
ತಿರುವನಂತಪುರಂ: ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರನ್ನು ಬೆಂಬಲಿಸಿ ಕೇರಳ ಕ್ರಿಕೆಟ್ ಅಸೋಸಿಯೇಷನ್ (ಕೆಸಿಎ) ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಟೀಂ ಇಂಡಿಯಾದ ಮಾಜಿ ವೇಗಿ ಎಸ್. ಶ್ರೀಶಾಂತ್ ಮೇಲೆ ಹೇರಲಾಗಿದ್ದ ಮೂರು ವರ್ಷಗಳ ನಿಷೇಧವನ್ನು ಹಿಂಪಡೆಯಲಾಗಿದೆ. ಕೆಸಿಎ ಪದಾಧಿಕಾರಿಗಳ ವಿರುದ್ಧ ಮಾಡಿದ್ದ ಟೀಕೆಗಳಿಗೆ ಶ್ರೀಶಾಂತ್ ಬೇಷರತ್ ಕ್ಷಮೆ ಕೋರಿ ಪತ್ರ ಬರೆದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕೇರಳ ಕ್ರಿಕೆಟ್ ಲೀಗ್‌ನ (ಕೆಸಿಎಲ್) ಹೊಸ ಸೀಸನ್ ಆರಂಭವಾಗಲಿರುವ ಹೊತ್ತಲ್ಲೇ ಶ್ರೀಶಾಂತ್‌ಗೆ ಈ ನಿರ್ಧಾರದಿಂದ ದೊಡ್ಡ ರಿಲೀಫ್ ಸಿಕ್ಕಿದೆ.
ಕಳೆದ ಕೆಸಿಎಲ್ ಸೀಸನ್‌ಗೂ ಮುನ್ನ, ಟಿವಿ ಮತ್ತು ಸೋಶಿಯಲ್ ಮೀಡಿಯಾಗಳ ಮೂಲಕ ಅಸೋಸಿಯೇಷನ್‌ಗೆ ಕೆಟ್ಟ ಹೆಸರು ತರುವ ರೀತಿ ಮಾತನಾಡಿದ್ದಕ್ಕೆ ಕೆಸಿಎ, ಶ್ರೀಶಾಂತ್‌ಗೆ ಮೂರು ವರ್ಷಗಳ ಕಾಲ ನಿಷೇಧ ಹೇರಿತ್ತು. ಸಂಜು ಸ್ಯಾಮ್ಸನ್ ಪರವಾಗಿ ಬ್ಯಾಟ್ ಬೀಸಿದ್ದ ಶ್ರೀಶಾಂತ್, ಕೆಸಿಎ ವಿರುದ್ಧ ಕಟು ಶಬ್ದಗಳಲ್ಲಿ ವಾಗ್ದಾಳಿ ನಡೆಸಿದ್ದರು. ಈ ಕ್ರಮವನ್ನು ಪ್ರಶ್ನಿಸಿ ಅವರು ತಿರುವನಂತಪುರಂ ಮುನ್ಸಿಫ್ ನ್ಯಾಯಾಲಯದ ಮೆಟ್ಟಿಲೇರಿದ್ದರು, ಆದರೆ ಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಇದಾದ ನಂತರವೇ ಶ್ರೀಶಾಂತ್ ಅಸೋಸಿಯೇಷನ್‌ಗೆ ಅಧಿಕೃತವಾಗಿ ಕ್ಷಮಾಪಣೆ ಪತ್ರ ಸಲ್ಲಿಸಲು ಮುಂದಾಗಿದ್ದರು.
ಇಂದು ನಡೆದ ಕೆಸಿಎ ವಿಶೇಷ ಸಾಮಾನ್ಯ ಸಭೆಯಲ್ಲಿ ಶ್ರೀಶಾಂತ್ ಅವರ ಕ್ಷಮಾಪಣೆ ಪತ್ರದ ಬಗ್ಗೆ ವಿವರವಾಗಿ ಚರ್ಚಿಸಲಾಯಿತು. ತಮ್ಮ ತಪ್ಪನ್ನು ಒಪ್ಪಿಕೊಂಡು ಬೇಷರತ್ ಕ್ಷಮೆ ಕೋರಿದ ಕಾರಣ, ನಿಷೇಧವನ್ನು ತೆಗೆದುಹಾಕಲು ಸಭೆ ಸರ್ವಾನುಮತದಿಂದ ನಿರ್ಧರಿಸಿತು. ಆದರೆ, ನಿಷೇಧ ಹಿಂಪಡೆಯುವುದರ ಜೊತೆಗೆ ಕೆಸಿಎ ಶ್ರೀಶಾಂತ್‌ಗೆ ಎಚ್ಚರಿಕೆಯನ್ನೂ ನೀಡಿದೆ. ಭವಿಷ್ಯದಲ್ಲಿ ಅಸೋಸಿಯೇಷನ್ ವಿರುದ್ಧ ಅಥವಾ ಕ್ರಿಕೆಟ್‌ನ ಶಿಸ್ತಿಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡಿದರೆ, ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆ ಸ್ಪಷ್ಟಪಡಿಸಿದೆ.
ನಿಷೇಧ ಸಂಪೂರ್ಣವಾಗಿ ತೆರವಾದ ಕಾರಣ, ಮುಂಬರುವ ಕೇರಳ ಕ್ರಿಕೆಟ್ ಲೀಗ್ ಸೀಸನ್ 3ರಲ್ಲಿ ಸಕ್ರಿಯವಾಗಿ ಭಾಗವಹಿಸಲು ಶ್ರೀಶಾಂತ್‌ಗೆ ದಾರಿ ಸುಗಮವಾಗಿದೆ. ಲೀಗ್‌ನ ಪ್ರಮುಖ ತಂಡವಾದ 'ಏರೀಸ್ ಕೊಲ್ಲಂ ಸೇಲರ್ಸ್' ಫ್ರಾಂಚೈಸಿಯ ಸಹ-ಮಾಲೀಕರಾಗಿ ಅವರು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಬಹುದು. ಒಂದು ವೇಳೆ ನಿಷೇಧ ಮುಂದುವರಿದಿದ್ದರೆ, ಕೆಸಿಎಲ್‌ಗೆ ಸಂಬಂಧಿಸಿದ ಯಾವುದೇ ಅಧಿಕೃತ ಹುದ್ದೆಗಳನ್ನು ವಹಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ.
ಎಸ್ ಶ್ರೀಶಾಂತ್ ಭಾರತ ಕ್ರಿಕೆಟ್ ಕಂಡ ಅತ್ಯಂತ ಆಕ್ರಮಣಕಾರಿ ಬೌಲರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಕೇರಳ ಮೂಲದ ಬಲಗೈ ವೇಗಿ ಶ್ರೀಶಾಂತ್ ಭಾರತ ಪರ 27 ಟೆಸ್ಟ್, 53 ಏಕದಿನ ಹಾಗೂ 10 ಟಿ20 ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್‌ನಲ್ಲಿ 87, ಏಕದಿನ ಕ್ರಿಕೆಟ್‌ನಲ್ಲಿ 75 ಹಾಗೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 7 ವಿಕೆಟ್ ಕಬಳಿಸಿದ್ದಾರೆ.
ಇನ್ನು ದೇಶಿ ಕ್ರಿಕೆಟ್‌ನಲ್ಲಿ ಶ್ರೀಶಾಂತ್ 74 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 213 ಹಾಗೂ 92 ಲಿಸ್ಟ್ 'ಎ' ಪಂದ್ಯಗಳನ್ನಾಡಿ 124 ವಿಕೆಟ್ ಹಾಗೂ 65 ಟಿ20 ಪಂದ್ಯಗಳಿಂದ 54 ವಿಕೆಟ್ ಕಬಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.