದ ಫೈನಲ್‌ನಲ್ಲಿ ಭಾರತ ತಂಡದ ಸಂಘಟಿತ ಹೋರಾಟಕ್ಕೆ ಪ್ರಶಸ್ತಿ ಒಲಿದಿದ್ದು, ಆರ್ಯವೀರ್ ಅವರ ಪ್ರದರ್ಶನಕ್ಕೆ ವೈಭವ್ ಸೂರ್ಯವಂಶಿ ನೀಡಿದ ಮೆಚ್ಚುಗೆಯೂ ಇದೀಗ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಏಷ್ಯಾಕಪ್ ಕ್ರಿಕೆಟ್‌ನಲ್ಲಿ ಅಪ್ಪನನ್ನೇ ಮೀರಿಸಿದ ಮಗ...! ಮೊದಲ 5 ಪಂದ್ಯಗಳಲ್ಲಿ ವಿರೇಂದ್ರ ಸೆಹ್ವಾಗ್‌ಗಿಂತ ಆರ್ಯವೀರ್ ರನ್‌ ಗಳಿಸಿದ್ದೇ ಹೆಚ್ಚು..!
ಸಚಿನ್ ಕಣ್ಣು ಪರಿಸರದ ಮೇಲೆ, ರಹಾನೆ ಆಸಕ್ತಿ ಅಡುಗೆಮನೆಯ ಮೇಲೆ! ಇಬ್ಬರ ಹೊಸ ಉದ್ಯಮದ ಕಥೆ ಏನು?