
ಕಟಕ್[ಫೆ.28]: ವಿನಯ್ ಕುಮಾರ್, ಅಭಿಮನ್ಯು ಮಿಥುನ್ ತಮ್ಮ ಆಕರ್ಷಕ ಬೌಲಿಂಗ್ ಪ್ರದರ್ಶನದಿಂದ ಕರ್ನಾಟಕಕ್ಕೆ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಆದರೆ ಈ ಇಬ್ಬರು ಬುಧವಾರ ತಮ್ಮ ಬ್ಯಾಟಿಂಗ್ ಪರಾಕ್ರಮದಿಂದ ರಾಜ್ಯಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ‘ಡಿ’ ಗುಂಪಿನ ಪಂದ್ಯದಲ್ಲಿ ಛತ್ತೀಸ್‌ಗಢ ವಿರುದ್ಧ ಕರ್ನಾಟಕ 4 ವಿಕೆಟ್ ಗಳ ರೋಚಕ ಗೆಲುವು ಸಾಧಿಸಿ, ಸತತ 5 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಸೂಪರ್ ಲೀಗ್‌ಗೆ ರಾಜ್ಯ ತಂಡದ ಪ್ರವೇಶ ಬಹುತೇಕ ಖಚಿತವಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಛತ್ತೀಸ್ ಗಢ 20 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 171 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಸವಾಲಿನ ಗುರಿ ಬೆನ್ನತ್ತಿದ ಕರ್ನಾಟಕ ಕರುಣ್ ನಾಯರ್ (35) ಹೋರಾಟದ ಹೊರತಾಗಿಯೂ 15 ಓವರ್‌ಗಳಲ್ಲಿ 109 ರನ್‌ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಕೊನೆ 30 ಎಸೆತಗಳಲ್ಲಿ ತಂಡದ ಗೆಲುವಿಗೆ 63 ರನ್ ಬೇಕಿತ್ತು. 24 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್‌ನೊಂದಿಗೆ ಜೆ.ಸುಚಿತ್ 34 ರನ್ ಸಿಡಿಸಿ ಔಟಾದರು. 6ನೇ ವಿಕೆಟ್ ಪತನಗೊಂಡಾಗ ತಂಡದ ಮೊತ್ತ 122 ರನ್
ಕೊನೆ 21 ಎಸೆತಗಳಲ್ಲಿ ತಂಡಕ್ಕೆ 50 ರನ್‌ಗಳ ಅಗತ್ಯವಿತ್ತು. 13 ಎಸೆತಗಳಲ್ಲಿ 4 ಸಿಕ್ಸರ್‌ಗಳೊಂದಿಗೆ ವಿನಯ್ 34 ರನ್ ಗಳಿಸಿ ಅಜೇಯರಾಗಿ ಉಳಿದರು. ಮಿಥುನ್ 7 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್‌ನೊಂದಿಗೆ 18 ರನ್ ಸಿಡಿಸಿದರು. ಇನ್ನೂ 4 ಎಸೆತ ಬಾಕಿ ಇರುವಂತೆಯೇ ಕರ್ನಾಟಕ ಜಯದ ನಗೆ ಬೀರಿತು
ಛತ್ತೀಸ್‌ಗಢ ನಾಯಕ ಹರ್ಪ್ರೀತ್ ಸಿಂಗ್ ಭಾಟಿಯಾ (79), ಅಮನ್‌ದೀಪ್ ಖಾರೆ (45), ರಿಷಭ್ ತಿವಾರಿ(33) ರನ್ ನೆರವಿನಿಂದ ಉತ್ತಮ ಮೊತ್ತ ಕಲೆಹಾಕಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.