ಸುನಿಲ್ ಗವಾಸ್ಕರ್ ಹೆಸರಿನಲ್ಲಿದ್ದ ಮತ್ತೊಂದು ಅಪರೂಪದ ದಾಖಲೆ ಮುರಿದ ಶುಭ್‌ಮನ್ ಗಿಲ್!

Published : Jul 06, 2025, 01:01 PM IST
Shubman Gill

ಸಾರಾಂಶ

ಶುಭ್‌ಮನ್ ಗಿಲ್ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ ಇಂಗ್ಲೆಂಡ್‌ಗೆ ದಾಖಲೆಯ 608 ರನ್‌ಗಳ ಗುರಿ ನೀಡಿದೆ. ಗಿಲ್ ಒಂದೇ ಟೆಸ್ಟ್‌ನಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ 150+ ರನ್ ಗಳಿಸಿದ ವಿಶ್ವದ ಎರಡನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದರೊಂದಿಗೆ ಸುನಿಲ್ ಗವಾಸ್ಕರ್ ದಾಖಲೆಯನ್ನೂ ಮುರಿದಿದ್ದಾರೆ.

ನಾಯಕ ಶುಭ್‌ಮನ್‌ ಗಿಲ್‌ ಮತ್ತೆ ಆರ್ಭಟಿಸಿದ್ದಾರೆ. ಅಭೂತಪೂರ್ವ ಲಯದಲ್ಲಿರುವ ಅವರು ಸತತ 2ನೇ ಇನ್ನಿಂಗ್ಸ್‌ನಲ್ಲೂ 150+ ರನ್‌ ಗಳಿಸಿದ್ದು, ಹೊಸ ದಾಖಲೆ ಬರೆದಿದ್ದಾರೆ. ಇದರೊಂದಿಗೆ 2ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ಗೆಲುವಿಗೆ ದಾಖಲೆಯ ಗುರಿ ನಿಗದಿಪಡಿಸಲು ನೆರವಾಗಿದ್ದಾರೆ. ಆರಂಭಿಕ ಟೆಸ್ಟ್‌ನಲ್ಲಿ 371 ರನ್‌ ಚೇಸ್‌ ಮಾಡಿದ್ದ ಆತಿಥೇಯರು ಈ ಪಂದ್ಯದಲ್ಲಿ ಗೆಲ್ಲಲು ಬರೋಬ್ಬರಿ 608 ರನ್‌ ಗಳಿಸಬೇಕಿದೆ. 2022ರಲ್ಲಿ ಭಾರತ ವಿರುದ್ಧದೇ 378 ರನ್‌ ಗುರಿ ಬೆನ್ನತ್ತಿ ಗೆದ್ದಿದ್ದು ಇಂಗ್ಲೆಂಡ್‌ನ ದಾಖಲೆ. ಇತಿಹಾಸದಲ್ಲಿ ಯಾವುದೇ ತಂಡ 414ಕ್ಕಿಂತ ಹೆಚ್ಚು ರನ್‌ ಚೇಸ್‌ ಮಾಡಿ ಗೆದ್ದಿಲ್ಲ.

ಮೊದಲ ಇನ್ನಿಂಗ್ಸ್‌ನಲ್ಲಿ 180 ರನ್‌ ಮುನ್ನಡೆ ಪಡೆದಿದ್ದ ಭಾರತ, 2ನೇ ಇನ್ನಿಂಗ್ಸ್‌ನಲ್ಲಿ 3ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 64 ರನ್‌ ಗಳಿಸಿತ್ತು. ಪಂದ್ಯದ 4ನೇ ದಿನವಾದ ಶನಿವಾರವೂ ಭಾರತ ಬ್ಯಾಟಿಂಗ್‌ನಲ್ಲಿ ವಿಜೃಂಭಿಸಿತು. 83 ಓವರ್‌ಗಳಲ್ಲಿ 6 ವಿಕೆಟ್‌ಗೆ 427 ರನ್‌ ಗಳಿಸಿ ಡಿಕ್ಲೇರ್‌ ಘೋಷಿಸಿತು. ಭಾರತ ಪರ 4ನೇ ವಿಕೆಟ್‌ಗೆ ಜೊತೆಯಾದ ಗಿಲ್‌ ಹಾಗೂ ರಿಷಭ್‌ ಪಂತ್‌ 103 ಎಸೆತಕ್ಕೆ 110 ರನ್ ಜೊತೆಯಾಟವಾಡಿದರು. ರಿಷಭ್‌ 65 ರನ್‌ ಗಳಿಸಿದರು. ಬಳಿಕ ಗಿಲ್-ಜಡೇಜಾ 175 ರನ್‌ ಸೇರಿಸಿ ತಂಡದ ಮುನ್ನಡೆಯನ್ನು 600ಕ್ಕೆ ಹೆಚ್ಚಿಸಿದರು. ಸ್ಫೋಟಕ ಆಟವಾಡುತ್ತಿದ್ದ ಗಿಲ್‌ ಮತ್ತೊಂದು ದ್ವಿಶತಕದ ನಿರೀಕ್ಷೆಯಲ್ಲಿದ್ದರೂ, 162 ಎಸೆತಗಳಲ್ಲಿ 13 ಬೌಂಡರಿ, 8 ಸಿಕ್ಸರ್‌ಗಳೊಂದಿಗೆ 161 ರನ್‌ ಸಿಡಿಸಿ ಔಟಾದರು.

ಸುನಿಲ್ ಗವಾಸ್ಕರ್ ದಾಖಲೆ ಬ್ರೇಕ್:

ಮೊದಲ ಇನ್ನಿಂಗ್ಸ್‌ನಲ್ಲಿ ಆಕರ್ಷಕ ದ್ವಿಶತಕ ಸಿಡಿಸಿ ಮಿಂಚಿದ್ದ ಶುಭ್‌ಮನ್ ಗಿಲ್, ಎರಡನೇ ಇನ್ನಿಂಗ್ಸ್‌ನಲ್ಲೂ ಸ್ಪೋಟಕ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಇದೇ ವೇಳೆ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು, ಟೆಸ್ಟ್ ಪಂದ್ಯವೊಂದರಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನ್ನುವ ಸುನಿಲ್ ಗವಾಸ್ಕರ್ ಹೆಸರಿನಲ್ಲಿದ್ದ ದಾಖಲೆಯನ್ನು ಇದೀಗ ಗಿಲ್ ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೊದಲು ಸುನಿಲ್ ಗವಾಸ್ಕರ್ 1971ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 344 ರನ್ ಸಿಡಿಸಿದ್ದರು. ಇದೀಗ ಶುಭ್‌ಮನ್ ಗಿಲ್ ಎಜ್‌ಬಾಸ್ಟನ್ ಟೆಸ್ಟ್‌ನಲ್ಲಿ 430 ರನ್ ಸಿಡಿಸುವ ಮೂಲಕ ಹೊಸ ಮೈಲಿಗಲ್ಲು ನೆಡುವಲ್ಲಿ ಯಶಸ್ವಿಯಾಗಿದ್ದಾರೆ.

 

ಇನ್ನು ಟೆಸ್ಟ್ ಪಂದ್ಯವೊಂದರಲ್ಲಿ ಗರಿಷ್ಠ ರನ್ ಬಾರಿಸಿದ ಜಗತ್ತಿನ ಬ್ಯಾಟರ್‌ಗಳ ಪಟ್ಟಿಯಲ್ಲಿ ಶುಭ್‌ಮನ್ ಗಿಲ್ ಎರಡನೇ ಸ್ಥಾನದಲ್ಲಿದ್ದಾರೆ. ಈ ಮೊದಲು ಇಂಗ್ಲೆಂಡ್‌ನ ಗ್ರಹಾಂ ಗೂಚ್ ಭಾರತದ ವಿರುದ್ದವೇ 456 ರನ್ ಸಿಡಿಸಿದ್ದರು. ಇದೀಗ ಗಿಲ್ 430 ರನ್‌ಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ.

ಒಂದೇ ಟೆಸ್ಟ್‌ನಲ್ಲಿ ಎರಡು ಸಲ 150+ ರನ್:

ಶುಭ್‌ಮನ್ ಗಿಲ್ ಇದೀಗ ಒಂದು ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ನಲ್ಲಿ 150+ ರನ್ ಬಾರಿಸಿದ ಜಗತ್ತಿನ ಮೊದಲ ಹಾಗೂ ಒಟ್ಟಾರೆ ವಿಶ್ವದ ಎರಡನೇ ಬ್ಯಾಟರ್ ಎನ್ನುವ ಹಿರಿಮೆಗೆ ಶುಭ್‌ಮನ್ ಗಿಲ್ ಪಾತ್ರರಾಗಿದ್ದಾರೆ. ಈ ಮೊದಲು 1980ರಲ್ಲಿ ಪಾಕಿಸ್ತಾನ ವಿರುದ್ದ ಆಸ್ಟ್ರೇಲಿಯಾದ ಅಲನ್ ಬಾರ್ಡರ್(150&153 ರನ್) ಈ ಸಾಧನೆ ಮಾಡಿದ್ದರು.

ಎಜ್‌ಬಾಸ್ಟನ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 269 ರನ್ ಸಿಡಿಸಿದ್ದ ಶುಭ್‌ಮನ್ ಗಿಲ್, ಎರಡನೇ ಇನ್ನಿಂಗ್ಸ್‌ನಲ್ಲಿ 161 ರನ್ ಸಿಡಿಸಿ ಮಿಂಚಿದ್ದಾರೆ. ಇನ್ನು ಶುಭ್‌ಮನ್ ಗಿಲ್ ಅವರ ಈ ಅಭೂತಪೂರ್ವ ಪ್ರದರ್ಶನಕ್ಕೆ ವಿರಾಟ್ ಕೊಹ್ಲಿ ಸೇರಿದಂತೆ ಕ್ರೀಡಾ ದಿಗ್ಗಜರು ಅಭಿನಂದನೆ ಸಲ್ಲಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌