ಪತ್ನಿಗೆ ಜೀವನಾಂಶ ನೀಡುವಂತೆ ಮೊಹಮದ್‌ ಶಮಿಗೆ ಕೋರ್ಟ್‌ ಆದೇಶ!

By Santosh Naik  |  First Published Jan 23, 2023, 11:27 PM IST

ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಸದ್ಯ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಶಮಿ ವೈಯಕ್ತಿಕ ಜೀವನದ ಬಗ್ಗೆ ಕೋರ್ಟ್‌ ದೊಡ್ಡ ನಿರ್ಧಾರ ಮಾಡಿದೆ. ಶಮಿ ಅವರ ಪತ್ನಿ ಹಸಿನ್‌ಗೆ ಮಾಸಿಕ ಐವತ್ತು ಸಾವಿರ ರೂಪಾಯಿ ಜೀವನಾಂಶ ನೀಡುವಂತೆ ಕೋಲ್ಕತ್ತಾ ನ್ಯಾಯಾಲಯ ಆದೇಶಿಸಿದೆ. ಹಸಿನ್ ಜಹಾನ್ ಮತ್ತು ಮೊಹಮ್ಮದ್ ಶಮಿ ಸದ್ಯ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.
 


ನವದೆಹಲಿ (ಜ.23): ಟೀಂ ಇಂಡಿಯಾ ವೇಗಿ ಮೊಹಮದ್‌ ಶಮಿ ವೈಯಕ್ತಿಕ ಜೀವನದ ವಿಚಾರವಾಗಿ ದೊಡ್ಡ ಸುದ್ದಿ ಹೊರಬಿದ್ದಿದೆ. ಕೋಲ್ಕತ್ತಾ ಕೋರ್ಟ್ ಭಾರತದ ವೇಗದ ಬೌಲರ್‌ಗೆ ಮಾಸಿಕ ಐವತ್ತು ಸಾವಿರ ರೂಪಾಯಿಗಳ ಜೀವನಾಂಶವನ್ನು ತನ್ನಿಂದ ದೂರ ವಾಸ ಮಾಡುತ್ತಿರುವ ಪತ್ನಿ ಹಸಿನ್ ಜಹಾನ್‌ಗೆ ನೀಡುವಂತೆ ಆದೇಶಿಸಿದೆ. ಅಲಿಪೋರ್ ನ್ಯಾಯಾಲಯದ ನ್ಯಾಯಾಧೀಶೆ ಅನಿಂದಿತಾ ಗಂಗೂಲಿ ಈ ಪ್ರಕರಣದ ತೀರ್ಪು ಪ್ರಕಟಿಸಿದರು. ಆದರೆ, ಹಸಿನ್ ಜಹಾನ್‌ಗೆ ಈ ಮೊತ್ತದಿಂದ ಸಂತಸವಾಗಿಲ್ಲ. ಹಸಿನ್‌ ಜಹಾನ್‌ ತಿಂಗಳಿಗೆ 10 ಲಕ್ಷ ರೂಪಾಯಿ ಜೀವನಾಂಶದ ಬೇಡಿಕೆ ಇಟ್ಟಿದ್ದರು. 2018 ರಲ್ಲಿ, ಹಸಿನ್ ಜಹಾನ್ ಅವರು ಮಾಸಿಕ 10 ಲಕ್ಷ ರೂಪಾಯಿ ಜೀವನಾಂಶವನ್ನು ಕೋರಿ ಕಾನೂನು ಅರ್ಜಿ ಸಲ್ಲಿಸಿದರು. ಅರ್ಜಿಯಲ್ಲಿ ಹಸಿನ್ ಜಹಾನ್ ಅವರು ವೈಯಕ್ತಿಕ ವೆಚ್ಚಕ್ಕಾಗಿ 7 ಲಕ್ಷ ರೂಪಾಯಿ ಮತ್ತು ಮಗಳ ಪೋಷಣೆಗಾಗಿ ತಿಂಗಳಿಗೆ 3 ಲಕ್ಷ ರೂಪಾಯಿ ಜೀವನಾಂಶವನ್ನು ಬಯಸಿದ್ದರು. ಈ ತೀರ್ಪಿನ ವಿರುದ್ಧ ಹಸಿನ್ ಜಹಾನ್ ಈಗ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.

2018 ರಲ್ಲಿ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಎದ್ದಿತ್ತು. ಶಮಿ ಪತ್ನಿ ಹಸಿನ್ ಜಹಾನ್ ಈ ತಂಡದ ಪ್ರಮುಖ ಆಟಗಾರನ ಮೇಲೆ ಕೌಟುಂಬಿಕ ದೌರ್ಜನ್ಯ, ಮ್ಯಾಚ್ ಫಿಕ್ಸಿಂಗ್, ವರದಕ್ಷಿಣೆ ಕಿರುಕುಳದಂತಹ ಗಂಭೀರ ಆರೋಪಗಳನ್ನು ಮಾಡಿದ್ದರು. ಇದಾದ ಬಳಿಕ ಮೊಹಮ್ಮದ್ ಶಮಿ ಪತ್ನಿಯ ಆರೋಪಕ್ಕೆ ಸ್ಪಷ್ಟನೆ ನೀಡಿದ್ದರು. ನಂತರ ಶಮಿ ಮತ್ತು ಹಸಿನ್ ಜಹಾನ್ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದರು.

ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ ಶಮಿ, 'ಹಸಿನ್‌ ಮತ್ತು ಅವರ ಕುಟುಂಬ ಸದಸ್ಯರು ಎಲ್ಲಾ ವಿಷಯಗಳ ಬಗ್ಗೆ ಕುಳಿತು ಮಾತನಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಅವರನ್ನು ಯಾರು ಪ್ರಚೋದಿಸುತ್ತಿದ್ದಾರೆಂದು ನನಗೆ ತಿಳಿದಿಲ್ಲ. ನಮ್ಮ ವೈಯಕ್ತಿಕ ಜೀವನದ ಬಗ್ಗೆ ನಡೆಯುತ್ತಿರುವುದೆಲ್ಲವೂ ಸಂಪೂರ್ಣ ಸುಳ್ಳು. ನನ್ನ ವಿರುದ್ಧ ದೊಡ್ಡ ಪಿತೂರಿ ನಡೆಯುತ್ತಿದೆ. ಇದು ನನ್ನ ಮಾನಹಾನಿ ಅಥವಾ ನನ್ನ ವೃತ್ತಿಜೀವನವನ್ನು ಅಂತ್ಯಗೊಳಿಸುವ ಪ್ರಯತ್ನವಾಗಿದೆ. ದೇಶಕ್ಕೆ ದ್ರೋಹ ಬಗೆಯುವುದಕ್ಕಿಂತ ಸಾಯುವುದನ್ನು ಇಷ್ಟಪಡುತ್ತೇನೆ ಎಂದು ಶಮಿ ಹೇಳಿದ್ದರು.

Hasin Jahan: ರೈಲಿನಲ್ಲಿ ಟಿಟಿಇ ಅನುಚಿತ ವರ್ತನೆ, ಮೊಹಮದ್‌ ಶಮಿ ಪತ್ನಿ ಹಸಿನ್‌ ಜಹಾನ್‌ ಆರೋಪ!

ಇನ್ನು ಕ್ರಿಕೆಟ್‌ ವಿಚಾರಕ್ಕೆ ಬರುವುದಾರೆ,  ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 32 ವರ್ಷದ ಮೊಹಮ್ಮದ್ ಶಮಿ ಅದ್ಭುತ ಬೌಲಿಂಗ್ ಮಾಡಿದ್ದಾರೆ. 6 ಓವರ್ ಗಳಲ್ಲಿ ಕೇವಲ 18 ರನ್ ನೀಡಿ 3 ನ್ಯೂಜಿಲೆಂಡ್ ಆಟಗಾರರನ್ನು ಪೆವಿಲಿಯನ್‌ಗೆ ಕಳಿಸಿದ್ದರು. ಶಮಿ ಮೊದಲು ಫಿನ್ ಅಲೆನ್ ವಿಕೆಟ್ ಪಡೆದಿದ್ದರು. ನಂತರ ಡ್ಯಾರಿಲ್ ಮಿಚೆಲ್ ಮತ್ತು ಮೈಕಲ್ ಬ್ರೇಸ್ ವೆಲ್ ರನ್ನು ಕೂಡ ಪೆವಿಲಿಯನ್ ಗೆ ಕಳುಹಿಸಿದರು. ಶಮಿ 29ನೇ ಬಾರಿ ಏಕದಿನದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದರು. ಈ ಅದ್ಭುತ ಪ್ರದರ್ಶನಕ್ಕಾಗಿ ಶಮಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಜಯಿಸಿದ್ದರು.

Tap to resize

Latest Videos

ಮೊಹಮ್ಮದ್ ಶಮಿ ಮತ್ತು ಹಸೀನ್ ಜಹಾನ್ ಲವ್‌ ಸ್ಟೋರಿ!

ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಶಮಿ ಶ್ರೇಷ್ಠ ನಿರ್ವಹಣೆಯನ್ನು ಮುಂದುವರಿಸಲು ಬಯಸಿದ್ದಾರೆ. ಉಭಯ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯ ಜನವರಿ 24 ರಂದು ಇಂದೋರ್‌ನಲ್ಲಿ ನಡೆಯಲಿದೆ. ಏಕದಿನ ಸರಣಿಯ ನಂತರ, ಎರಡೂ ದೇಶಗಳು ಟಿ20 ಸರಣಿಯಲ್ಲಿ ಸಹ ಭಾಗವಹಿಸಲಿದ್ದು, ಇದರಲ್ಲಿ ಮೊಹಮ್ಮದ್ ಶಮಿ ಭಾಗವಾಗಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಶಮಿ ತಂಡದಲ್ಲಿ ಆಯ್ಕೆಯಾಗಿದ್ದಾರೆ.

click me!