
ಕಿಂಗ್ಸ್‌ಟೌನ್: ರೆಹಮನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್ ಆಕರ್ಷಕ ಅರ್ಧಶತಕ ಹಾಗೂ ಗುಲ್ಬದ್ದೀನ್ ನೈಬ್ ಮಾರಕ ದಾಳಿಯ ನೆರವಿನಿಂದ ಬಲಾಢ್ಯ ಆಸ್ಟ್ರೇಲಿಯಾ ತಂಡದ ಎದುರು ಆಫ್ಘಾನಿಸ್ತಾನ ತಂಡವು 21 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಮೊದಲ ಸೋಲು ಅನುಭವಿಸಿದ ಆಸ್ಟ್ರೇಲಿಯಾ ತಂಡವು ಸೆಮೀಸ್ ಹಾದಿಯನ್ನು ಮತ್ತಷ್ಟು ಕಠಿಣವಾಗಿಸಿಕೊಂಡಿದೆ. ಇನ್ನೊಂದೆಡೆ ರಶೀದ್ ಖಾನ್ ನೇತೃತ್ವದ ಆಫ್ಘಾನಿಸ್ತಾನ ತಂಡದ ಸೆಮೀಸ್ ಕನಸು ಜೀವಂತವಾಗುಳಿದಿದೆ.
ಗೆಲ್ಲಲು 149 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು 16 ರನ್ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದರು. ಇನ್ನು ಪವರ್ ಪ್ಲೇನೊಳಗಾಗಿ ಮಿಚೆಲ್ ಮಾರ್ಷ್(11) ಕೂಡಾ ಪೆವಿಲಿಯನ್ ಹಾದಿ ಹಿಡಿದರು. ಅಸೀಸ್ 32 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಟಿ20 ವಿಶ್ವಕಪ್: ಬಾಂಗ್ಲಾ ಹುಲಿಗಳ ಬೇಟೆಯಾಡಿ ಗೆದ್ದ ಭಾರತ
ಇನ್ನು ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಮಾರ್ಕಸ್ ಸ್ಟೋನಿಸ್ ಕೊಂಚ ಆಸರೆಯಾಗುವ ಯತ್ನ ನಡೆಸಿದರು. ಸ್ಟೋನಿಸ್ 11 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದ ಗ್ಲೆನ್ ಮ್ಯಾಕ್ಸ್‌ವೆಲ್ ಆಕರ್ಷಕ ಅರ್ಧಶತಕ ಸಿಡಿಸಿ ಕಾಂಗರೂ ಪಡೆಯಲ್ಲಿ ಗೆಲುವಿನ ಆಸೆ ಮೂಡಿಸಿದ್ದರು. ಆದರೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ಸಿಗಲಿಲ್ಲ. ಮ್ಯಾಕ್ಸ್‌ವೆಲ್ 41 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 59 ರನ್ ಗಳಿಸಿ ಗುಲ್ಬದ್ದೀನ್ ನೈಬ್‌ಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ ತಂಡವು 19.2 ಓವರ್‌ಗಳಲ್ಲಿ 127 ರನ್ ಗಳಿಸಿ ಸರ್ವಪತನ ಕಂಡಿತು.
ಆಫ್ಘಾನಿಸ್ತಾನ ತಂಡದ ಪರ ಗುಲ್ಬದ್ದೀನ್ ನೈಬ್ 20 ರನ್ ನೀಡಿ 4 ವಿಕೆಟ್ ಪಡೆದರೆ, ನವೀನ್ ಉಲ್ ಹಕ್ 3, ಓಮರ್‌ಝೈ, ರಶೀದ್ ಖಾನ್ ಹಾಗೂ ಮೊಹಮದ್ ನಬಿ ತಲಾ ಒಂದೊಂದು ವಿಕೆಟ್ ಪಡೆದರು
ಆಸೀಸ್ ಗೆಲುವಿನ ನಾಗಾಲೋಟಕ್ಕೆ ಬಿತ್ತು ಬ್ರೇಕ್: ಈ ಟೂರ್ನಿಯಲ್ಲಿ ಸತತ ಗೆಲುವಿನ ನಾಗಾಲೋಟ ಮುಂದುವರೆಸಿದ್ದ ಆಸ್ಟ್ರೇಲಿಯಾ ತಂಡವು ಕೊನೆಗೂ ಸೋಲಿನ ಕಹಿಯುಂಡಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಸತತ 8 ಗೆಲುವು ದಾಖಲಿಸಿ ಮುನ್ನುಗ್ಗುತ್ತಿದ್ದ ಆಸ್ಟ್ರೇಲಿಯಾಗೆ ಆಫ್ಘಾನಿಸ್ತಾನ ಸೋಲಿನ ಶಾಕ್ ನೀಡಿದೆ. ಇದಷ್ಟೇ ಅಲ್ಲದೇ ಕಳೆದ 6 ಅಂತಾರಾಷ್ಟ್ರೀಯ ಮುಖಾಮುಖಿಯಲ್ಲಿ ಆಸೀಸ್ ಎದುರು ಆಫ್ಘಾನ್ ಗೆಲುವಿನ ನಗೆ ಬೀರಿದೆ.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನ ತಂಡವು ಮೊದಲ ವಿಕೆಟ್‌ಗೆ ರೆಹಮನುಲ್ಲಾ ಗುರ್ಬಾಜ್ ಹಾಗೂ ಇಬ್ರಾಹಿಂ ಜದ್ರಾನ್ ಜೋಡಿ 118 ರನ್‌ಗಳ ಜತೆಯಾಟವಾಡಿದರು. ಗುರ್ಬಾಜ್ 60 ರನ್ ಸಿಡಿಸಿದರೆ, ಜದ್ರಾನ್ 51 ರನ್ ಸಿಡಿಸಿದರು. ಇದಾದ ಬಳಿಕ ನಿರಂತವಾಗಿ ವಿಕೆಟ್ ಕಳೆದುಕೊಂಡ ಆಫ್ಘಾನಿಸ್ತಾನ ತಂಡವು 6 ವಿಕೆಟ್ ಕಳೆದುಕೊಂಡು 148 ರನ್ ಕಲೆಹಾಕಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.