ಚಿನ್ನಸ್ವಾಮಿ ಸ್ಟೇಡಿಯಂ ಕ್ಯಾಂಟೀನ್‌ನಲ್ಲಿ ದುಪ್ಪಟ್ಟು ಮೊತ್ತಕ್ಕೆ ಐಪಿಎಲ್ ಟಿಕೆಟ್ ಮಾರುತ್ತಿದ್ದ ಖದೀಮ ಅರೆಸ್ಟ್! KSCA ಸದಸ್ಯನ ಕೈವಾಡ ಶಂಕೆ?

Published : Apr 17, 2026, 05:25 PM IST
M Chinnaswamy Stadium

ಸಾರಾಂಶ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಕ್ಯಾಂಟೀನ್ ನೌಕರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈತನಿಂದ 181 ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಹಿಂದೆ ಕೆಎಸ್‌ಸಿಎ ಸದಸ್ಯರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.

ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಭರ್ಜರಿಯಾಗಿ ಸಾಗುತ್ತಿದೆ. ಅದರಲ್ಲೂ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರಿನಲ್ಲಿ ಹಾಗೆಯೇ ತವರಿನಾಚೆ ಅದ್ಭುತ ಪ್ರದರ್ಶನ ತೋರುವ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸುತ್ತಾ ಬಂದಿದೆ. ಇನ್ನು ಎಂ ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದು ತಮ್ಮ ನೆಚ್ಚಿನ ತಂಡವನ್ನು ಬೆಂಬಲಿಸಬೇಕು ಎಂದು ತುದಿಗಾಲಿನಲ್ಲಿ ಅಭಿಮಾನಿಗಳು ನಿಂತಿರುತ್ತಾರೆ. ಆದರೆ ಟಿಕೆಟ್ ಆನ್‌ಲೈನ್‌ನಲ್ಲಿ ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಸೋಲ್ಡೌಟ್ ಆಗಿ ಬಿಡುತ್ತವೆ. ಆರ್‌ಸಿಬಿ ಫ್ರಾಂಚೈಸಿ ಹಾಗೂ ಕೆಎಸ್‌ಸಿಎ ಈ ಬಾರಿ ಐಪಿಎಲ್ ಟಿಕೆಟ್ ಮಾರಾಟದ ವೇಳೆ ಪಾರದರ್ಶಕತೆ ಕಾಯ್ದುಕೊಳ್ಳುತ್ತೇವೆ ಎಂದು ಹೇಳಿದ್ದು ಈಗ ಯಾಕೋ ಅಭಿಮಾನಿಗಳ ಕಿವಿ ಮೇಲೆ ಹೂವಿಟ್ಟಂತೆ ಅನಿಸಲಾರಂಭಿಸಿದೆ. ಯಾಕೆಂದರೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕ್ಯಾಂಟೀನ್ ಇಟ್ಟುಕೊಂಡಾತನ ಬಳಿ ರಾಶಿರಾಶಿ ಐಪಿಎಲ್ ಟಿಕೆಟ್‌ಗಳು ಪತ್ತೆಯಾಗಿದ್ದು, ಬೆಂಗಳೂರು ಸಿಸಿಬಿ ಪೊಲೀಸರು ಈ ಖದೀಮನನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಐಪಿಎಲ್ ಕಾಳಸಂತೆಯ ಟಿಕೆಟ್ ದಂಧೆ ಬಯಲಿಗೆಳೆದ ಸಿಸಿಬಿ

ಒಂದು ಕಡೆ ಒಂದು ಐಪಿಎಲ್ ಟಿಕೆಟ್ ಸಿಕ್ಕರೇ ಸಾಕಪ್ಪ ಎಂದು ಕಾದು ಕುಳಿತು, ಆನ್‌ಲೈನ್‌ನಲ್ಲಿ ಐಪಿಎಲ್ ಮ್ಯಾಚ್ ಟಿಕೆಟ್ ಖರೀದಿಸಲು ಸಾವಿರಾರು ಮಂದಿ ತುದಿಗಾಲಿನಲ್ಲಿ ನಿಂತಿರುತ್ತಾರೆ. ಹೀಗಿರುವಾಗಲೇ ಕಾಳಸಂತೆಯಲ್ಲಿ ಐಪಿಎಲ್ ಟಿಕೆಟ್ ಮಾರಾಟ ಮಾಡುವವರ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸಿಸಿಬಿ ಪೊಲೀಸರು ಬಯಲಿಗೆಳೆದಿದ್ದಾರೆ. ಇನ್ನೂ ಅಚ್ಚರಿಯ ಸಂಗತಿಯೆಂದರೆ, ಚಿನ್ನಸ್ವಾಮಿ ಸ್ಟೇಡಿಯಂ ಕ್ಯಾಂಟೀನ್ ನೌಕರನ ಮೂಲಕವೇ ದುಬಾರಿ ಬೆಲೆಗೆ ಐಪಿಎಲ್ ಟಿಕೆಟ್ ಮಾರಾಟಕ್ಕೆ ಕೆಎಸ್‌ಸಿಎ ಸದಸ್ಯನೇ ಮುಂದಾಗಿದ್ದಾರೆ ಎಂದು ವರದಿಯಾಗಿದೆ.

 

ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ

ಹೌದು, ಇಂದು ಚಿನ್ನಸ್ವಾಮಿ ಸ್ಟೇಡಿಯಂ ಬಳಿಯಲ್ಲಿರುವ ಶ್ರೀ ಲಕ್ಷ್ಮಿ ಕೇಟರರ್ಸ್‌ನ 49 ವರ್ಷದ ಚಂದ್ರಶೇಖರ್ ಪಿ ಎಂಬಾತನನ್ನು ಸೆಂಟ್ರಲ್ ಕ್ರೈಮ್ ಬ್ರಾಂಚ್‌ನ ಪೊಲೀಸರ್ ಐಪಿಎಲ್ ಬ್ಲಾಕ್ ಟಿಕೆಟ್ ಮಾರಾಟ ಮಾಡುವಾಗ ರೆಡ್‌ ಹ್ಯಾಂಡ್‌ ಆಗಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ. ಆರ್‌ಸಿಬಿ ಹಾಗೂ ಲಖನೌ ಸೂಪರ್ ಜೈಂಟ್ಸ್ ನಡುವೆ ಇತ್ತೀಚೆಗಷ್ಟೇ ನಡೆದ ಪಂದ್ಯದ ಟಿಕೆಟ್‌ಗಳನ್ನು 15,000 ದಿಂದ 19,000 ರುಪಾಯಿ ವರೆಗೆ ಒಂದು ಟಿಕೆಟ್ ಮಾರಾಟ ಮಾಡಿದ್ದಾರೆ. ಒಟ್ಟಾರೆ ಈತ 181 ಟಿಕೆಟ್‌ಗಳಿಂದ 17.52 ಲಕ್ಷ ರುಪಾಯಿ ಗಳಿಸಿದ್ದಾನೆ ಎನ್ನಲಾಗುತ್ತಿದೆ.

ಮೇಲ್ನೋಟಕ್ಕೆ ಈಗ ಕ್ಯಾಂಟೀನ್ ನೌಕರ ಸಿಕ್ಕಿಬಿದ್ದಿದ್ದು, ಇದರ ಹಿಂದಿರುವ ಕಾಣದ ಕೈಗಳನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಬೇಕಿದೆ. ಇದಷ್ಟೇ ಅಲ್ಲದೇ ಕೆಎಸ್‌ಸಿಎ ಚುನಾವಣೆ ವೇಳೆಯಲ್ಲಿ ನಾವು ಪಾರದರ್ಶಕತೆ ಕಾಯ್ದುಕೊಳ್ಳುತ್ತೇವೆ ಎಂದು ಪುನರುಚ್ಚಿಸುತ್ತಲೇ ಬಂದಿರುವ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಈ ಬಗ್ಗೆ ಏನ್ ಹೇಳ್ತಾರೆ ಕಾದು ನೋಡಬೇಕಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸತತ ಸೋಲಿನ ಸುಳಿಯಲ್ಲಿರುವ ಮುಂಬೈ ಇಂಡಿಯನ್ಸ್‌ನಲ್ಲಿ ಎಲ್ಲವೂ ಸರಿಯಿಲ್ಲ! ಅನುಮಾನ ಇದ್ರೆ ಈ ವಿಡಿಯೋ ನೋಡಿ
Breaking: ವೈದ್ಯಕೀಯ ದಾಖಲೆ ತೋರಿಸಿ ಬ್ಯಾನ್‌ನಿಂದ ಬಚಾವ್‌ ಆದ ರಾಜಸ್ಥಾನ ರಾಯಲ್ಸ್‌ ಮ್ಯಾನೇಜರ್‌, ಬಿಸಿಸಿಐನಿಂದ ಭಾರೀ ದಂಡ