ಕರ್ನಾಟಕ ತಂಡಕ್ಕೆ, 2ನೇ ಪಂದ್ಯಕ್ಕೂ ಮುನ್ನ ಭಾರೀ ಹಿನ್ನಡೆ| ಗೌತಮ್, ಪವನ್ ಗಾಯಾಳು
ಬೆಂಗಳೂರು[ಡಿ.15]: 2019-20ರ ರಣಜಿ ಟ್ರೋಫಿಯಲ್ಲಿ ತಮಿಳುನಾಡು ವಿರುದ್ಧ ರೋಚಕ ಗೆಲುವಿನೊಂದಿಗೆ ಶುಭಾರಂಭ ಮಾಡಿರುವ ಕರ್ನಾಟಕ ತಂಡಕ್ಕೆ, 2ನೇ ಪಂದ್ಯಕ್ಕೂ ಮುನ್ನ ಭಾರೀ ಹಿನ್ನಡೆ ಉಂಟಾಗಿದೆ. ದಿಂಡಿಗಲ್‌ನಲ್ಲಿ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ 14 ವಿಕೆಟ್ ಕಬಳಿಸಿ ಗೆಲುವಿನ ರೂವಾರಿಯಾಗಿದ್ದ ಆಲ್ರೌಂಡರ್ ಕೆ.ಗೌತಮ್, ಡಿ.17ರಿಂದ ಹುಬ್ಬಳ್ಳಿಯಲ್ಲಿ ಉತ್ತರ ಪ್ರದೇಶ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಗೌತಮ್ ಬಲಗಾಲಿನ ಮೂಳೆ ಸಣ್ಣ ಪ್ರಮಾಣದಲ್ಲಿ ಮುರಿದಿದ್ದು, ಅವರು ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ಶನಿವಾರ ಕೆಎಸ್‌ಸಿಎ ತನ್ನ ಪ್ರಕಟಣೆಯಲ್ಲಿ ತಿಳಿಸಿತು.
ಪಂದ್ಯಕ್ಕಾಗಿ 15 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಎಡಗೈ ಬ್ಯಾಟ್ಸ್‌ಮನ್ ಪವನ್ ದೇಶಪಾಂಡೆ ಸಹ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ತಂಡದಿಂದ ಹೊರಬಿದ್ದಿದ್ದಾರೆ. ಕರುಣ್ ನಾಯರ್ ತಂಡದ ನಾಯಕನಾಗಿ ಮುಂದುವರಿಯಲಿದ್ದು, ಹಿರಿಯ ವೇಗಿ ಅಭಿಮನ್ಯು ಮಿಥುನ್ ತಂಡಕ್ಕೆ ಮರಳಿದ್ದಾರೆ.
undefined
ಟಿ20 ವೇಳೆ ಗಾಯ:
ಮುಷ್ತಾಕ್ ಅಲಿ ಟಿ20 ಟೂರ್ನಿ ವೇಳೆಯೇ ಗೌತಮ್ ಕಾಲಿಗೆ ಗಾಯವಾಗಿತ್ತು. ಆದರೆ ರಣಜಿ ಟೂರ್ನಿ ಆರಂಭವಾಗುವ ವೇಳೆಗೆ ಅವರು ಚೇತರಿಸಿಕೊಂಡಿದ್ದರು. ಆದರೆ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಬೌಲ್ ಮಾಡಿದ 173 ಓವರ್‌ಗಳ ಪೈಕಿ ಗೌತಮ್ ಒಬ್ಬರೇ 71 ಓವರ್ ಎಸೆದಿದ್ದರು. ಜತೆಗೆ ದೀರ್ಘಕಾಲ ಬ್ಯಾಟಿಂಗ್ ಸಹ ನಡೆಸಿದ್ದರು. ಕಾಲಿನ ಮೇಲೆ ಹೆಚ್ಚು ಒತ್ತಡ ಬಿದ್ದ ಕಾರಣ, ಮತ್ತೆ ನೋವು ಕಾಣಿಸಿಕೊಂಡಿದ್ದು ಅವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ಕೆಎಸ್‌ಸಿಎ ಅಧಿಕಾರಿ ತಿಳಿಸಿದ್ದಾರೆ.
ತಾರಾ ಆಟಗಾರರ ಕೊರತೆ: ವಿಂಡೀಸ್ ವಿರುದ್ಧ ಏಕದಿನ ಸರಣಿಯನ್ನಾಡಲು ಮಯಾಂಕ್ ಅಗರ್‌ವಾಲ್, ಕೆ.ಎಲ್.ರಾಹುಲ್ ಹಾಗೂ ಮನೀಶ್ ಪಾಂಡೆ ಭಾರತ ತಂಡದೊಂದಿಗಿದ್ದಾರೆ. ಗೌತಮ್ ಹಾಗೂ ಪವನ್ ಗಾಯಗೊಂಡು ಹೊರಬಿದ್ದಿದ್ದಾರೆ. ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಪ್ರಮುಖ ಆಟಗಾರರಿಲ್ಲದೆ ಕಣಕ್ಕಿಳಿಯಲಿದೆ.
ತಂಡ:
ಕರುಣ್ ನಾಯರ್ (ನಾಯಕ), ದೇವದತ್ ಪಡಿಕ್ಕಲ್, ಡಿ.ನಿಶ್ಚಲ್, ಆರ್.ಸಮಥ್‌ರ್, ಅಭಿಷೇಕ್ ರೆಡ್ಡಿ, ರೋಹನ್ ಕದಂ, ಪ್ರವೀಣ್ ದುಬೆ, ಶ್ರೇಯಸ್ ಗೋಪಾಲ್, ಜೆ.ಸುಚಿತ್, ಶರತ್ ಬಿ.ಆರ್, ಶರತ್ ಶ್ರೀನಿವಾಸ್, ರೋನಿತ್ ಮೋರೆ, ಡೇವಿಡ್ ಮಥಾಯಿಸ್, ವಿ.ಕೌಶಿಕ್, ಅಭಿಮನ್ಯು ಮಿಥುನ್.