ವೈಭವ್ ಸೂರ್ಯವಂಶಿ ವಿಚಾರದಲ್ಲಿ ಅದೊಂದು ತಪ್ಪು ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌..! ಇದೀಗ ಹಳೆ ವಿಡಿಯೋ ವೈರಲ್

Published : May 28, 2026, 06:36 PM IST
Vaibhav Sooryavanshi

ಸಾರಾಂಶ

15 ವರ್ಷದ ಕ್ರಿಕೆಟ್ ತಾರೆ ವೈಭವ್ ಸೂರ್ಯವಂಶಿ, ಐಪಿಎಲ್‌ನಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಎಲಿಮಿನೇಟರ್ ಪಂದ್ಯದಲ್ಲಿ 97 ರನ್ ಸಿಡಿಸಿ, ಆರೆಂಜ್ ಕ್ಯಾಪ್ ಗೆದ್ದಿರುವ ಇವರನ್ನು ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಖರೀದಿಸಿತ್ತು. ಆದರೆ, ಕಡಿಮೆ ಮೊತ್ತಕ್ಕೆ ಕೈಬಿಟ್ಟ ಡೆಲ್ಲಿ ಕ್ಯಾಪಿಟಲ್ಸ್ ಈಗ ಪಶ್ಚಾತ್ತಾಪ ಪಡುತ್ತಿರುವ ಕುತೂಹಲಕಾರಿ ಕಥೆ ಇಲ್ಲಿದೆ.

Vaibhav Suryavanshi IPL Auction Story: 15 ವರ್ಷದ ವೈಭವ್ ಸೂರ್ಯವಂಶಿ ಇದೀಗ ಭಾರತ ಕ್ರಿಕೆಟ್‌ನ ಭವಿಷ್ಯದ ತಾರೆಯಾಗಿ ಹೊರಹೊಮ್ಮುತ್ತಿದ್ದಾರೆ. ಇಷ್ಟು ಸಣ್ಣ ವಯಸ್ಸಿನಲ್ಲಿಯೇ ವೈಭವ್ ಸೂರ್ಯವಂಶಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಹಲವು ಅಪರೂಪದ ದಾಖಲೆಗಳನ್ನು ನುಚ್ಚುನೂರು ಮಾಡಿದ್ದಾರೆ. 2025ರ ಐಪಿಎಲ್ ಟೂರ್ನಿಯಲ್ಲಿ ಶತಕ ಸಿಡಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದ ವೈಭವ್, ಇದೀಗ 19ನೇ ಆವೃತ್ತಿಯ ಐಪಿಎಲ್‌ನಲ್ಲಿ ತಮ್ಮ ರೌದ್ರಾವತಾರ ತೋರಿಸಿದ್ದಾರೆ. ಇಷ್ಟು ಸಣ್ಣ ವಯಸ್ಸಿಗೆ ಇಷ್ಟೊಂದು ಟ್ಯಾಲೆಂಟ್ ಇರುವ ಆಟಗಾರ ಸಿಗುವುದು ಅಪರೂಪದಲ್ಲೇ ಅಪರೂಪ ಎಂದು ವೈಭವ್ ಸೂರ್ಯವಂಶಿ ಅವರನ್ನು ಕ್ರಿಕೆಟ್ ಪಂಡಿತರು ಗುಣಗಾನ ಮಾಡುತ್ತಿದ್ದಾರೆ.

ವೈಭವ್ ಸೂರ್ಯವಂಶಿ ಬುಧವಾರ(ಮೇ.27)ದಂದು ನಡೆದ ಐಪಿಎಲ್ ಎಲಿಮಿನೇಟರ್‌ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ಮೈಚಳಿ ಬಿಟ್ಟು ಬ್ಯಾಟ್ ಬೀಸುವ ಮೂಲಕ ಎದುರಾಳಿ ತಂಡ ಬೆಚ್ಚಿಬೀಳುವಂತೆ ಮಾಡಿದರು. ಕೇವಲ 29 ಎಸೆತಗಳನ್ನು ಎದುರಿಸಿದ ವೈಭವ್ 12 ಮುಗಿಲೆತ್ತರದ ಸಿಕ್ಸರ್ ಹಾಗೂ 5 ಆಕರ್ಷಕ ಬೌಂಡರಿ ಸಹಿತ 97 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ 15 ಪಂದ್ಯಗಳನ್ನಾಡಿ 680 ರನ್ ಬಾರಿಸುವ ಮೂಲಕ ಮತ್ತೊಮ್ಮೆ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ.

ಇಂಟ್ರೆಸ್ಟಿಂಗ್ ಆಗಿದೆ ವೈಭವ್ ಸೂರ್ಯವಂಶಿಯ ಐಪಿಎಲ್ ಎಂಟ್ರಿ..!

ಹೌದು, 15 ವರ್ಷದ ವೈಭವ್ ಸೂರ್ಯವಂಶಿ ಸದ್ಯ ಎಲ್ಲರ ಮನೆಮಾತಾಗಿದ್ದಾರೆ. ವಿಶ್ವ ದರ್ಜೆಯ ಬೌಲರ್‌ಗಳ ಎದುರು ಮೈಚಳಿ ಬಿಟ್ಟು ಬ್ಯಾಟ್ ಬೀಸುವ ವೈಭವ್, ಸದ್ಯ ಸಣ್ಣ ಹುಡುಗರಿಂದ ಹಿಡಿದು ವಯೋವೃದ್ದರವರೆಗೂ ಫೇವರೇಟ್ ಆಟಗಾರ ಎನಿಸಿಕೊಂಡಿದ್ದಾರೆ. 2025ರ ಐಪಿಎಲ್ ಟೂರ್ನಿಗೂ ಮುನ್ನ ನಡೆದ ಹರಾಜಿನಲ್ಲಿ ವೈಭವ್ ಸೂರ್ಯವಂಶಿ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಬೇಕಿತ್ತು. ಆದರೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಆಗ 13 ವರ್ಷದ ವೈಭವ್ ಸೂರ್ಯವಂಶಿಗೆ ಕೇವಲ 1.10 ಕೋಟಿ ರುಪಾಯಿ ನೀಡಿ ಖರೀದಿಸಿತ್ತು.

ಆ ಒಂದು ತಪ್ಪಿಗೆ ಈಗಲೂ ಪಶ್ಚಾತಾಪ ಪಡುತ್ತಿದೆ ಡೆಲ್ಲಿ ಕ್ಯಾಪಿಟಲ್ಸ್!

2024ರ ನವೆಂಬರ್ 24 ಮತ್ತು 25ರಂದು ಐಪಿಎಲ್ ಮೆಗಾ ಹರಾಜು ಆಯೋಜನೆಗೊಂಡಿತ್ತು. ಆಗ ವೈಭವ್ ಸೂರ್ಯವಂಶಿ ವಯಸ್ಸು ಕೇವಲ 13 ವರ್ಷ. ಐಪಿಎಲ್‌ನಲ್ಲಿ ಹೆಸರು ನೋಂದಾಯಿಸಿದ ಅತಿಕಿರಿಯ ಆಟಗಾರ ಎನ್ನುವ ಹೆಗ್ಗಳಿಕೆ ವೈಭವ್ ಸೂರ್ಯವಂಶಿ ಅವರದ್ದಾಗಿತ್ತು. ವೈಭವ್ ಸೂರ್ಯವಂಶಿಯ ಮೂಲ ಬೆಲೆ 30 ಲಕ್ಷ ರುಪಾಯಿ ನಿಗದಿ ಪಡಿಸಲಾಗಿತ್ತು. ಆದರೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಬರೋಬ್ಬರಿ 1.10 ಕೋಟಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿತು. ಆಗ ವೈಭವ್ ಸೂರ್ಯವಂಶಿಯನ್ನು ಖರೀದಿಸಲು ಎರಡು ತಂಡಗಳು ಹಟಕ್ಕೆ ಬಿದ್ದಂತೆ ಪೈಪೋಟಿ ನಡೆಸಿದ್ದವು.

ಹರಾಜಿನಲ್ಲಿ ವೈಭವ್ ಸೂರ್ಯವಂಶಿಯ ಹೆಸರು ಬರುತ್ತಿದ್ದಂತೆಯೇ ಆತನನ್ನು ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಪೈಪೋಟಿ ನಡೆಸಿದವು. ವೈಭವ್ ಅವರಿಗೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು 1.10 ಕೋಟಿ ರುಪಾಯಿ ಬಿಡ್ ಮಾಡುತ್ತಿದ್ದಂತೆಯೇ, ಡೆಲ್ಲಿ ಕ್ಯಾಪಿಟಲ್ಸ್ ಮತ್ತೆ ಬಿಡ್ ಮಾಡಲು ಮನಸ್ಸು ಮಾಡಲಿಲ್ಲ. ಇನ್ನೊಂದು ಸ್ವಲ್ಪ ಬಿಡ್ ಮಾಡಿದ್ದರೇ ಬಹುಶಃ ವೈಭವ್ ಡೆಲ್ಲಿ ತಂಡದಲ್ಲಿರುತ್ತಿದ್ದರು. ಆದರೆ ಬಿಡ್ಡಿಂಗ್‌ನಲ್ಲಿ ಮಾಡಿದ ಅದೊಂದು ತಪ್ಪಿಗೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಈಗಲೂ ಪಶ್ಚಾತಾಪ ಪಡುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL 2026 ಕ್ವಾಲಿಫೈಯರ್-2: ಗುಜರಾತ್ ಟೈಟಾನ್ಸ್‌ - ರಾಜಸ್ಥಾನ ರಾಯಲ್ಸ್ ನಡುವಿನ ಮ್ಯಾಚ್ ರದ್ದಾದ್ರೆ ಫೈನಲ್‌ಗೇರೋದು ಯಾರು?
ಮತ್ತೆ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡ ವೈಭವ್ ಸೂರ್ಯವಂಶಿ! ಟಾಪ್-5 ಗರಿಷ್ಠ ರನ್ ಸರದಾರರ ಪಟ್ಟಿಯಿಂದ ವಿರಾಟ್ ಕೊಹ್ಲಿ ಔಟ್!