ಶುಭ್‌ಮನ್ ಗಿಲ್‌ಗೆ ಇನ್ನೂ 2 ಮ್ಯಾಚ್‌ನಲ್ಲಿ ಅವಕಾಶ ಕೊಡಿ: ಅಶ್ವಿನ್ ಅಚ್ಚರಿಯ ಹೇಳಿಕೆ

Published : Dec 15, 2025, 03:28 PM IST
Sanju Samson Gill

ಸಾರಾಂಶ

ಓಪನರ್ ಆಗಿ ನಿರಾಸೆ ಮೂಡಿಸುತ್ತಿರುವ ಶುಭಮನ್ ಗಿಲ್‌ಗೆ ದಕ್ಷಿಣ ಆಫ್ರಿಕಾ ವಿರುದ್ಧದ ಮುಂದಿನ 2 ಪಂದ್ಯಗಳಲ್ಲಿ ಅವಕಾಶ ನೀಡಬೇಕು ಎಂದು ಮಾಜಿ ಆಟಗಾರ ಆರ್. ಅಶ್ವಿನ್ ಹೇಳಿದ್ದಾರೆ. ಒಂದು ವೇಳೆ ಆ ಪಂದ್ಯಗಳಲ್ಲೂ ಗಿಲ್ ವಿಫಲವಾದರೆ, ಅವರನ್ನು ತಂಡದಿಂದ ಕೈಬಿಡುವ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ.

ಚೆನ್ನೈ: ಓಪನರ್ ಆಗಿ ನಿರಾಸೆ ಮೂಡಿಸುತ್ತಿದ್ದರೂ, ಭಾರತದ ಉಪನಾಯಕ ಶುಭಮನ್ ಗಿಲ್‌ಗೆ ದಕ್ಷಿಣ ಆಫ್ರಿಕಾ ವಿರುದ್ಧದ ಮುಂದಿನ ಎರಡು ಪಂದ್ಯಗಳಲ್ಲಿ ಅವಕಾಶ ನೀಡಬೇಕು ಎಂದು ಮಾಜಿ ಭಾರತೀಯ ಆಟಗಾರ ಆರ್. ಅಶ್ವಿನ್ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಎರಡು ಪಂದ್ಯಗಳಲ್ಲೂ ಶುಭ್‌ಮನ್ ಗಿಲ್ ಫಾರ್ಮ್‌ಗೆ ಮರಳಲು ವಿಫಲವಾದರೆ, ಅವರನ್ನು ತಂಡದಿಂದ ಕೈಬಿಡುವ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.

ಈಗ ಗಿಲ್ ಅವರನ್ನು ಕೈಬಿಡುವುದು ಸರಿಯಲ್ಲ. ಯಾಕಂದ್ರೆ, ಗಿಲ್ ಓಪನರ್ ಮಾತ್ರವಲ್ಲ, ಉಪನಾಯಕ ಕೂಡ. ಸರಣಿಯ ಮಧ್ಯದಲ್ಲಿ ಉಪನಾಯಕನನ್ನು ಕೈಬಿಡುವುದು ಒಳ್ಳೆಯ ಸಂದೇಶ ನೀಡುವುದಿಲ್ಲ. ಈ ಪರಿಸ್ಥಿತಿಯಲ್ಲಿ, ಶುಭ್‌ಮನ್ ಗಿಲ್‌ಗೆ ಮುಂದಿನ ಎರಡು ಪಂದ್ಯಗಳಲ್ಲಿ ಓಪನರ್ ಆಗಿ ಮಿಂಚಲು ಅವಕಾಶ ನೀಡಬೇಕು. ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲೂ ಮಿಂಚಲು ವಿಫಲವಾದರೆ, ಗಿಲ್ ಅವರನ್ನು ಬದಲಾಯಿಸುವ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ ಎಂದು ಅಶ್ವಿನ್ ಹೇಳಿದ್ದಾರೆ.

ವಿಶ್ವಕಪ್‌ಗೆ ಇನ್ನು ಎರಡು ತಿಂಗಳು ಮಾತ್ರ ಬಾಕಿ ಇದೆ. ಅದಕ್ಕೂ ಮುನ್ನ ಭಾರತ ತನ್ನ ಅತ್ಯುತ್ತಮ ಇಲೆವೆನ್ ಅನ್ನು ಇನ್ನೂ ಕಂಡುಕೊಂಡಿಲ್ಲ ಎಂಬುದು ಒಳ್ಳೆಯ ಸಂಕೇತವಲ್ಲ. ವಿಶ್ವಕಪ್‌ಗೂ ಮುನ್ನವಾದರೂ ಅತ್ಯುತ್ತಮ ಪ್ಲೇಯಿಂಗ್ ಇಲೆವೆನ್ ಅನ್ನು ಕಂಡುಹಿಡಿಯಬೇಕಿದೆ. ಬೌಲರ್‌ಗಳ ವಿಷಯದಲ್ಲಿ ಯಾವುದೇ ಅನುಮಾನವಿದೆ ಎಂದು ನನಗೆ ಅನಿಸುವುದಿಲ್ಲ. ಬೌಲರ್‌ಗಳ ಬಗ್ಗೆ ಇನ್ನು ಚರ್ಚೆ ಅಗತ್ಯವಿಲ್ಲ. ಹರ್ಷಿತ್ ರಾಣಾ ಕೂಡ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಪ್ರಾರಂಭಿಸಿರುವುದರಿಂದ ಬೌಲರ್‌ಗಳ ವಿಷಯದಲ್ಲಿ ಯಾವುದೇ ಅನುಮಾನವಿಲ್ಲ.

ವಿಶ್ವಕಪ್‌ಗೂ ಮುನ್ನ ಇರುವ ಪ್ರಮುಖ ಪ್ರಶ್ನೆಯೆಂದರೆ ಶುಭಮನ್ ಗಿಲ್ ರನ್ ಗಳಿಸುತ್ತಿಲ್ಲ ಎಂಬುದು. ಗಿಲ್ ಮುಂದುವರಿಯಬೇಕೇ ಅಥವಾ ಸಂಜು ಅವರನ್ನು ಓಪನರ್ ಆಗಿ ಕರೆತರಬೇಕೇ ಎಂಬುದು ಪ್ರಮುಖ ಚರ್ಚೆಯ ವಿಷಯ. ತಂಡದಲ್ಲಿ ಓಪನರ್ ಸ್ಥಾನವನ್ನು ಉಳಿಸಿಕೊಳ್ಳಲು ಮುಂಬರುವ ಪಂದ್ಯಗಳಲ್ಲಿ ಗಿಲ್ ಕಡಿಮೆ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿ ಉಳಿದುಕೊಳ್ಳಲು ಪ್ರಯತ್ನಿಸುತ್ತಾರೆಯೇ ಎಂಬುದು ನನ್ನ ಇನ್ನೊಂದು ಆತಂಕ. ಅದು ಎಂದಿಗೂ ಆಗಬಾರದು ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ. ಈ ವರ್ಷ ಟಿ20 ಕ್ರಿಕೆಟ್‌ನಲ್ಲಿ ಓಪನರ್ ಆಗಿ ಮರಳಿದ ಶುಭಮನ್ ಗಿಲ್ 24.25 ಸರಾಸರಿ ಮತ್ತು 137.26 ಸ್ಟ್ರೈಕ್ ರೇಟ್‌ನಲ್ಲಿ 291 ರನ್ ಗಳಿಸಿದ್ದಾರೆ. ಒಂದೇ ಒಂದು ಅರ್ಧಶತಕವನ್ನೂ ಗಳಿಸಲು ಗಿಲ್‌ಗೆ ಸಾಧ್ಯವಾಗಿಲ್ಲ. ಅದೇ ಸಮಯದಲ್ಲಿ, ಓಪನರ್ ಆಗಿ ಮೂರು ಶತಕಗಳನ್ನು ಬಾರಿಸಿದ ಸಂಜು ಸ್ಯಾಮ್ಸನ್ ಅವರನ್ನು ಹೊರಗಿಟ್ಟು ಗಿಲ್‌ಗೆ ಓಪನರ್ ಆಗಿ ಅವಕಾಶ ನೀಡಲಾಗಿದೆ. ಇದು ಚರ್ಚೆಗೆ ಗ್ರಾಸವಾಗಿದೆ.

ಮುಂದುವರೆದ ಗಿಲ್ ನೀರಸ ಪ್ರದರ್ಶನ

ಇನ್ನು ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಎರಡು ಎಸೆತಗಳಲ್ಲಿ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದ ಶುಭ್‌ಮನ್ ಗಿಲ್, ಮುಲ್ಲಾನ್‌ಪುರದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಖಾತೆ ತೆರೆಯದೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದ್ದರು. ಹೀಗಾಗಿ ಎಲ್ಲರ ಚಿತ್ತ ಮೂರನೇ ಟಿ20 ಪಂದ್ಯ ಮೇಲೆ ನೆಟ್ಟಿತ್ತು. ಮೂರನೇ ಟಿ20 ಪಂದ್ಯದಲ್ಲಿ ಗಿಲ್ ಎರಡಂಕಿ ಮೊತ್ತ ದಾಖಲಿಸಿದರಾದರೂ, ಅವರ ಬ್ಯಾಟಿಂಗ್ ಟಿ20 ಕ್ರಿಕೆಟ್‌ಗೆ ಹೇಳಿ ಮಾಡಿಸಿದಂತೆ ಇರಲಿಲ್ಲ. ಗಿಲ್ 28 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 28 ರನ್ ಗಳಿಸಿ ಮಾರ್ಕೊ ಯಾನ್ಸನ್ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್ ಆಗಿ ಪೆವಿಲಿಯನ್ ಸೇರಿದ್ದರು.

ಮುಂದುವರೆದ ಸಂಜು ಸ್ಯಾಮ್ಸನ್ ವನವಾಸ:

ಇನ್ನು ಕಳೆದೊಂದು ವರ್ಷದಿಂದ ಭಾರತ ಟಿ20 ತಂಡದ ಅತ್ಯಂತ ನಂಬಿಗಸ್ಥ ಆರಂಭಿಕನಾಗಿ ಗುರುತಿಸಿಕೊಂಡಿದ್ದ ಕೇರಳ ಮೂಲದ ಸಂಜು ಸ್ಯಾಮ್ಸನ್ ಅವರು, ಗಿಲ್ ಟೀಂ ಇಂಡಿಯಾ ವಾಪಾಸ್ಸಾತಿ ಬಳಿಕ ಬೆಂಚ್ ಕಾಯಿಸಲಾರಂಭಿಸಿದ್ದಾರೆ. ಏಷ್ಯಕಪ್‌ನಲ್ಲಿ ಗಿಲ್ ಆರಂಭಿಕನಾಗಿ ಕಣಕ್ಕಿಳಿದಿದ್ದರಿಂದ ಸಂಜು ಮಧ್ಯಮ ಕ್ರಮಾಂಕಕ್ಕೆ ತಳ್ಳಲ್ಪಟ್ಟರು. ಇದೀಗ ಸಂಜು ಆಡುವ ಹನ್ನೊಂದರ ಬಳಗದಿಂದಲೇ ಹೊರಬಿದ್ದಿದ್ದಾರೆ. ಇದರ ಬೆನ್ನಲ್ಲೇ ಗಿಲ್ ಕಳಪೆ ಫಾರ್ಮ್ ಹೊರತಾಗಿಯೂ ಆತನಿಗೆ ಹೆಚ್ಚಿನ ಅವಕಾಶ ನೀಡುತ್ತಿರುವುದರ ಬಗ್ಗೆ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇವತ್ತು 10/10 ಎಂದ ಮಾಸ್ಟರ್ ಬ್ಲಾಸ್ಟರ್! ಸಚಿನ್‌ ತೆಂಡೂಲ್ಕರ್‌ಗೆ ಅಪರೂಪದ ಗಿಫ್ಟ್ ಕೊಟ್ಟ ಮೆಸ್ಸಿ!
ನಾನು ಫಾರ್ಮ್ ಕಳೆದುಕೊಂಡಿಲ್ಲ, ಆದ್ರೆ..! 3ನೇ ಟಿ20 ಪಂದ್ಯದ ಗೆಲುವಿನ ಬೆನ್ನಲ್ಲೇ ಸೂರ್ಯ ಅಚ್ಚರಿ ಹೇಳಿಕೆ!