
ಚಂಡೀಘಡ(ಡಿ.09): ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ವಿವಾದಾತ್ಮಕ ಕೃಷಿ ಕಾಯ್ದೆಯ ವಿರುದ್ದ ದೇಶಾದ್ಯಂತ ಪ್ರತಿಭಟನೆಗಳು ಜೋರಾಗಿದೆ. ಇದೀಗ ಟೀಂ ಇಂಡಿಯಾ ಹಾಗೂ ಪಂಜಾಬ್ ರಣಜಿ ತಂಡದ ನಾಯಕ ಮನ್ದೀಪ್ ಸಿಂಗ್ ರೈತರ ಪ್ರತಿಭಟನೆಗೆ ಕೈಜೋಡಿಸಿದ ಮೊದಲ ಸಕ್ರಿಯ ಕ್ರಿಕೆಟಿಗ ಎನಿಸಿದ್ದಾರೆ.
ಮನ್ದೀಪ್ ಸಿಂಗ್ ಹಾಗೂ ಅವರ ಹಿರಿಯ ಸಹೋದರ ಹರ್ವೀಂದರ್ ಸಿಂಗ್ ಜೊತೆಗೂಡಿ ಸಿಂಗೂ ಗಡಿ ಭಾಗಕ್ಕೆ ಭೇಟಿ ನೀಡಿ ರೈತರ ಪ್ರತಿಭಟನೆಗೆ ಸಾಥ್ ನೀಡಿದ್ದಾರೆ. 28 ವರ್ಷದ ಮನ್ದೀಪ್ ಸಿಂಗ್ ಈ ಸಮಸ್ಯೆ ಆದಷ್ಟು ಬೇಗ ಬಗೆಹರಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈ ಕೊರೆಯುವ ಚಳಿಯ ನಡುವೆಯೂ ಹಿರಿಯ ನಾಗರೀಕರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಘಟನೆ ನೋಡಿದರೆ ಹೃದಯ ಕಂಪಿಸುತ್ತದೆ. ಹಲವರ ಪಾಲಿಗೆ ಟ್ರ್ಯಾಕ್ಟರ್‌ಗಳೇ ಮನೆಗಳಾಗಿವೆ. ಆದರೆ ಅವರು ಅದರಲ್ಲೇ ಖುಷಿಯಿಂದ ಉತ್ಸಾಹಭರಿತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಉತ್ಸಾಹಕ್ಕೆ ನನ್ನದೊಂದು ಸಲ್ಯೂಟ್ ಎಂದು ಮನ್ದೀಪ್ ಸಿಂಗ್ ಹೇಳಿದ್ದಾರೆ.
ಇಡೀ ಜಗತ್ತೇ ರೈತರ ಕೆಲಸವನ್ನು ಅವಲಂಭಿಸಿದೆ. ಈ ಗೊಂದಲ ಆದಷ್ಟು ಬೇಗ ಬಗೆಹರಿಯುವುದು ಒಳ್ಳೆಯದ್ದು ಎಂದು ಟೈಮ್ಸ್ ಅಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ರೈತರ ಪ್ರತಿಭಟನೆಗೆ ಕೈ ಜೋಡಿಸಿ ಮೋದಿ ವಿರುದ್ದ ಗುಡುಗಿದ ಯುವಿ ತಂದೆ..!
ಒಂದು ವೇಳೆ ನನ್ನ ತಂದೆ ಜೀವಂತವಾಗಿದ್ದರೆ, ಅವರು ಸಹಾ ಈ ರೈತರ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದರು. ನಾನು ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಕ್ಕೆ ತಮ್ಮ ತಂದೆ ಕೊಂಚವಾದರು ಹೆಮ್ಮೆ ಪಡುತ್ತಾರೆ. ಸರ್ಕಾರ ರೈತರ ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸಲಿ, ಈ ಸಮಸ್ಯೆ ಬಗೆಹರಿಸಲಿ ಎಂದು ಮನ್ದೀಪ್ ಸಿಂಗ್ ಹೇಳಿದ್ದಾರೆ.
13ನೇ ಆವೃತ್ತಿಯ ಐಪಿಎಲ್ ಟೂರ್ನಿ ನಡೆಯುವ ವೇಳೆ ಮನ್ದೀಪ್ ಸಿಂಗ್ ತಂದೆ ಕೊನೆಯಸಿರೆಳೆದಿದ್ದರು. ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಆಟಗಾರನಾಗಿರುವ ಮನ್ದೀಪ್ ಸಿಂಗ್ ತಂದೆಯ ಸಾವಿನ ಸುದ್ದಿ ತಿಳಿದರೂ ಯುಎಇಯಿಂದ ತವರಿಗೆ ವಾಪಾಸಾಗಿರಲಿಲ್ಲ. ಇದಾದ ಬಳಿಕ ಕೋಲ್ಕತ ನೈಟ್ ರೈಡರ್ಸ್ ವಿರುದ್ದ 66 ರನ್ ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.