T20 World Cup: ವಿರಾಟ್, ರಾಹುಲ್ ಆರ್ಭಟ, ಬಾಂಗ್ಲಾ ಪಾಳಯದಲ್ಲಿ ಸಂಕಟ..!

By Naveen Kodase  |  First Published Nov 2, 2022, 3:16 PM IST

ಬಾಂಗ್ಲಾದೇಶ ಎದುರು ಸ್ಪೋಟಕ ಬ್ಯಾಟಿಂಗ್ ನಡೆಸಿದ ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ 
ಅಜೇಯ 64 ರನ್ ಸಿಡಿಸಿ ಸಂಭ್ರಮಿಸಿದ ಟೀಂ ಇಂಡಿಯಾ ಮಾಜಿ ನಾಯಕ 
ಬಾಂಗ್ಲಾದೇಶಕ್ಕೆ ಗೆಲ್ಲಲು ಬರೋಬ್ಬರಿ 185 ಗುರಿ


ಅಡಿಲೇಡ್‌(ನ.02): ಆರಂಭಿಕ ಬ್ಯಾಟರ್ ಕೆ.ಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಬಾರಿಸಿದ ಸ್ಪೋಟಕ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 184 ರನ್ ಬಾರಿಸಿದ್ದು, ಬಾಂಗ್ಲಾದೇಶ ತಂಡಕ್ಕೆ ಕಠಿಣ ಗುರಿ ನೀಡಿದೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮೀಸ್ ಪ್ರವೇಶಿಸುವ ನಿಟ್ಟಿನಲ್ಲಿ ಭಾರತದ ಪಾಲಿಗೆ ಮಹತ್ವದ ಪಂದ್ಯ ಎನಿಸಿಕೊಂಡಿರುವ ಈ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ತನ್ನ ಪ್ರಾಬಲ್ಯವನ್ನು ಅನಾವರಣ ಮಾಡಿದೆ.

ಇಲ್ಲಿನ ಅಡಿಲೇಡ್ ಓವಲ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ, ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಮೂರನೇ ಓವರ್‌ನಲ್ಲಿ ಸಿಕ್ಕಿದ ಜೀವದಾನವನ್ನು ಸದುಪಯೋಗಪಡಿಸಿಕೊಳ್ಳಲು ರೋಹಿತ್ ಶರ್ಮಾ ವಿಫಲವಾದರು. ರೋಹಿತ್ ಶರ್ಮಾ 8 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಬಾರಿಸಿ ಹಸನ್ ಮಹಮೂದ್‌ಗೆ ವಿಕೆಟ್‌ ಒಪ್ಪಿಸಿದರು.

India finish strongly to set Bangladesh a target of 185 🔥

Who is winning? | | 📝: https://t.co/HSr0Div7W0 pic.twitter.com/5LVYY7bokA

— T20 World Cup (@T20WorldCup)

Latest Videos

ಫಾರ್ಮ್‌ಗೆ ಮರಳಿದ ಕೆ ಎಲ್ ರಾಹುಲ್: ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಮೂರು ಪಂದ್ಯಗಳಲ್ಲಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್, ಬಾಂಗ್ಲಾದೇಶ ಎದುರಿನ ಪಂದ್ಯದ ವೇಳೆ ಮೈಚಳಿ ಬಿಟ್ಟು ಬ್ಯಾಟ್ ಬೀಸುವ ಮೂಲಕ ರನ್ ಮಳೆ ಹರಿಸಿದರು. ಆರಂಭದಿಂದಲೇ ಆಕ್ರಮಣಕಾರಿಯಾಟ ನಡೆಸಿದ ರಾಹುಲ್, ಕೇವಲ 32 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 50 ರನ್ ಬಾರಿಸುವುದರೊಂದಿಗೆ ಟೀಂ ಮ್ಯಾನೇಜ್‌ಮೆಂಟ್ ನಂಬಿಕೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ವಿರಾಟ್ ಕೊಹ್ಲಿ ಜತೆಗೂಡಿ ರಾಹುಲ್ ಎರಡನೇ ವಿಕೆಟ್‌ಗೆ 67 ರನ್‌ಗಳ ಜತೆಯಾಟ ನಿಭಾಯಿಸಿದರು.

T20 World Cup ಇತಿಹಾಸದಲ್ಲಿ ವಿಶ್ವದಾಖಲೆ ನಿರ್ಮಿಸಿದ ಕಿಂಗ್ ಕೊಹ್ಲಿ..!

undefined

ಅಡಿಲೇಡ್‌ನಲ್ಲಿ ಅಬ್ಬರಿಸಿದ ವಿರಾಟ್ ಕೊಹ್ಲಿ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ವಿರಾಟ್ ಕೊಹ್ಲಿ, ಅಡಿಲೇಡ್‌ನಲ್ಲಿ ಮತ್ತೊಮ್ಮೆ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ವಿರಾಟ್ ಕೊಹ್ಲಿ 16 ರನ್ ಬಾರಿಸುತ್ತಿದ್ದಂತೆಯೇ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ ಆಗಿ ಹೊರಹೊಮ್ಮಿದರು. ಈ ಮೊದಲು ಶ್ರೀಲಂಕಾದ ಮಾಜಿ ನಾಯಕ ಮಹೆಲಾ ಜಯವರ್ಧನೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ 1,016 ರನ್ ಬಾರಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದರು. ಆದರೆ ಇದೀಗ ಜಯವರ್ಧನೆ ದಾಖಲೆ ಹಿಂದಿಕ್ಕುವಲ್ಲಿ ಯಶಸ್ವಿಯಾದರು. ವಿರಾಟ್ ಕೊಹ್ಲಿ 37 ಎಸೆತಗಳನ್ನು ಎದುರಿಸಿ 50 ರನ್ ಪೂರೈಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ವಿರಾಟ್ ಕೊಹ್ಲಿ 44 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 64 ರನ್ ಬಾರಿಸಿ ಮಿಂಚಿದರು. ಸದ್ಯ ವಿರಾಟ್ ಕೊಹ್ಲಿ, ಟಿ20 ವಿಶ್ವಕಪ್ ಟೂರ್ನಿಯಲ್ಲಿ 1,065 ರನ್ ಬಾರಿಸಿದ್ದಾರೆ.

ಸಿಡಿದ ಸೂರ್ಯಕುಮಾರ್ ಯಾದವ್: ಕಳೆದೆರಡು ಪಂದ್ಯಗಳಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ್ದ ಸೂರ್ಯಕುಮಾರ್ ಯಾದವ್, ಬಾಂಗ್ಲಾದೇಶ ವಿರುದ್ದವೂ ವಿಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಮಿಂಚಿದರು. ಸೂರ್ಯಕುಮಾರ್ ಯಾದವ್ ಕೇವಲ 16 ಎಸೆತಗಳಲ್ಲಿ 4 ಬೌಂಡರಿ ಸಹಿತ 30 ರನ್ ಬಾರಿಸಿ ಶಕೀಬ್ ಅಲ್ ಹಸನ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.  

ಕೈಕೊಟ್ಟ ಪಾಂಡ್ಯ-ಡಿಕೆ, ಪಟೇಲ್‌: ಟೀಂ ಇಂಡಿಯಾ ಪರ ಅಗ್ರ ಕ್ರಮಾಂಕದಲ್ಲಿ ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಆಸರೆಯಾದರಾದರೂ, ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ ಹಾಗೂ ಅಕ್ಷರ್ ಪಟೇಲ್ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ಪಾಂಡ್ಯ 6 ಎಸೆತಗಳಲ್ಲಿ 5 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ದಿನೇಶ್ ಕಾರ್ತಿಕ್(7) ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು. ಇನ್ನು ಅಕ್ಷರ್ ಪಟೇಲ್ ಕೂಡಾ ಕೇವಲ 7 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಕೊನೆಯಲ್ಲಿ ರವಿಚಂದ್ರನ್ ಅಶ್ವಿನ್ 6 ಎಸೆತಗಳಲ್ಲಿ ಅಜೇಯ 13 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 180ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು

ಸಂಕ್ಷಿಪ್ತ ಸ್ಕೋರ್

ಭಾರತ: 184/6

ವಿರಾಟ್ ಕೊಹ್ಲಿ: 64
ಕೆ ಎಲ್ ರಾಹುಲ್: 50

ಹಸನ್ ಮಹಮೂದ್: 47/3

(* ಭಾರತದ ಬ್ಯಾಟಿಂಗ್ ಮುಕ್ತಾಯದ ವೇಳೆಗೆ)
 

click me!