Ind vs SA: ಧೋನಿ ಹೆಸರಿನಲ್ಲಿರುವ ಅಪರೂಪದ ದಾಖಲೆ ಮುರಿಯಲು ಸಜ್ಜಾದ ರಿಷಭ್ ಪಂತ್..!

By Suvarna NewsFirst Published Dec 23, 2021, 5:49 PM IST
Highlights

* ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟೆಸ್ಟ್ ಸರಣಿ ಆರಂಭಕ್ಕೆ ಕ್ಷಣಗಣನೆ

* ಡಿಸೆಂಬರ್ 26ರಿಂದ ಮೂರು ಪಂದ್ಯಗಳ ಟೆಸ್ಟ್ ಸರಣಿ ಆರಂಭ

* ಎಂ ಎಸ್ ಧೋನಿ ದಾಖಲೆ ಮುರಿಯಲು ಸಜ್ಜಾದ ರಿಷಭ್ ಪಂತ್

ಜೊಹಾನ್ಸ್‌ಬರ್ಗ್(ಡಿ.23): ಟೀಂ ಇಂಡಿಯಾ (Team India) ವಿಕೆಟ್ ಕೀಪರ್ ಬ್ಯಾಟರ್‌, ರಿಷಭ್‌ ಪಂತ್ (Rishabh Pant) ಸಾಕಷ್ಟು ಬಿಡುವಿನ ಬಳಿಕ ತಂಡ ಕೂಡಿಕೊಂಡಿದ್ದು, ಇದೀಗ ದಕ್ಷಿಣ ಆಫ್ರಿಕಾ ವಿರುದ್ದದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಮಹೇಂದ್ರ ಸಿಂಗ್ ಧೋನಿ (MS Dhoni) ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿಯಲು ತುದಿಗಾಲಿನಲ್ಲಿ ನಿಂತಿದ್ದಾರೆ. ಡಿಸೆಂಬರ್ 26ರಿಂದ ದಕ್ಷಿಣ ಆಫ್ರಿಕಾ ಸೆಂಚುರಿಯನ್‌ ಸೂಪರ್‌ಸ್ಪೋರ್ಟ್ ಪಾರ್ಕ್‌ ಮೈದಾನದಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲೇ ಧೋನಿ ಹೆಸರಿನಲ್ಲಿರುವ ದಾಖಲೆ ಅಳಿಸಿ ಹಾಕಲು ಪಂತ್ ಎದುರು ನೋಡುತ್ತಿದ್ದಾರೆ.

ಹೌದು, ರಿಷಭ್ ಪಂತ್ ಭಾರತ ಪರ ಇದುವರೆಗೂ 25 ಟೆಸ್ಟ್ ಪಂದ್ಯಗಳನ್ನಾಡಿ 97 ಬಲಿ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ದದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರಿಷಭ್ ಪಂತ್ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿರುವುದರಿಂದ, ಅತಿವೇಗವಾಗಿ ಟೆಸ್ಟ್‌ ಕ್ರಿಕೆಟ್‌ನಲ್ಲಿ 100 ಬಲಿ ಪಡೆದ ಭಾರತದ ಮೊದಲ ವಿಕೆಟ್ ಕೀಪರ್ ಎನಿಸಿಕೊಳ್ಳಲಿದ್ದಾರೆ. ಇದರ ಜತೆಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 100 ಬಲಿ ಪಡೆದ ಭಾರತದ ಆರನೇ ವಿಕೆಟ್‌ ಕೀಪರ್ ಎನ್ನುವ ಕೀರ್ತಿಗೂ ಪಂತ್ ಭಾಜನರಾಗಲಿದ್ದಾರೆ.

ಇಲ್ಲಿಯವರೆಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 100 ಬಲಿ ಪಡೆದ ಭಾರತದ ವಿಕೆಟ್ ಕೀಪರ್ ಎನ್ನುವ ದಾಖಲೆ ದಿಗ್ಗಜ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ ಹೆಸರಿನಲ್ಲಿತ್ತು. ಮಹೇಂದ್ರ ಸಿಂಗ್ ಧೋನಿ ಕೇವಲ 36 ಟೆಸ್ಟ್ ಪಂದ್ಯಗಳನ್ನಾಡಿ 100 ಬಲಿ ಪಡೆದಿದ್ದರು. ಇದಾದ ಬಳಿಕ ವೃದ್ದಿಮಾನ್ ಸಾಹ (Wriddhiman Saha) 37 ಪಂದ್ಯಗಳನ್ನಾಡಿ 100 ಬಾರಿ ಎದುರಾಳಿ ಬ್ಯಾಟರ್‌ಗಳನ್ನು ಪೆವಿಲಿಯನ್ನಿಗಟ್ಟಿದ್ದರು. ಆದರೆ ಇದೀಗ ಪಂತ್ ಕೇವಲ 26ನೇ ಟೆಸ್ಟ್ ಪಂದ್ಯದಲ್ಲೇ ನೂರು ಬಲಿ ಪಡೆಯುವ ಸಾಧ್ಯತೆ ದಟ್ಟವಾಗಿದೆ.

Ind vs SA Test Series: ಕೊಹ್ಲಿ-ರಹಾನೆವರೆಗೆ 5 ದಾಖಲೆ ಬರೆಯಲು ಸಜ್ಜಾಗಿದ್ದಾರೆ ಈ ಕ್ರಿಕೆಟಿಗರು..!

ಈ ಮೊದಲು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ಕಿರಣ್ ಮೋರೆ (Kiran More), ನಯನ್ ಮೋಂಗಿಯಾ (Nayan Mongia) ಹಾಗೂ ಸಯ್ಯದ್ ಕಿರ್ಮಾನಿ (Syed Kirmani) ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಕೆಟ್ ಕೀಪರ್‌ ಆಗಿ 100+ ಬಲಿ ಪಡೆದಿದ್ದಾರೆ. ಕಿರಣ್ ಮೋರೆ 39 ಪಂದ್ಯಗಳಲ್ಲಿ ಈ ಸಾಧನೆ ಮಾಡಿದರೆ, ಮೋಂಗಿಯಾ 41 ಹಾಗೂ ಕಿರ್ಮಾನಿ 42ನೇ ಟೆಸ್ಟ್ ಪಂದ್ಯದಲ್ಲಿ 100 ಬಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇತ್ತೀಚೆಗಷ್ಟೇ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ದ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ರಿಷಭ್ ಪಂತ್ ವಿಶ್ರಾಂತಿ ಪಡೆದಿದ್ದರು. ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ವೃದ್ದಿಮಾನ್ ಸಾಹ, ಟೀಂ ಇಂಡಿಯಾ ವಿಕೆಟ್ ಕೀಪರ್ ಆಗಿ ಕಾಣಿಸಿಕೊಂಡಿದ್ದರು. 

ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಡಿಸೆಂಬರ್ 26ರಿಂದ ಆರಂಭವಾದರೆ, ಎರಡನೇ ಟೆಸ್ಟ್ ಪಂದ್ಯವು ಜನವರಿ 03ರಿಂದ ಜೊಹಾನ್ಸ್‌ಬರ್ಗ್‌ನ ವಾಂಡರರ್ಸ್‌ ಸ್ಟೇಡಿಯಂನಲ್ಲಿ ನಡೆಯಲಿದೆ. ಇನ್ನು ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವು ಜನವರಿ 11ರಿಂದ ಕೇಪ್‌ಟೌನ್‌ನಲ್ಲಿ ಆರಂಭವಾಗಲಿದೆ. ಇದಾದ ಬಳಿಕ ಜನವರಿ 19ರಿಂದ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಎದುರು ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ನಾಯಕನಾಗಿ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.
 

click me!