ಸಂದೀಪ್ ಶರ್ಮಾಗೆ 5 ವಿಕೆಟ್ ಗೊಂಚಲು; ರಾಜಸ್ಥಾನಕ್ಕೆ ಸವಾಲಿನ ಗುರಿ ನೀಡಿದ ಮುಂಬೈ ಇಂಡಿಯನ್ಸ್

By Naveen KodaseFirst Published Apr 22, 2024, 9:22 PM IST
Highlights

ಇಲ್ಲಿನ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬ್ಯಾಟ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆಯಲು ರಾಜಸ್ಥಾನ ರಾಯಲ್ಸ್ ವೇಗಿಗಳು ಅವಕಾಶ ನೀಡಲಿಲ್ಲ.

ಜೈಪುರ(ಏ.22): ಆರಂಭಿಕ ಆಘಾತದ ಹೊರತಾಗಿ 21 ವರ್ಷದ ತಿಲಕ್ ವರ್ಮಾ ಬಾರಿಸಿದ ಸ್ಪೋಟಕ ಅರ್ಧಶತಕ ಹಾಗೂ ನೆಹಾಲ್ ವದೇರಾ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಮುಂಬೈ ಇಂಡಿಯನ್ಸ್ 9 ವಿಕೆಟ್ ಕಳೆದುಕೊಂಡು 179 ರನ್ ಬಾರಿಸಿದ್ದು, ಆತಿಥೇಯ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸವಾಲಿನ ಗುರಿ ನೀಡಿದೆ. ಅನುಭವಿ ವೇಗಿ ಸಂದೀಪ್ ಶರ್ಮಾ ಕೇವಲ 18 ರನ್ ನೀಡಿ 5 ವಿಕೆಟ್ ಕಬಳಿಸುವ ಮೂಲಕ ಮುಂಬೈ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

ಇಲ್ಲಿನ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬ್ಯಾಟ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆಯಲು ರಾಜಸ್ಥಾನ ರಾಯಲ್ಸ್ ವೇಗಿಗಳು ಅವಕಾಶ ನೀಡಲಿಲ್ಲ. ಮೊದಲ ಓವರ್‌ನಲ್ಲೇ ಟ್ರೆಂಟ್ ಬೌಲ್ಟ್‌, ರೋಹಿತ್ ಶರ್ಮಾ ಅವರ ವಿಕೆಟ್ ಕಬಳಿಸಿದರೆ, ಎರಡನೇ ಓವರ್‌ನಲ್ಲಿ ಸಂದೀಪ್ ಶರ್ಮಾ, ಮತ್ತೋರ್ವ ಓಪನ್ನರ್ ಇಶಾನ್ ಕಿಶನ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ಇನ್ನು ಮುಂಬೈ ನಂಬಿಗಸ್ಥ ಬ್ಯಾಟರ್ ಸೂರ್ಯಕುಮಾರ್ ಯಾದವ್ ಕೇವಲ 10 ರನ್ ಗಳಿಸಿ ಸಂದೀಪ್ ಶರ್ಮಾಗೆ ಎರಡನೇ ಬಲಿಯಾದರು. ಪರಿಣಾಮ ಮುಂಬೈ ಇಂಡಿಯನ್ಸ್ 20 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದರು.

ಇನ್ನು ಮೊಹಮ್ಮದ್ ನಬಿ 23 ರನ್ ಸಿಡಿಸಿದರಾದರೂ, ಹೆಚ್ಚುಹೊತ್ತು ಕ್ರೀಸ್‌ನಲ್ಲಿರಲು ಯುಜುವೇಂದ್ರ ಚಹಲ್ ಅವಕಾಶ ನೀಡಲಿಲ್ಲ. ನಬಿ ಐಪಿಎಲ್‌ನಲ್ಲಿ ಚಹಲ್‌ ಪಾಲಿನ 200ನೇ ಬಲಿ ಎನಿಸಿಕೊಂಡರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ 200 ವಿಕೆಟ್ ಕಬಳಿಸಿದ ಮೊದಲ ಬೌಲರ್ ಎನ್ನುವ ಹಿರಿಮೆಗೆ ಚಹಲ್ ಪಾತ್ರರಾದರು

ತಿಲಕ್-ವದೇರಾ ಜುಗಲ್ಬಂದಿ: ಕೇವಲ 52 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ 5ನೇ ವಿಕೆಟ್‌ಗೆ ನೆಹಾಲ್ ವದೇರಾ ಹಾಗೂ ತಿಲಕ್ ವರ್ಮಾ ಸಮಯೋಚಿತ 99 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ವದೇರಾ ಕೇವಲ 24 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 49 ರನ್ ಬಾರಿಸಿ ಟ್ರೆಂಟ್ ಬೌಲ್ಟ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ತಿಲಕ್ ವರ್ಮಾ 45 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 65 ರನ್ ಬಾರಿಸಿ ಸಂದೀಪ್ ಶರ್ಮಾಗೆ ವಿಕೆಟ್‌ ಒಪ್ಪಿಸಿದರು.
 

click me!