ಲಂಡನ್(ಆ.13): ಲಾರ್ಡ್ಸ್ ಟೆಸ್ಟ್ ಪಂದ್ಯದ 2ನೇ ದಿನವೂ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. 2ನೇ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರಿಸಿದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 364 ರನ್ ಸಿಡಿಸಿತು. ಬಳಿಕ ಬೌಲಿಂಗ್‌ನಲ್ಲೂ ಅಬ್ಬರಿಸಿತು. ಆಂಗ್ಲರ 3 ವಿಕೆಟ್ ಉರುಳಿಸಿ ದ್ವಿತೀಯ ದಿನದಾಟದ ಗೌರವಕ್ಕೆ ಪಾತ್ರವಾಯಿತು.
2ನೇ ದಿನದಾಟದಲ್ಲಿ ಟೀಂ ಇಂಡಿಯಾ ಮಧ್ಯಮ ಕ್ರಮಾಂದಿಂದ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ಮೂಡಿಬರಲಿಲ್ಲ. ನಾಯಕ ವಿರಾಟ್ ಕೊಹ್ಲಿ 42 ರನ್ ಸಿಡಿಸಿ ಔಟಾದರು. ಅಂತಿಮ ಹಂತದಲ್ಲಿ ರವೀಂದ್ರ ಜಡೇಜಾ 40 ರನ್ ಸಿಡಿಸಿದರು. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 364 ರನ್‌ಗೆ ಆಲೌಟ್ ಆಯಿತು.
ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆಯಿತು. ಆದರೆ ಡೋಮಿನಿಕ್ ಸಿಬ್ಲೆ 11 ರನ್ ಸಿಡಿಸಿ ಔಟಾದರು. ಮೊಹಮ್ಮದ್ ಸಿರಾಜ್, ಇಂಗ್ಲೆಂಡ್‌ಗೆ ಮೊದಲ ಆಘಾತ ನೀಡಿದರು. ಮರು ಎಸೆತದಲ್ಲಿ ಹಸೀಬ್ ಹಮೀದ್ ವಿಕೆಟ್ ಕಬಳಿಸಿದ ಸಿರಾಜ್ ಟೀಂ ಇಂಡಿಯಾಗೆ ಭರ್ಜರಿ ಮೇಲುಗೈ ತಂದುಕೊಟ್ಟರು.
ರೋರಿ ಬರ್ನ್ಸ್ ಹಾಗೂ ನಾಯಕ ಜೋ ರೂಟ್ ಜೊತೆಯಾಟದಿಂದ ಇಂಗ್ಲೆಂಡ್ ಚೇತರಿಸಿಕೊಂಡಿತು. ಅಪಾಯದ ಸೂಚನೆ ನೀಡಿದ ಬರ್ನ್ಸ್‌ಗೆ ಸಿರಾಜ್ ಆಘಾತ ನೀಡಿದರು. 49 ರನ್ ಸಿಡಿಸಿ ಬರ್ನ್ಸ್ ಪೆವಿಲಿಯನ್ ಸೇರಿಕೊಂಡರು. ಈ ಮೂಲಕ ಕೇವಲ 1 ರನ್‌ಗಳಿಂದ ಅರ್ಧಶತಕ ವಂಚಿತರಾದರು.
ಜೋ ರೂಟ್ಸ್ ಅಜೇಯ 48 ರನ್ ಹಾಗೂ ಜಾನಿ ಬೈರ್‌ಸ್ಟೋ ಅಜೇಯ 6 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 245 ರನ್ ಹಿನ್ನಡೆಯಲ್ಲಿದೆ. ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಟೀಂ ಇಂಡಿಯಾಗೆ ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲೂ ಪ್ರಾಬಲ್ಯ ಸಾಧಿಸಲು ನೆರವಾದರು. ಈ ಮೂಲಕ 2ನೇ ದಿನದಾಟದಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸೋ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.