ಆರ್‌ಸಿಬಿ ತಂಡ ಬೆಂಗಳೂರಿನಲ್ಲಿ 11 ವರ್ಷಗಳ ಹಿಂದೆ ಪುಣೆ ವಾರಿಯರ್ಸ್ ತಂಡದ ವಿರುದ್ಧ ಭಾರಿಸಿದ್ದ 263 ರನ್‌ಗಳ ಐಪಿಎಲ್ ದಾಖಲೆಯನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ ಬುಧವಾರ ಮುರಿದಿದೆ.
ಹೈದರಾಬಾದ್ (ಮಾ.27): ಐಪಿಎಲ್‌ನಲ್ಲಿ 11 ವರ್ಷಗಳ ಹಿಂದೆ ಆರ್‌ಸಿಬಿ ನಿರ್ಮಿಸಿದ್ದ ಗರಿಷ್ಠ ಮೊತ್ತದ ದಾಖಲೆಯನ್ನು ಮುರಿಯುವಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಯಶಸ್ವಿಯಾಗಿದೆ. ಬುಧವಾರ ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್‌ಅನ್ನು ಚೆಂಡಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಆರ್‌ಸಿಬಿಯ ಅಪರೂಪದ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿದೆ. ಆರ್‌ಸಿಬಿ ತಂಡ 2013ರ ಏಪ್ರಿಲ್ 23 ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪುಣೆ ವಾರಿಯರ್ಸ್ ತಂಡದ ವಿರುದ್ಧ 5 ವಿಕೆಟ್‌ಗೆ 263 ರನ್ ಬಾರಿಸಿದ್ದು ಈವರೆಗಿನ ಐಪಿಎಲ್ ದಾಖಲೆಯಾಗಿತ್ತು. ಇದೇ ಪಂದ್ಯದಲ್ಲಿ ಕ್ರಿಸ್ ಗೇಲ್, ಐಪಿಎಲ್ ದಾಖಲೆಯ 175 ರನ್ ಸಿಡಿಸಿದ್ದರು. ಈಗ ಈ ದಾಖಲೆ ಸನ್‌ರೈಸರ್ಸ್ ಪಾಲಾಗಿದೆ. ಮುಂಬೈ ಇಂಡಿಯನ್ಸ್ ಬೌಲಿಂಗ್ ವಿಭಾಗವನ್ನು ಮನಬಂದಂತೆ ದಂಡಿಸಿದ ಸನ್‌ರೈಸರ್ಸ್ ಹೈದರಾಬಾದ್ ತಂಡ 3 ವಿಕೆಟ್‌ಗೆ 277 ರನ್ ಪೇರಿಸಿತು. ಇದು ಐಪಿಎಲ್‌ನಲ್ಲಿ ತಂಡವೊಂದರ ಗರಿಷ್ಠ ಮೊತ್ತ ಮಾತ್ರವಲ್ಲ, ವಿಶ್ವ ಟಿ20ಯಲ್ಲಿ ಮೂರನೇ ಗರಿಷ್ಠ ಮೊತ್ತ ಎನಿಸಿದೆ.
2023ರ ಸೆಪ್ಟೆಂಬರ್‌ನಲ್ಲಿ ನೇಪಾಳ ತಂಡ ಮಂಗೋಲಿಯಾದ ವಿರುದ್ಧ 3 ವಿಕೆಟ್‌ಗೆ 314 ರನ್ ಪೇರಿಸಿರುವುದು ಟಿ20ಯ ವಿಶ್ವದಾಖಲೆಯ ಮೊತ್ತವಾಗಿದೆ. 2019ರಲ್ಲಿ ಅಫ್ಘಾನಿಸ್ತಾನ ತಂಡ ಐರ್ಲೆಂಡ್ ವಿರುದ್ಧ 3 ವಿಕೆಟ್‌ಗೆ 278 ರನ್ ಪೇರಿಸಿದ್ದು ಹಾಗೂ ಅದೇ ವರ್ಷ ಜೆಕ್ ಗಣರಾಜ್ ತಂಡ ಟರ್ಕಿ ವಿರುದ್ಧ 4 ವಿಕೆಟ್‌ಗೆ 278 ರನ್ ಪೇರಿಸಿರುವುದು ಜಂಟಿ 2ನೇ ಸ್ಥಾನದಲ್ಲಿದೆ. ಅದಲ್ಲದೆ, ಇದು ಭಾರತದಲ್ಲಿ ನಡೆದ ಟಿ20 ಪಂದ್ಯದಲ್ಲೂ ತಂಡವೊಂದರ ಗರಿಷ್ಠ ಮೊತ್ತ ಎನಿಸಿದೆ. 2023ರಲ್ಲಿ ಪಂಜಾಬ್ ತಂಡ ಆಂಧ್ರ ಪ್ರದೇಶ ವಿರುದ್ಧ ರಾಂಚಿಯಲ್ಲಿ 6 ವಿಕೆಟ್ಗೆ 275 ರನ್ ಪೇರಿಸಿದ್ದು ಹಿಂದಿನ ದಾಖಲೆಯಾಗಿತ್ತು. ಇದನ್ನೂ ಕೂಡ ಸನ್‌ರೈಸರ್ಸ್ ತಂಡ ಮುರಿದಿದೆ.
ಸನ್‌ರೈಸರ್ಸ್ ತಂಡ ಇಷ್ಟು ದೊಡ್ಡ ಮೊತ್ತ ಪೇರಿಸಿದರೂ ಯಾವೊಬ್ಬ ಬ್ಯಾಟ್ಸ್‌ಮನ್ ಕೂಡ ಶತಕ ಬಾರಿಸಿಲ್ಲ ಎನ್ನುವುದು ವಿಶೇಷವಾಗಿದೆ. ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ 13 ಎಸೆತಗಳಲ್ಲಿ 11 ರನ್ ಪೇರಿಸಿದ್ದು, ಬಿಟ್ಟರೆ ಉಳಿದ ಎಲ್ಲಾ ಆಟಗಾರರು 150 ಹಾಗೂ ಅದಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದರು. ಟ್ರಾವಿಸ್ ಹೆಡ್ ಕೇವಲ 24 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ ಇದ್ದ 62 ರನ್ ಬಾರಿಸಿದರೆ, ಅಭಿಷೇಕ್ ಶರ್ಮ 23 ಎಸೆತಗಳಲ್ಲಿ 7 ಸಿಕ್ಸರ್, 3 ಬೌಂಡರಿಗಳಿದ್ದ 63 ರನ್ ಸಿಡಿಸಿದ್ದರು. ಕೊನೆಗೆ ನಾಲ್ಕನೇ ವಿಕೆಟ್‌ಗೆ ಮಿಂಚಿನ ಆಟವಾಡಿದ ಏಡೆನ್ ಮಾರ್ಕ್ರಮ್ (42 ರನ್, 28 ಎಸೆತ, 2 ಬೌಂಡರಿ,1 ಸಿಕ್ಸರ್) ಹಾಗೂ ಹೆನ್ರಿಚ್ ಕ್ಲಾಸೆನ್ (80 ರನ್, 34 ಎಸೆತ, 4 ಬೌಂಡರಿ, 7 ಸಿಕ್ಸರ್) ಕೇವಲ 55 ಎಸೆತಗಳಲ್ಲಿ 116 ರನ್ ಸಿಡಿಸುವ ಮೂಲಕ ತಂಡದ ದಾಖಲೆಯ ಮೊತ್ತಕ್ಕೆ ಕಾರಣರಾದರು.