
ಬೆಂಗಳೂರು(ಏ.17): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೇವಿಡ್ ವಾರ್ನರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮೊದಲ ಗೆಲುವಿಗಾಗಿ ಪರದಾಡುತ್ತಿದ್ದು, ಟೂರ್ನಿಯಲ್ಲಿ ಸತತ 5 ಸೋಲು ಕಾಣುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿಯೇ ಉಳಿದುಕೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಮುಗ್ಗರಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸತತ 5ನೇ ಸೋಲು ಅನುಭವಿಸಿದೆ. ಇನ್ನು ಡೆಲ್ಲಿ ತಂಡವು ಇಷ್ಟೆಲ್ಲಾ ಸೋಲು ಅನುಭವಿಸಿದ್ದರೂ, ಡ್ರೆಸ್ಸಿಂಗ್ ರೂಂ ವಾತಾವರಣ ಕೆಡದಂತೆ ನೋಡಿಕೊಳ್ಳುವಲ್ಲಿ ತಂಡದ ಹೆಡ್ ಕೋಚ್ ರಿಕಿ ಪಾಂಟಿಂಗ್ ಪ್ರಯತ್ನಿಸುತ್ತಲೇ ಬಂದಿದ್ದಾರೆ. ಆರ್‌ಸಿಬಿ ಎದುರಿನ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ರಿಕಿ ಪಾಂಟಿಂಗ್, ಕುಲ್ದೀಪ್ ಯಾದವ್‌ಗೆ ಇನ್ನು ಯಾವತ್ತೂ ತಮ್ಮ ಬಳಿ ಕ್ಷಮಿಸಿ ಎಂದು ಕೇಳಬೇಡ ಎಂದು ಸಲಹೆ ನೀಡಿದ್ದಾರೆ.
ಕ್ರಿಕೆಟ್ ವಲಯದಲ್ಲಿ ರಿಕಿ ಪಾಂಟಿಂಗ್ ಓರ್ವ ಗೌರವಾನ್ವಿತ ಕೋಚ್ ಆಗಿ ಗುರುತಿಸಿಕೊಂಡಿದ್ದಾರೆ. ಹೀಗಿದ್ದೂ ಸದ್ಯದ ಪರಿಸ್ಥಿತಿಯಲ್ಲಿ ರಿಕಿ ಪಾಂಟಿಂಗ್ ಮಾರ್ಗದರ್ಶನದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದೆ. ಇನ್ನು ಇದೆಲ್ಲದರ ನಡುವೆ ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ನರ್ ಕುಲ್ದೀಪ್ ಯಾದವ್ ಉತ್ತಮ ಬೌಲಿಂಗ್ ಪ್ರದರ್ಶನ ತೋರಲು ವಿಫಲವಾಗಿದ್ದರು. ಇದರ ಬೆನ್ನಲ್ಲೇ ಕೋಚ್ ರಿಕಿ ಪಾಂಟಿಂಗ್ ಬಳಿ ಕ್ಷಮೆ ಕೋರಿದ್ದರು. ಇದೀಗ ಆರ್‌ಸಿಬಿ ಎದುರಿನ ಪಂದ್ಯ ಮುಕ್ತಾಯದ ಬಳಿಕ ಡ್ರೆಸ್ಸಿಗ್ ರೂಂನಲ್ಲಿ ಎಲ್ಲರ ಸಮ್ಮುಖದಲ್ಲೇ ಇನ್ಯಾವತ್ತು ನನ್ನ ಬಳಿ ಕ್ಷಮೆ ಕೇಳಬೇಡ ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.
IPL 2023 ಈ ಇಬ್ಬರ ಮೇಲೆ ಕಣ್ಣಿಡಿ; RCB vs CSK ಪಂದ್ಯದ ಭವಿಷ್ಯ ನುಡಿದ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್..!
" ನಿಜಕ್ಕೂ ಒಳ್ಳೆಯ ಬೌಲಿಂಗ್ ಪ್ರದರ್ಶನ ಮೂಡಿ ಬಂತು. ಅವರು ನಮಗೆ ಆರಂಭದಲ್ಲೇ ಸವಾಲೊಡ್ಡಿದರು. ಇನ್ನು ಸ್ಪೋಟಕ ಆರಂಭವನ್ನೇ ಪಡೆದರು. ನಮ್ಮ ಛಲ ಹಾಗೂ ಬದ್ದತೆ, ಈ ಪಂದ್ಯದಲ್ಲಿ ಕಂಡು ಬಂತು. ಕುಲ್ದೀಪ್ ಯಾದವ್ ಎಲ್ಲಿದ್ದೀರಾ?. ಕಳೆದ ಪಂದ್ಯದಲ್ಲಿನ ಪ್ರದರ್ಶನದ ಬಗ್ಗೆ ನಿರಾಸೆ ವ್ಯಕ್ತಪಡಿಸಿದ್ದು ನೀವೇ ತಾನೆ?. ಪಂದ್ಯ ಮುಕ್ತಾಯದ ಬಳಿಕ ನೀವು ನನ್ನ ಬಳಿ ಕ್ಷಮೆ ಕೇಳಿದ್ದೀರಿ ಅಲ್ವಾ. ನಾನು ನಿಮಗೆ ಏನು ಹೇಳುತ್ತೀನಿ ಅಂದ್ರೆ, ನೀವು ಎಂದೆಂದಿಗೂ ನನಗಾಗಲೇ ಅಥವಾ ಬೇರೆ ಯಾರಿಗಾದರೂ ಆಗಲಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪ್ರದರ್ಶನದ ಕುರಿತಂತೆ ಕ್ಷಮೆ ಕೇಳಬೇಡಿ. ಅದರ ಬದಲು ಮುಂದಿನ ಪಂದ್ಯದಲ್ಲಿ ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡುವತ್ತ ಗಮನಕೊಡಿ. ಇಂದು ನೀವು 4 ಓವರ್ ಬೌಲಿಂಗ್ ಮಾಡಿ ಕೇವಲ 23 ರನ್ ನೀಡಿ 2 ವಿಕೆಟ್ ಪಡೆದಿರಿ. ಇದೊಂದು ಬೌಲಿಂಗ್ ಸ್ಪೆಲ್ ಆಗಿತ್ತು. ಅಭಿನಂದನೆಗಳು ಎಂದು ರಿಕಿ ಪಾಂಟಿಂಗ್, ಲೆಗ್‌ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ಹುರಿದುಂಬಿಸಿದ್ದಾರೆ. ಈ ವಿಡಿಯೋವನ್ನು ಡೆಲ್ಲಿ ಕ್ಯಾಪಿಟಲ್ಸ್ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.
ಇನ್ನು ಇದೇ ವೇಳೆ ಆಸ್ಟ್ರೇಲಿಯಾದ ಮಾಜಿ ನಾಯಕ ಪಾಂಟಿಂಗ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಲ್ರೌಂಡರ್ ಲಲಿತ್ ಯಾದವ್ ಅವರ ಪ್ರದರ್ಶನದ ಬಗ್ಗೆಯೂ ಗುಣಗಾನ ಮಾಡಿದ್ದಾರೆ. ಆರ್‌ಸಿಬಿ ಎದುರಿನ ಪಂದ್ಯದಲ್ಲಿ ಲಲಿತ್ ಯಾದವ್, 4 ಓವರ್ ಬೌಲಿಂಗ್ ಮಾಡಿ ಕೇವಲ 29 ರನ್ ನೀಡಿದ್ದರು.
ರಿಷಭ್ ಪಂತ್ ಅನುಪಸ್ಥಿತಿಯಲ್ಲಿ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಡೇವಿಡ್ ವಾರ್ನರ್ ಮುನ್ನಡೆಸುತ್ತಿದ್ದು, ಆಡಿದ 5 ಪಂದ್ಯಗಳಲ್ಲೂ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿದೆ. ಇದೀಗ ಏಪ್ರಿಲ್ 20ರಂದು ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡದ ಎದುರಿನ ಪಂದ್ಯದಲ್ಲಾದರೂ ವಾರ್ನರ್ ಪಡೆ ಗೆಲುವಿನ ಹಳಿಗೆ ಮರಳುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.