ತನ್ನ ಕ್ರಿಕೆಟ್ ಬೆಳವಣಿಗೆಗೆ ತನ್ನ ಜೀವವನ್ನೇ ಮುಡಿಪಾಗಿಟ್ಟಿದ್ದ ತಾಯಿಗೆ ಮುರುಗನ್ ಅಶ್ವಿನ್ ಭಾವಸ್ಪರ್ಷಿ ಸಂದೇಶ ರವಾನಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಚೆನ್ನೈ(ಫೆ.02): ಪ್ರಸಕ್ತ ಆವೃತ್ತಿಯ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ತಮಿಳುನಾಡು ತಂಡ ಚಾಂಪಿಯನ್ ಆದ ಬೆನ್ನಲ್ಲೇ ತಂಡದ ಪ್ರಮುಖ ಲೆಗ್ ಸ್ಪಿನ್ನರ್ ಮುರುಗನ್ ಅಶ್ವಿನ್, ಈ ಅವಿಸ್ಮರಣೀಯ ಗೆಲುವನ್ನು ಕೆಲದಿನಗಳ ಹಿಂದಷ್ಟೇ ಕೊನೆಯುಸಿರೆಳೆದ ತಮ್ಮ ತಾಯಿಗೆ ಅರ್ಪಿಸಿದ್ದಾರೆ.
2006/07ನೇ ಸಾಲಿನಲ್ಲಿ ಆರಂಭವಾದ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ತಮಿಳು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ ಇದೀಗ 2021ನೇ ಸಾಲಿನಲ್ಲಿ ಬರೋಡ ವಿರುದ್ದ ತಮಿಳುನಾಡು ತಂಡ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.
undefined
ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ತಮಿಳುನಾಡು ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಮುರುಗನ್ ಅಶ್ವಿನ್ ಪ್ರಮುಖ ಪಾತ್ರವಹಿಸಿದ್ದರು. ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅಶ್ವಿನ್ 8 ಪಂದ್ಯಗಳನ್ನಾಡಿ ಒಟ್ಟು 10 ವಿಕೆಟ್ ಕಬಳಿಸಿ ಮಿಂಚಿದ್ದರು. ಹೀಗಿದ್ದರೂ ಅಶ್ವಿನ್ ಮುಷ್ತಾಕ್ ಅಲಿ ಟೂರ್ನಿಯ ಗೆಲುವನ್ನು ಸಂಭ್ರಮಿಸಲಿಲ್ಲ, ಬದಲಾಗಿ ಕಳೆದ ತಿಂಗಳಷ್ಟೇ ಕೊನೆಯುಸಿರೆಳೆದ ತಮ್ಮ ತಾಯಿಗೆ ಈ ಗೆಲುವನ್ನು ಅರ್ಪಿಸುವ ಮೂಲಕ ಹೃದಯಸ್ಪರ್ಷಿ ಸಂದೇಶ ರವಾನಿಸಿದ್ದಾರೆ.
ಮುಷ್ತಾಕ್ ಅಲಿ ಟಿ20: ಬರೋಡಾ ಮಣಿಸಿ ತಮಿಳುನಾಡು ಚಾಂಪಿಯನ್
ಮುಷ್ತಾಕ್ ಅಲಿ ಟೂರ್ನಿ ಗೆಲುವಿನ ಬಳಿಕ ಇನ್‌ಸ್ಟಾಗ್ರಾಂನಲ್ಲಿ ತಮ್ಮ ತಾಯಿ ಅಕ್ಯೂಟ್ ಮೈಲ್ಯೂಡ್ ಲುಕ್ಯೂಮಿಯಾದಿಂದ ಕೊನೆಯುಸಿರೆಳೆದ ಬಗ್ಗೆ ಹಾಗೂ ಆಕೆಗೆ ಕ್ರಿಕೆಟ್ ಮೇಲೆ ಇದ್ದ ಒಲವಿನ ಬಗ್ಗೆ ಹೃದಯಸ್ಪರ್ಷಿಯಾಗಿ ಲೆಗ್‌ಸ್ಪಿನ್ನರ್ ಅಶ್ವಿನ್ ಬರೆದುಕೊಂಡಿದ್ದಾರೆ. ಕಳೆದ ತಿಂಗಳಷ್ಟೇ ನನ್ನ ತಾಯಿ ಅಕ್ಯೂಟ್ ಮೈಲ್ಯೂಡ್ ಲುಕ್ಯೂಮಿಯಾದಿಂದಾಗಿ ಕೊನೆಯುಸಿರೆಳೆದರು. ಆಕೆಯನ್ನು ಅಕ್ಯೂಟ್ ಮೈಲ್ಯೂಡ್ ಲುಕ್ಯೂಮಿಯಾದಿಂದಾಗಿ ಹೈರಾಣಾಗಿಸಿತ್ತು. ದುರಾದೃಷ್ಟವಶಾತ್ ನಾವು ಆಕೆಯನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ಮುರುಗನ್ ಬರೆದುಕೊಂಡಿದ್ದಾರೆ.
ನಮ್ಮ ತಾಯಿಗೆ ಕ್ರಿಕೆಟ್‌ನಲ್ಲಿ ಸಾಕಷ್ಟು ಆಸಕ್ತಿಯಿತ್ತು. ಹೀಗಾಗಿ ನಾನು ಕ್ರಿಕೆಟ್ ಆಡಲು ಆರಂಭಿಸಿದೆ. ನಾನು ಚಿಕ್ಕವನಿದ್ದಾಗ ಡಜನ್‌ಗಟ್ಟಲೆ ನನಗೆ ಟೆನಿಸ್ ಬಾಲ್, ರಬ್ಬರ್ ಬಾಲ್ ಕೊಂಡು ತಂದು ಕೊಡುತ್ತಿದ್ದಳು. ಹಾಗೂ ನಾನು ಖುಷಿಯಿಂದ ಆಟವಾಡುವಂತೆ ಮಾಡುತ್ತಿದ್ದಳು. ಹೀಗಾಗಿ ನಿಧಾನವಾಗಿ ನನಗೆ ಕ್ರಿಕೆಟ್ ಮೇಲೆ ಆಸಕ್ತಿ ಆರಂಭವಾಯಿತು. ಆಕೆ ತನ್ನ ಅತ್ಯಮೂಲ್ಯ ಸಮಯವನ್ನು ಕ್ರಿಕೆಟ್ ಬೆಳವಣಿಗೆಗಾಗಿಯೇ ಮೀಸಲಿಟ್ಟಿದ್ದಳು. ದಿನ ಬೆಳಗ್ಗೆ ಕ್ರಿಕೆಟ್ ಅಭ್ಯಾಸ ಮಾಡಲು ಕರೆದುಕೊಂಡು ಹೋಗುತ್ತಿದ್ದಳು. ಶಾಲಾ ದಿನಗಳಲ್ಲೇ ನನಗೆ ಕ್ರಿಕೆಟ್ ಕಿಟ್ ಕೊಡಿಸಿದ್ದರು. ಬೆಳಗ್ಗೆ 4 ಗಂಟೆಗೆ ಎದ್ದು ಅಡುಗೆ ಮಾಡಿ 7 ಗಂಟೆಗೆ ಆಫೀಸ್‌ಗೆ ಹೋಗಿ ಸಂಜೆ 7 ಗಂಟೆಗೆ ಮನೆಗೆ ವಾಪಾಸಾಗುತ್ತಿದ್ದರು. ಪ್ರತಿದಿನ ಆಕೆಯದ್ದು ದಣಿವರಿಯದ ಜೀವನವಾಗಿತ್ತು. ಆಕೆಯೇ ನನ್ನ ನಂ.1 ಫ್ಯಾನ್ ಹಾಗೂ ಮೊದಲ ವಿಮರ್ಶಕಿ. ಯಾವಾಗಲೂ ಚೆನ್ನಾಗಿ ಪ್ರದರ್ಶನ ತೋರು ಎನ್ನುತ್ತಿದ್ದಳು ಎಂದು ಅಶ್ವಿನ್ ಬರೆದುಕೊಂಡಿದ್ದಾರೆ.
ತಾಯಿ ಕೊನೆಯುಸಿರೆಳೆದ ಬೆನ್ನಲ್ಲೇ ಮುರುಗನ್ ಅಶ್ವಿನ್ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿ ಆಡಬೇಕೇ ಬೇಡವೇ ಎನ್ನುವ ಗೊಂದಲಕ್ಕೆ ಸಿಲುಕಿದ್ದೆ, ಆದರೆ ತಂದೆ, ಪತ್ನಿ, ಸಹೋದರಿಯರು ಮನವೊಲಿಸಿದರು. ಹೀಗಾಗಿ ತಮಿಳುನಾಡು ತಂಡವನ್ನು ಕೂಡಿಕೊಂಡೆ. ಉತ್ತಮ ಪ್ರದರ್ಶನ ತೋರುವ ಮೂಲಕ ಗೌರವ ಸಲ್ಲಿಸಲು ತೀರ್ಮಾನಿಸಿದೆ ಎಂದು ಮುರುಗನ್ ಬರೆದುಕೊಂಡಿದ್ದಾರೆ. ಕೊನೆಯಲ್ಲಿ ಥ್ಯಾಂಕ್ಯೂ ಅಮ್ಮಾ ಎಂದು ಬರೆಯುವ ಮೂಲಕ ಗೌರವ ವಂದನೆ ಸಲ್ಲಿಸಿದ್ದಾರೆ.