ಲಂಕಾ ಎದುರು ಸರಣಿ ಗೆಲ್ಲುವ ತವಕದಲ್ಲಿ ಯಂಗ್‌ ಇಂಡಿಯಾ

By Kannadaprabha NewsFirst Published Jul 20, 2021, 9:54 AM IST
Highlights

* ಲಂಕಾ ಎದುರು ಮತ್ತೊಂದು ಗೆಲುವಿನ ಕನವರಿಕೆಯಲ್ಲಿ ಧವನ್‌ ಪಡೆ

* ಮೊದಲ ಏಕದಿನ ಪಂದ್ಯವನ್ನು ಅನಾಯಾಸವಾಗಿ ಜಯಿಸಿದ್ದ ಟೀಂ ಇಂಡಿಯಾ

* ಸರಣಿ ಗೆಲ್ಲಲು ತುದಿಗಾಲಿನಲ್ಲಿ ನಿಂತ ಯಂಗಿಸ್ತಾನ್‌

ಕೊಲಂಬೊ(ಜು.20): ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯಲು ಏಕದಿನ ಸರಣಿಯಲ್ಲೂ ಟಿ20ಯಂತೆಯೇ ಆಡುತ್ತಿರುವ ಟೀಂ ಇಂಡಿಯಾದ ಯುವ ಪಡೆ, ಶ್ರೀಲಂಕಾ ವಿರುದ್ಧ ಮಂಗಳವಾರ ನಡೆಯಲಿರುವ 2ನೇ ಏಕದಿನ ಪಂದ್ಯದಲ್ಲೂ ಅಬ್ಬರಿಸಲು ಕಾತಿರಿಸುತ್ತಿದೆ. ಮೊದಲ ಏಕದಿನದಲ್ಲಿ ಯುವ ಆಟಗಾರರಾದ ಪೃಥ್ವಿ ಶಾ, ಇಶಾನ್‌ ಕಿಶನ್‌, ಸೂರ್ಯಕುಮಾರ್‌, ಬ್ಯಾಟಿಂಗ್‌ ಬಹಳ ಸುಲಭವಾಗಿ ಕಾಣುವಂತೆ ಆಡಿದ್ದರು.

ಭವಿಷ್ಯದಲ್ಲಿ ಭಾರತ ತಂಡ ಏಕದಿನ ಕ್ರಿಕೆಟ್‌ನಲ್ಲೂ ಹೆಚ್ಚು ಆಕ್ರಮಣಕಾರಿ ಆಟವಾಡುವ ಗುರಿ ಹೊಂದಿದ್ದು, ಮೊದಲ ಏಕದಿನದಲ್ಲಿ ಈ ಮೂವರ ಆಟ ಅದಕ್ಕೆ ಸರಿಯಾದ ಉದಾಹರಣೆ ಎನ್ನುವಂತಿತ್ತು. 263 ರನ್‌ ಗುರಿಯನ್ನು 37ನೇ ಓವರ್‌ನಲ್ಲೇ ತಲುಪಿದ್ದ ಭಾರತ, ಲಂಕಾ ಮೇಲೆ ಸವಾರಿ ಮಾಡಿತ್ತು.

2ನೇ ಏಕದಿನಕ್ಕೆ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಆಗುವ ಸಾಧ್ಯತೆ ಇಲ್ಲ. ಆದರೆ ಭುವನೇಶ್ವರ್‌ ಕುಮಾರ್‌ ಡೆತ್‌ ಓವರ್‌ ಬೌಲಿಂಗ್‌ನಲ್ಲಿ ಲಯ ಕಂಡುಕೊಳ್ಳಬೇಕಿದೆ. ಇನ್ನು ಮನೀಶ್‌ ಪಾಂಡೆ ತಮ್ಮ ಸ್ಟ್ರೈಕ್‌ ರೇಟ್‌ ಬಗ್ಗೆ ಗಮನ ಹರಿಸಬೇಕಿದೆ. ಪಾಂಡೆ ನಿಧಾನವಾಗಿ ಬ್ಯಾಟ್‌ ಮಾಡಿದಷ್ಟೂ, ಅವರ ಸ್ಥಾನ ಕಾಯಂ ಆಗಿ ಸೂರ್ಯಕುಮಾರ್‌ಗೆ ಹೋಗುವ ಸಾಧ್ಯತೆ ಹೆಚ್ಚುತ್ತಾ ಹೋಗುತ್ತದೆ. ಇನ್ನು ಕುಲ್ದೀಪ್‌ ಯಾದವ್‌ ಹಾಗೂ ಯಜುವೇಂದ್ರ ಚಹಲ್‌ ಬಹಳ ಸಮಯ ಬಳಿಕ ಒಟ್ಟಿಗೆ ಆಡಿ ಯಶಸ್ಸು ಕಂಡಿದ್ದಾರೆ. ಈ ಜೋಡಿ ಮತ್ತೊಮ್ಮೆ ಲಂಕಾ ತಂಡವನ್ನು ಕಾಡಲು ಕಾಯುತ್ತಿದೆ.

INDvSL; ಧವನ್ ಸೈನ್ಯದ ಅಬ್ಬರಕ್ಕೆ ಲಂಕಾ ದಹನ; ಭಾರತಕ್ಕೆ 1-0 ಸರಣಿ ಮನ್ನಡೆ!

ಮತ್ತೊಂದೆಡೆ ಶ್ರೀಲಂಕಾ ಸುಧಾರಿತ ಪ್ರದರ್ಶನ ತೋರಲು ಹಪಹಪಿಸುತ್ತಿದೆ. ತಂಡದ ಬ್ಯಾಟಿಂಗ್‌ ತಕ್ಕಮಟ್ಟಿಗೆ ಚೆನ್ನಾಗಿತ್ತು ಎನಿಸಿದರೂ, ಬೌಲಿಂಗ್‌ ಕಳಪೆಯಾಗಿತ್ತು. ಮೊದಲ ಪಂದ್ಯದಲ್ಲಿ ಲಂಕಾ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತ್ತು. ಆದರೆ ನಿಧಾನಗತಿಯ ಪಿಚ್‌ನಲ್ಲಿ ಟಾಸ್‌ ಗೆಲ್ಲುವ ತಂಡ ಮೊದಲು ಫೀಲ್ಡ್‌ ಮಾಡಲು ನಿರ್ಧರಿಸುವ ಸಾಧ್ಯತೆ ಹೆಚ್ಚು.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಶಿಖರ್‌ ಧವನ್‌(ನಾಯಕ), ಪೃಥ್ವಿ ಶಾ, ಇಶಾನ್‌ ಕಿಶನ್‌, ಮನೀಶ್‌ ಪಾಂಡೆ, ಸೂರ್ಯಕುಮಾರ್‌, ಹಾರ್ದಿಕ್‌ ಪಾಂಡ್ಯ, ಕೃನಾಲ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ದೀಪಕ್‌ ಚಹರ್‌, ಕುಲ್ದೀಪ್‌ ಯಾದವ್‌, ಯಜುವೇಂದ್ರ ಚಹಲ್‌.

ಶ್ರೀಲಂಕಾ: ಆವಿಷ್ಕ ಫರ್ನಾಂಡೋ, ಮಿನೋದ್‌ ಭನುಕ, ಭನುಕ ರಾಜಪಕ್ಸ, ಧನಂಜಯ ಡಿ ಸಿಲ್ವಾ, ಚರಿತ್‌ ಅಸಲಂಕ, ದಸುನ್‌ ಶಾನಕ(ನಾಯಕ), ವನಿಂದು ಹಸರಂಗ, ಚಮಿಕ ಕರುಣರತ್ನೆ, ಇಸುರು ಉಡಾನ, ದುಷ್ಮಾಂತ ಚಮೀರ, ಲಕ್ಷನ್‌ ಸಂಡಕನ್‌.

ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ
ನೇರ ಪ್ರಸಾರ ಸ್ಟಾರ್‌ ಸ್ಪೋರ್ಟ್ಸ್‌

click me!