Latest Videos

ದಕ್ಷಿಣ ಆಫ್ರಿಕಾ ವನಿತೆಯರ ವಿರುದ್ಧ ಭಾರತ ಸರಣಿ ಕ್ಲೀನ್‌ಸ್ವೀಪ್‌..! ಹೊಸ ದಾಖಲೆ ಬರೆದ ಸ್ಮೃತಿ ಮಂಧನಾ

By Naveen KodaseFirst Published Jun 24, 2024, 10:22 AM IST
Highlights

ಮೊದಲು ಬ್ಯಾಟ್‌ ಮಾಡಿದ ದ.ಆಫ್ರಿಕಾ 8 ವಿಕೆಟ್‌ ಕಳೆದುಕೊಂಡು 215 ರನ್‌ ಕಲೆಹಾಕಿತು. ನಾಯಕಿ ಲಾರಾ ವೊಲ್ವಾರ್ಟ್‌ ಹಾಗೂ ತಜ್ಮಿನ್‌ ಬ್ರಿಟ್ಸ್‌ ಮೊದಲ ವಿಕೆಟ್‌ಗೆ 19.5 ಓವರ್‌ಗಳಲ್ಲಿ 102 ರನ್‌ ಜೊತೆಯಾಟವಾಡಿ ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟರು. ಆದರೆ 61 ರನ್‌ ಗಳಿಸಿದ್ದ ವೊಲ್ವಾರ್ಟ್‌ರ ವಿಕೆಟ್‌ ಕಿತ್ತ ಅರುಂಧತಿ ರೆಡ್ಡಿ ದ.ಆಫ್ರಿಕಾದ ಪತನಕ್ಕೆ ನಾಂದಿ ಹಾಡಿದರು.

ಬೆಂಗಳೂರು: ಸರಣಿಯುದ್ದಕ್ಕೂ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ಮೇಲೆ ಸವಾರಿ ಮಾಡಿದ ಭಾರತ 3 ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ಸ್ವೀಪ್‌ ಮಾಡಿಕೊಂಡಿದೆ. ಬೌಲರ್‌ಗಳ ಮೊನಚು ದಾಳಿ, ಬ್ಯಾಟರ್‌ಗಳ ಅಭೂತಪೂರ್ವ ಪ್ರದರ್ಶನದ ನೆರವಿನಿಂದ ಭಾನುವಾರ ಭಾರತ ಕೊನೆ ಪಂದ್ಯದಲ್ಲಿ 6 ವಿಕೆಟ್‌ ಭರ್ಜರಿ ಗೆಲುವು ದಾಖಲಿಸಿತು.

ಮೊದಲು ಬ್ಯಾಟ್‌ ಮಾಡಿದ ದ.ಆಫ್ರಿಕಾ 8 ವಿಕೆಟ್‌ ಕಳೆದುಕೊಂಡು 215 ರನ್‌ ಕಲೆಹಾಕಿತು. ನಾಯಕಿ ಲಾರಾ ವೊಲ್ವಾರ್ಟ್‌ ಹಾಗೂ ತಜ್ಮಿನ್‌ ಬ್ರಿಟ್ಸ್‌ ಮೊದಲ ವಿಕೆಟ್‌ಗೆ 19.5 ಓವರ್‌ಗಳಲ್ಲಿ 102 ರನ್‌ ಜೊತೆಯಾಟವಾಡಿ ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟರು. ಆದರೆ 61 ರನ್‌ ಗಳಿಸಿದ್ದ ವೊಲ್ವಾರ್ಟ್‌ರ ವಿಕೆಟ್‌ ಕಿತ್ತ ಅರುಂಧತಿ ರೆಡ್ಡಿ ದ.ಆಫ್ರಿಕಾದ ಪತನಕ್ಕೆ ನಾಂದಿ ಹಾಡಿದರು.

ತಜ್ಮಿನ್‌ 38 ರನ್‌ಗೆ ವಿಕೆಟ್‌ ಒಪ್ಪಿಸಿದ ಬಳಿಕ ಬೇರೆ ಯಾರೂ ಕ್ರೀಸ್‌ನಲ್ಲಿ ನೆಲೆಯೂರಲು ಸಾಧ್ಯವಾಗಲಿಲ್ಲ. ಕೊಎನಯಲ್ಲಿ ನಾದಿನ್ ಡಿ ಕ್ಲೆರ್ಕ್‌ 26, ಮೀಕೆ ಡೆ ರಿಡೆರ್‌ 26 ರನ್‌ ಕೊಡುಗೆ ನೀಡಿದ್ದರಿಂದ ತಂಡದ ಮೊತ್ತ 210 ಗಡಿ ದಾಟಿತು. ದೀಪ್ತಿ ಶರ್ಮಾ 10 ಓವರಲ್ಲಿ 27 ರನ್‌ಗೆ 2, ಅರುಂಧತಿ ರೆಡ್ಡಿ 36 ರನ್‌ಗೆ 2 ವಿಕೆಟ್‌ ಕಬಳಿಸಿದರು. ಸರಣಿಯಲ್ಲಿ ಮೊದಲ ಬಾರಿ ಆಡುವ ಅವಕಾಶ ಗಿಟ್ಟಿಸಿಕೊಂಡ ಕರ್ನಾಟಕದ ಶ್ರೇಯಾಂಕ ಪಾಟೀಲ್‌ 1 ವಿಕೆಟ್‌ ಪಡೆದರು.

T20 World Cup 2024 ಭಾರತ vs ಆಸೀಸ್‌: ಸೆಮೀಸ್‌ ರೇಸ್‌ ಗೆಲ್ಲೋರ್‍ಯಾರು?

ದ.ಆಫ್ರಿಕಾ ನೀಡಿದ್ದ ಗುರಿ ಭಾರತದ ಬಲಿಷ್ಠ ಬ್ಯಾಟಿಂಗ್‌ ಪಡೆಯ ಮುಂದೆ ಸಣ್ಣದಾಗಿ ತೋರಿತು. ಮೊದಲೆರಡು ಪಂದ್ಯಗಳಲ್ಲಿ ಶತಕ ಬಾರಿಸಿದ್ದ ಸ್ಮೃತಿ ಮಂಧನಾ ಹ್ಯಾಟ್ರಿಕ್‌ ಸೆಂಚುರಿಯ ನಿರೀಕ್ಷೆಯಲ್ಲಿದ್ದರೂ, 83 ಎಸೆತಗಳಲ್ಲಿ 90 ರನ್‌ ಸಿಡಿಸಿ ನಿರ್ಗಮಿಸಿದರು. ಶಫಾಲಿ ವರ್ಮಾ 25, ಪ್ರಿಯಾ ಪೂನಿಯಾ 28 ರನ್‌ ಕೊಡುಗೆ ನೀಡಿದರೆ, ನಾಯಕಿ ಹರ್ಮನ್‌ಪ್ರೀತ್‌ ಕೌರ್‌ 42 ರನ್‌ ಗಳಿಸಿ ತಂಡವನ್ನು 40.4 ಓವರ್‌ಗಳಲ್ಲೇ ಗೆಲುವಿನ ದಡ ಸೇರುವಂತೆ ಮಾಡಿದರು.

ಸ್ಕೋರ್‌: ದ.ಆಫ್ರಿಕಾ 40 ಓವರಲ್ಲಿ 215/8 (ವೊಲ್ವಾರ್ಟ್‌ 61, ತಜ್ಮಿನ್‌ 38, ದೀಪ್ತಿ 2-27, ಅರುಂಧತಿ 2-36), ಭಾರತ 40.4 ಓವರಲ್ಲಿ 220/4 (ಸ್ಮೃತಿ 90, ಹರ್ಮನ್‌ಪ್ರೀತ್‌ 42, ಖಾಕ 1-38) ಪಂದ್ಯಶ್ರೇಷ್ಠ: ದೀಪ್ತಿ ಶರ್ಮಾ, ಸರಣಿ ಶ್ರೇಷ್ಠ: ಸ್ಮೃತಿ ಮಂಧನಾ

ಸರಣಿಯಲ್ಲಿ 343 ರನ್‌: ಸ್ಮೃತಿ ಹೊಸ ದಾಖಲೆ

ಸರಣಿಯಲ್ಲಿ 343 ರನ್‌ ಕಲೆಹಾಕಿದ ಸ್ಮೃತಿ ಮಂಧನಾ, ಮಹಿಳಾ ಏಕದಿನದಲ್ಲಿ 3 ಪಂದ್ಯಗಳ ಸರಣಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ್ತಿ ಎಂಬ ಖ್ಯಾತಿಗೆ ಪಾತ್ರರಾದರು. ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ದ.ಆಫ್ರಿಕಾದ ಲಾರಾ ವೊಲ್ವಾರ್ಟ್‌ 335 ರನ್‌, ಪಾಕಿಸ್ತಾನ ವಿರುದ್ಧ ವೆಸ್ಟ್‌ಇಂಡೀಸ್‌ ಹೇಲಿ ಮ್ಯಾಥ್ಯೂವ್ಸ್‌ 325 ರನ್‌ ಕಲೆಹಾಕಿದ್ದರು. ಆ ದಾಖಲೆಯನ್ನು ಸ್ಮೃತಿ ಮುರಿದರು.

ಚೆನ್ನೈನಲ್ಲಿ 28ರಿಂದ ಏಕೈಕ ಟೆಸ್ಟ್‌ ಪಂದ್ಯ

ಏಕದಿನ ಸರಣಿಯ ಎಲ್ಲಾ 3 ಪಂದ್ಯಗಳಿಗೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಿದ್ದರೆ, ಟೆಸ್ಟ್‌, ಟಿ20 ಸರಣಿ ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಜೂ.28ರಿಂದ ಏಕೈಕ ಟೆಸ್ಟ್‌ ಪಂದ್ಯ ನಿಗದಿಯಾಗಿದ್ದು, ಬಳಿಕ ಜುಲೈ 5, ಜುಲೈ 7 ಹಾಗೂ ಜುಲೈ 9ರಂದು 3 ಟಿ20 ಪಂದ್ಯಗಳು ಆಯೋಜನೆಗೊಳ್ಳಲಿವೆ.

click me!