
ಬೆಂಗಳೂರು: ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸಲು ರಾಜ್ಯ ಸರ್ಕಾರ ಷರತ್ತುಬದ್ಧ ಒಪ್ಪಿಗೆ ನೀಡಿದ್ದರೂ, ಬೆಂಗಳೂರಿನಲ್ಲಿ ಆಡಲು ಆರ್‌ಸಿಬಿ ಫ್ರಾಂಚೈಸಿಯು ಮನಸ್ಸು ಮಾಡುತ್ತಿಲ್ಲ. ಹಲವು ಸುತ್ತಿನ ಮಾತುಕತೆ ಬಳಿಕವೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಮನವಿಯನ್ನು ಆರ್‌ಸಿಬಿ ತಿರಸ್ಕರಿಸಿದೆ. ಅಲ್ಲದೆ, ಬೆಂಗಳೂರಿನಲ್ಲಿ ಆಡಲು ಕೆಲ ಷರತ್ತುಗಳನ್ನೂ ವಿಧಿಸಿದೆ ಎಂದು ಹೇಳಲಾಗುತ್ತಿದ್ದು, ಇದಕ್ಕೆ ಒಪ್ಪದಿದ್ದರೆ ಬೇರೆ ನಗರದಲ್ಲಿ ಆರ್‌ಸಿಬಿ ಪಂದ್ಯ ಆಡಬಹುದು ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಕಾರ್ಯದರ್ಶಿ ಸಂತೋಷ್ ಮೆನನ್, ವಕ್ತಾರ ವಿನಯ್ ಮೃತ್ಯುಂಜಯ ಮಾಹಿತಿ ನೀಡಿದರು. ದಯವಿಟ್ಟು ಬೆಂಗಳೂರಿನಲ್ಲೇ ಪಂದ್ಯಗಳನ್ನು ಆಡಿ ಎಂದು ಆರ್‌ಸಿಬಿಗೆ ಬಹಿರಂಗ ಮನವಿ ಮಾಡಿದ ಕೆಎಸ್‌ಸಿಎ, ತಂಡವು ತನ್ನ ಎಲ್ಲಾ 7 ಪಂದ್ಯಗಳನ್ನು ಇಲ್ಲೇ ಆಡುವ ಬಗ್ಗೆ ವಿಶ್ವಾಸವನ್ನೂ ವ್ಯಕ್ತಪಡಿಸಿತು.
‘ಸರ್ಕಾರದಿಂದ ನಾವು ಷರತ್ತುಬದ್ಧ ಅನುಮತಿ ಪಡೆದಿದ್ದೇವೆ. ಆದರೆ ಇಲ್ಲಿ ಆಡಬೇಕೇ, ಬೇಡವೇ ಎಂಬುದು ಆರ್‌ಸಿಬಿಗೆ ಬಿಟ್ಟಿದ್ದು. ಆರ್‌ಸಿಬಿ ಎಲ್ಲಾ 7 ಪಂದ್ಯ ಇಲ್ಲೇ ಆಡಬೇಕೆಂಬುದು ನಮ್ಮ ಕಳಕಳಿಯ ಮನವಿ. ಕ್ರಿಕೆಟ್‌ಗಾಗಿ ನಾವು ಎಲ್ಲವನ್ನೂ ಮಾಡಿದ್ದೇವೆ. ಈಗ ಅಭಿಮಾನಿಗಳಿಗಾಗಿ ಆರ್‌ಸಿಬಿ ಇಲ್ಲಿ ಬಂದು ಆಡಬೇಕು’ ಎಂದು ವೆಂಕಟೇಶ್ ಮನವಿ ಮಾಡಿದರು.
‘ಆರ್‌ಸಿಬಿ ಇಷ್ಟು ಎತ್ತರಕ್ಕೆ ಬೆಳೆದಿದ್ದೇ ಬೆಂಗಳೂರಿನಿಂದ, ಇಲ್ಲಿನ ಅಭಿಮಾನಿಗಳಿಂದ. ಹೀಗಾಗಿ ಅವರು ಇಲ್ಲೇ ಆಡಬೇಕು. ಚಿನ್ನಸ್ವಾಮಿಗೆ ಬಂದು ಆಡುವುದು ಮತ್ತು ಬೇರೆ ನಗರಕ್ಕೆ ಹೋಗದೇ ಇರುವುದು ಆರ್‌ಸಿಬಿಯ ಕರ್ತವ್ಯ. 17 ವರ್ಷದಲ್ಲಿ ಇಲ್ಲಿ ಗಳಿಸಿದ ನಿಷ್ಠಾವಂತ ಅಭಿಮಾನಿಗಳು ಬೇರೆಲ್ಲೂ ಸಿಗುವುದಿಲ್ಲ. ಬೇರೆ ಕಡೆ ಆಡಿದರೆ ಇಲ್ಲಿನಂತೆ ಪ್ರೇಕ್ಷಕರೂ ಸೇರುವುದಿಲ್ಲ’ ಎಂದು ವೆಂಕಟೇಶ್ ಹೇಳಿದರು.
ಆರ್‌ಸಿಬಿಯು ಬೆಂಗಳೂರಿನಲ್ಲಿ ಆಡುವ ನಿರ್ಧಾರವನ್ನು ಮುಂದಿನ 10 ದಿನಗಳಲ್ಲಿ ತಿಳಿಸಬಹುದು ಎಂದು ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ಹೇಳಿದ್ದಾರೆ. ‘ಆರ್‌ಸಿಬಿ ಕೆಲ ವಿಚಾರಗಳನ್ನು ಪಟ್ಟಿ ಮಾಡಿದೆ. ಅದರ ಬಗ್ಗೆ ನಾವು ಅವರಿಗೆ ಭರವಸೆ ನೀಡಿದ್ದೇವೆ. ಇಲ್ಲಿ ಆಡುವುದಕ್ಕೆ ಬಾಗಿಲು ತೆರೆದು ಕೊಟ್ಟಿದ್ದೇವೆ. ಆದರೆ ಅವರು ಕೆಲ ದಿನ ಸಮಯ ಕೇಳಿದ್ದಾರೆ. ಮುಂದಿನ 10 ದಿನಗಳಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಬಹುದು’ ಎಂದಿದ್ದಾರೆ.
ಆರ್‌ಸಿಬಿಗೆ ಸಮಸ್ಯೆ ಇರುವುದು ನಮ್ಮ ಜೊತೆಗಲ್ಲ, ಸರ್ಕಾರದ ಜೊತೆಗೆ ಎಂದು ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ಹೇಳಿದರು. ‘ಆರ್‌ಸಿಬಿ ಬೆಂಗಳೂರಿನಲ್ಲಿ ಆಡಲು ಉತ್ಸುಕವಾಗಿದೆ. ಆದರೆ ಫ್ರಾಂಚೈಸಿಗೆ ಕೆಲ ಆತಂಕಗಳಿವೆ. ಅವುಗಳನ್ನು ನಮ್ಮ ಜೊತೆಗೆ ಹಂಚಿಕೊಳ್ಳಲಿದ್ದಾರೆ. ಬಳಿಕ ನಾವು ಒಟ್ಟಿಗೆ ಕುಳಿತು ಪರಿಹರಿಸುತ್ತೇವೆ. ಬಹುಶಃ ಆರ್‌ಸಿಬಿಗೆ ರಾಜ್ಯ ಸರ್ಕಾರದ ಜೊತೆ ಸಮಸ್ಯೆ ಇದೆಯೇ ಹೊರತು ನಮ್ಮ ಜೊತೆಗೆ ಅಲ್ಲ ಎಂದು ಹೇಳಿದ್ದಾರೆ.
ಆರ್‌ಸಿಬಿ ಆಡದಿದ್ದರೆ ಬೇರೆ ಯಾವುದಾದರೂ ತಂಡಗಳು ಚಿನ್ನಸ್ವಾಮಿಯಲ್ಲಿ ಆಡಲಿದೆಯೇ ಎಂಬ ಪ್ರಶ್ನೆಗೆ ವೆಂಕಟೇಶ್ ಸ್ಪಷ್ಟ ಉತ್ತರ ನೀಡಿಲ್ಲ. ಆದರೆ, ‘ಈವರೆಗೂ ಯಾವುದೇ ತಂಡ ನಮ್ಮನ್ನು ಸಂಪರ್ಕಿಸಿಲ್ಲ. ಆರ್‌ಸಿಬಿ ಆಡಬೇಕೆಂಬುದು ನಮ್ಮ ಇಚ್ಚೇ. ಆಡದಿದ್ದರೆ ಮುಂದೆ ನೋಡೋಣ’ ಎಂದರು.
ಎಲ್ಲರಿಗಿಂತ ಮೊದಲು ತಿಳಿಯುವುದು ಇಲ್ಲೇ
ಸರ್ಕಾರ ಒಪ್ಪಿದರೂ ಚಿನ್ನಸ್ವಾಮಿಯಲ್ಲಿ ಆಡಲು ಆರ್‌ಸಿಬಿ ನಿರಾಸಕ್ತಿ ತೋರಿರುವ ಬಗ್ಗೆ ಹಾಗೂ ಅದಕ್ಕೆ ಕಾರಣಗಳು ಏನಿರಬಹುದು ಎಂಬುದರ ಬಗ್ಗೆ ‘ಕನ್ನಡಪ್ರಭ’ ಜ.15ರಂದೇ ವರದಿ ಪ್ರಕಟಿಸಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.